ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಚಾರಣೆ ಮಾಡಬಹುದು, 15 ದಿನಗಳಲ್ಲಿ ತನಿಖೆ ಕಷ್ಟ’

ಆಪರೇಷನ್‌ ಕಮಲ ಆಡಿಯೊ ಪ್ರಕರಣ: ಎಸ್‌ಐಟಿ ತನಿಖೆ
Last Updated 13 ಫೆಬ್ರುವರಿ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ‘ಆಪರೇಷನ್ ಆಡಿಯೊ’ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ವಹಿಸುವುದು ಖಚಿತವಾಗಿದ್ದು, ಅದರ ಪರಿಣಾಮವೇನು? ತನಿಖೆ ಹೇಗೆ ನಡೆಯುತ್ತಿದೆ ಎಂಬ ಚರ್ಚೆ ಈಗ ಮುನ್ನೆಲೆಗೆ ಬಂದಿದೆ.

ಎಸ್ಐಟಿ ರಚಿಸಿದರೂ 15 ದಿನಗಳ ಒಳಗೆ ವಿಚಾರಣೆ ನಡೆಸಬಹುದೇ ವಿನಃ ಪೂರ್ಣ ಪ್ರಮಾಣದಲ್ಲಿ ತನಿಖೆ ನಡೆಸಲು ಸಾಧ್ಯವಿಲ್ಲ. ತನಿಖೆಗೆ ಕೆಲವೊಂದು ಅಡಚಣೆಗಳಿವೆ ಎನ್ನುತ್ತಾರೆ ನಿವೃತ್ತ ಪೊಲೀಸ್‌ ಅಧಿಕಾರಿಗಳು.

ಅದಕ್ಕೆ ಅವರು ನೀಡುವ ವಿವರಣೆ ಹೀಗಿದೆ.

‘ಈ ಪ್ರಕರಣದಲ್ಲಿ ಆಡಿಯೋದಲ್ಲಿ ಇರುವ ಧ್ವನಿ ಯಾವುದು ಎಂದು ಗುರುತಿಸುವುದು ಮುಖ್ಯ. ಧ್ವನಿ ಪತ್ತೆ ಮಾಡಬೇಕಿದ್ದರೆ, ಯಾರ ಧ್ವನಿ ಇದು ಎಂಬ ಬಗ್ಗೆ ಸಂಶಯವಿದೆಯೋ ಅವರಿಗೆ ನೋಟಿಸ್‌ ನೀಡಿ ಕರೆಸಿಕೊಂಡು ಅವರ ಧ್ವನಿಯ ಮಾದರಿ ಸಂಗ್ರಹಿಸಬೇಕು. ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ ಅಡಿ ಎಫ್‌ಐಆರ್‌ ದಾಖಲಿಸಿಕೊಳ್ಳದೇ ಯಾರಿಗೂ ನೋಟಿಸ್‌ ನೀಡಲು ಅವಕಾಶ ಇಲ್ಲ. ಒಂದು ವೇಳೆ ನೀಡಿದರೂ ಅವರು ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶ ಇದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ನಿವೃತ್ತ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

‘ಧ್ವನಿ ಮಾದರಿ ನೀಡುವುದಕ್ಕೆ ಸಂಬಂಧಪಟ್ಟವರು ಒಪ್ಪಿದರೆ, ಈ ಧ್ವನಿ ಅವರದ್ದೇ ಎಂಬ ಬಗ್ಗೆ ತಜ್ಞರಿಂದ ವರದಿ ಪಡೆಯಬೇಕಾಗುತ್ತದೆ. ಧ್ವನಿ ಹೋಲಿಕೆಯಾದರೆ, ಎಫ್‌ಐಆರ್‌ ದಾಖಲಿಸಿ ನಂತರವಷ್ಟೇ ತನಿಖೆ ನಡೆಸಬಹುದು. 15 ದಿನಗಳಲ್ಲಿ ಇಷ್ಟೆಲ್ಲ ನಡೆಸುವುದು ಕಷ್ಟಸಾಧ್ಯ. ಆದರೆ, ಎಸ್‌ಐಟಿಯು ಈ ಪ್ರಕರಣದ ಸತ್ಯಾಸತ್ಯತೆ ಪರಿಶೀಲಿಸಿ ಸ್ಪೀಕರ್‌ಗೆ ವರದಿ ನೀಡಬಹುದು ಅಷ್ಟೇ’ ಎಂದು ಅವರು ವಿವರಿಸಿದರು.

‘ಈ ಪ್ರಕರಣದಲ್ಲಿ ಹಣದ ಆಮಿಷದ ಬಗ್ಗೆ ಪ್ರಸ್ತಾಪವಾಗಿದೆ. ಆದರೆ, ಹಣ ವರ್ಗಾವಣೆ ಆಗಿಲ್ಲ. ವಿಚಾರಣೆ ವೇಳೆ ಧ್ವನಿ ಹೋಲಿಕೆಯಾದರೂ ಯಾವ ಕಾಯ್ದೆಯಡಿ ಅಡಿ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗುತ್ತದೆ ಎಂಬುದು ಮುಖ್ಯ. ಭ್ರಷ್ಟಾಚಾರ ನಿಷೇಧ ಕಾಯ್ದೆ ಅಡಿ ಇದನ್ನು ದಾಖಲಿಸುವುದಾದರೆ, ಇಂತಹ ಆಮಿಷವನ್ನು ಹೇಗೆ ವ್ಯಾಖ್ಯಾನಿಸಲಾಗುತ್ತದೆ ಎಂದು ನೋಡಬೇಕಾಗುತ್ತದೆ. ಪೊಲೀಸರು ತನಿಖೆ ವೇಳೆ ಆರೋಪಿಗಳಿಂದ ಪಡೆಯುವ ಹೇಳಿಕೆಯನ್ನು ನ್ಯಾಯಾಲಯ ಒಪ್ಪುವುದಿಲ್ಲ. ನ್ಯಾಯಾಲಯದಲ್ಲಿ ಮತ್ತೆ ವಿಚಾರಣೆ ನಡೆಸಬೇಕಾಗುತ್ತದೆ. ಆ ಬಳಿಕವಷ್ಟೇ ಆರೋಪಿಗಳಿಗೆ ಶಿಕ್ಷೆ ಬಗ್ಗೆ ನಿರ್ಧಾರವಾಗುತ್ತದೆ’ ಎಂದರು.

‘ತನಿಖೆ ನಡೆಸುವುದಕ್ಕೆ ಎಫ್‌ಐಆರ್‌ ದಾಖಲಾಗಿರಬೇಕು ನಿಜ. ಆದರೆ, ಈ ಪ್ರಕರಣದ ಸತ್ಯಾಸತ್ಯತೆ ಪರಿಶೀಲನೆ ನಡೆಸಲು ಎಸ್‌ಐಟಿಗೆ ಅಧಿಕಾರ ಇದೆ. ಆರೋಪಗಳಲ್ಲಿ ನಿಜಾಂಶವಿದ್ದರೆ ನಂತರ ಎಫ್‌ಐಆರ್‌ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವುದಕ್ಕೆ ಅವಕಾಶ ಇದ್ದೇ ಇದೆ’ ಎಂದು ಮತ್ತೊಬ್ಬ ನಿವೃತ್ತ ಐಪಿಎಸ್‌ ಅಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT