ಮಂಗಳವಾರ, ಜೂನ್ 28, 2022
25 °C
ಶೇಖ್‌ಸಾಬ್‌ ಗಣಿಯಿಂದ

ಅಕ್ರಮವಾಗಿ ಅದಿರು ತೆಗೆದ ಆರೋಪ: ಜನಾರ್ದನರೆಡ್ಡಿ ವಿರುದ್ಧ ದೋಷಾರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗಣಿ ಉದ್ಯಮಿ ಶೇಖ್‌ಸಾಬ್‌ ಅವರಿಗೆ ಸೇರಿದ್ದ ಗಣಿಯನ್ನು ಬಲವಂತವಾಗಿ ನಿಯಂತ್ರಣಕ್ಕೆ ಪಡೆದು ಅಕ್ರಮವಾಗಿ ಅದಿರು ತೆಗೆದು, ಸಾಗಣೆ ಮಾಡಿ, ಭಾಗಶಃ ಮಾರಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಜನಾರ್ದನರೆಡ್ಡಿ ಹಾಗೂ ಅವರ ಇಬ್ಬರು ಸಹಚರರ ವಿರುದ್ಧ ಲೋಕಾಯುಕ್ತ ವಿಶೇಷ ತನಿಖಾ ತಂಡ (ಎಸ್ಐಟಿ) ಇಲ್ಲಿನ 82ನೇ ಸಿಸಿಎಚ್‌ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದೆ.

ಜನಾರ್ದನರೆಡ್ಡಿ, ದೇವಿ ಎಂಟರ್‌ಪ್ರೈಸಸ್‌ನ ಕೆ.ಎಂ.ಆಲಿಖಾನ್‌ ಹಾಗೂ ಶ್ರೀ ಮಿನರಲ್ಸ್‌ನ ಬಿ.ವಿ.ಶ್ರೀನಿವಾಸರೆಡ್ಡಿ ಮೂವರು ಸೇರಿ ಒಳಸಂಚು ಮಾಡಿ ಶೇಖ್‌ಸಾಬ್‌ ಅವರಿಗೆ ಸೇರಿದ ಗಣಿ ಪ್ರದೇಶದಿಂದ ಬಲವಂತವಾಗಿ 1,69,263 ಟನ್ ಅದಿರನ್ನು ಅಕ್ರಮವಾಗಿ ತೆಗೆದು, ಪರವಾನಗಿ ಪಡೆಯದೆ ಪಾಪಿನಾಯಕನಹಳ್ಳಿಯ ಖಾಸಗಿ ಸ್ಥಳಕ್ಕೆ ಸಾಗಿಸಿದ್ದರು. ಇದನ್ನು ಗಣಿ ಹಾಗೂ ಭೂವಿಜ್ಞಾನ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.

ಜಿಪಿಎ ಮೂಲಕ ರೆಡ್ಡಿ, ಆಲಿಖಾನ್‌ ಅವರನ್ನು ಶೇಖ್‌ಸಾಬ್‌ ಪಾಲುದಾರರಾಗಿ ಸೇರ್ಪಡೆ ಮಾಡಿದ್ದರು. ಇವರ ಗಣಿ ಪ್ರದೇಶದಿಂದ ಅಕ್ರಮವಾಗಿ ಅದಿರು ತೆಗೆದು ಸಾಗಿಸಿದ್ದರು. ಅಲ್ಲದೆ, ಪರ್ಮಿಟ್‌ ಪಡೆಯದೆ ಕೆಲವು ಉದ್ಯಮಿಗಳಿಗೆ ಭಾಗಶಃ ಅದಿರನ್ನು ಮಾರಾಟ ಮಾಡಿದ್ದರು. ಇದರಿಂದ ರಾಜ್ಯ ಸರ್ಕಾರಕ್ಕೆ ₹ 25 ಲಕ್ಷನಷ್ಟ ಮಾಡಲಾಗಿದೆ ಎಂದು ದೋಷಾರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.

ಲೋಕಾಯುಕ್ತ ‍ಪೊಲೀಸ್‌ ಠಾಣೆಯಲ್ಲಿ ಮೊದಲಿಗೆ ಪ್ರಕರಣ ದಾಖಲಾಗಿತ್ತು. ಆನಂತರ ಎಸ್‌ಐಟಿ ತನಿಖೆ ನಡೆಸಿತ್ತು. ಮೂವರೂ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 379ರ ಅನ್ವಯ ಕಳವು, 420 ರ ಅನ್ವಯ ವಂಚನೆ ಹಾಗೂ 120 (ಬಿ) ಅನ್ವಯ ಒಳಸಂಚು ಆರೋಪ ಮಾಡಲಾಗಿದೆ ಎಂದು ಎಸ್‌ಐಟಿ ಐಜಿಪಿ ಚಂದ್ರಶೇಖರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು