ಶನಿವಾರ, ಆಗಸ್ಟ್ 24, 2019
28 °C
ತನಿಖೆ ಚುರುಕು

ಐಎಂಎ ವಂಚನೆ: ನಾಲ್ಕು ಗಂಟೆ ಐಪಿಎಸ್‌ ಅಧಿಕಾರಿಯ ವಿಚಾರಣೆ

Published:
Updated:

ಬೆಂಗಳೂರು: ‘ಐಎಂಎ ಸಮೂಹ’ ಕಂಪನಿ ವಿರುದ್ಧದ ವಂಚನೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಎಸ್‌ಐಟಿ ಅಧಿಕಾರಿಗಳು, ಐಪಿಎಸ್ ಅಧಿಕಾರಿ ಅಜಯ್ ಹಿಲೋರಿ ಅವರನ್ನು ಶುಕ್ರವಾರ ಸುದೀರ್ಘ ವಿಚಾರಣೆಗೆ ಒಳಪಡಿಸಿದರು.

ಕೆಎಸ್‌ಆರ್‌ಪಿ ಒಂದನೇ ಬೆಟಾಲಿಯನ್‌ ಕಮಾಂಡೆಂಟ್‌ ಆಗಿರುವ ಹಿಲೋರಿ ಅವರಿಗೆ ವಿಚಾರಣೆಗೆ ಬರುವಂತೆ ಇತ್ತೀಚೆಗೆ ನೋಟಿಸ್ ನೀಡಲಾಗಿತ್ತು. ಅದರಂತೆ ಬೆಳಿಗ್ಗೆ 11.30ರ ಸುಮಾರಿಗೆ ಅವರು ವಿಚಾರಣೆಗೆ ಹಾಜರಾದರು. ವಂಚನೆ ಪ್ರಕರಣ ಸಂಬಂಧ ವಿಚಾರಣೆ ಎದುರಿಸಿದ ಮೊದಲ ಐಪಿಎಸ್‌ ಅಧಿಕಾರಿ ಹಿಲೋರಿ ಅವರಾಗಿದ್ದಾರೆ. 

ಕಾರ್ಲಟನ್‌ನಲ್ಲಿರುವ ಎಸ್‌ಐಟಿ ಕಚೇರಿಯಲ್ಲಿ ತಂಡದ ಮುಖ್ಯಸ್ಥ ಬಿ.ಆರ್. ರವಿಕಾಂತೇಗೌಡ ಹಾಗೂ ಡಿಸಿಪಿ ಎಸ್‌.ಗಿರೀಶ್ ಅವರು ಹಿಲೋರಿ ಅವರನ್ನು ವಿಚಾರಣೆಗೆ ಒಳಪಡಿಸಿದರು. ಮಧ್ಯಾಹ್ನ 2ರವರೆಗೂ ವಿಚಾರಣೆ ನಡೆಯಿತು. ಅಗತ್ಯವಿದ್ದರೆ ಪುನಃ ವಿಚಾರಣೆಗೆ ಬರುವಂತೆಯೂ ತನಿಖಾಧಿಕಾರಿಗಳು ಹೇಳಿ ಕಳುಹಿಸಿರುವುದಾಗಿ ಗೊತ್ತಾಗಿದೆ.

ಪೂರ್ವ ವಿಭಾಗದ ಡಿಸಿಪಿ ಆಗಿದ್ದ ಹಿಲೋರಿ: ‘ಐಎಂಎ ಸಮೂಹ’ ಕಂಪನಿ ಮಾಲೀಕ ಮನ್ಸೂರ್ ಖಾನ್, ಶಿವಾಜಿನಗರದಲ್ಲಿ ಪ್ರಧಾನ ಕಚೇರಿ ಹೊಂದಿದ್ದರು. ಅದು ಕಮರ್ಷಿಯಲ್ ಸ್ಟ್ರೀಟ್ ಠಾಣೆ ವ್ಯಾಪ್ತಿಗೆ ಬರುತ್ತದೆ. ಆ ಠಾಣೆ ಪೂರ್ವ ವಿಭಾಗದ ವ್ಯಾಪ್ತಿಯಲ್ಲಿದ್ದು, ಡಿಸಿಪಿ ಆಗಿ ಅಜಯ್ ಹಿಲೋರಿ ಕೆಲಸ ಮಾಡಿದ್ದರು’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

‘ಐಎಂಎ ಕಂಪನಿಯ ಅಕ್ರಮ ಕುರಿತು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ಮಾರುಕಟ್ಟೆ ಗುಪ್ತಚರ ವಿಭಾಗದ ಅಧಿಕಾರಿಗಳು, ಕೆಲ ದಾಖಲೆಗಳನ್ನು ಕೊಟ್ಟಿದ್ದರು. ಅಷ್ಟಾದರೂ ಕಂಪನಿ ಬಗ್ಗೆ ಸರಿಯಾಗಿ ವಿಚಾರಣೆ ನಡೆಸದೆ ಕಂಪನಿಗೆ ಕ್ಲೀನ್‌ ಚಿಟ್‌ ಕೊಟ್ಟು, ಪ್ರಕರಣವನ್ನು ಮುಕ್ತಾಯಗೊಳಿಸಲಾಗಿತ್ತು’ ಎಂದು ಹೇಳಿವೆ.

ಜಯದೇವ್ ಆಸ್ಪತ್ರೆಗೆ ಮನ್ಸೂರ್

‘ಮನ್ಸೂರ್ ಖಾನ್, ‘ಎದೆ ನೋವು’ ಎಂದು ಹೇಳಿದ್ದರಿಂದಾಗಿ ಅವರನ್ನು ಗುರುವಾರ ಮಧ್ಯಾಹ್ನ ಜಯದೇವ ಆಸ್ಪತ್ರೆಗೆ ಕರೆತರಲಾಗಿದೆ. 

ಮನ್ಸೂರ್ ಅವರನ್ನು ಗುರುವಾರವೇ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿತ್ತು. ರಾತ್ರಿಯಿಡಿ ವೈದ್ಯಕೀಯ ತಪಾಸಣೆ ನಡೆಸಲಾಗಿತ್ತು.

ಶುಕ್ರವಾರ ಬೆಳಿಗ್ಗೆ ಎದ್ದೊಡನೆ, ‘ಎದೆ ನೋವು’ ಎಂದು ಮನ್ಸೂರ್ ಖಾನ್ ಹೇಳಿದ್ದರು. ಜೈಲಿನ ಅಧಿಕಾರಿಗಳೇ ಬಿಗಿ ಭದ್ರತೆಯಲ್ಲಿ ಅವರನ್ನು ಜಯದೇವ ಆಸ್ಪತ್ರೆಗೆ ಕರೆತಂದರು.

ಎಸ್‌ಐಟಿ ಅಧಿಕಾರಿಗಳು, ‘ಮನ್ಸೂರ್ ಖಾನ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಆರೋಗ್ಯ ಸಮಸ್ಯೆ ಉಂಟಾಗಿರುವ ಮಾಹಿತಿ ಸಿಕ್ಕಿದೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದ್ದಂತೆ ಬಾಡಿ ವಾರಂಟ್ ಮೂಲಕ ಅವರನ್ನು ಕಸ್ಟಡಿಗೆ ನೀಡುವಂತೆ ನ್ಯಾಯಾಲಯವನ್ನು ಕೋರಲಾಗುವುದು’ ಎಂದು ಹೇಳಿದರು.

 

Post Comments (+)