ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ- ಮುಸ್ಲಿಂರ ನಡುವೆ ಭೇದ ಮಾಡುತ್ತಿರುವ ಮೋದಿ: ಸೀತಾರಾಮ ಯಚೂರಿ

ಕಾರ್ಲ್‌ಮಾರ್ಕ್ಸ್ 200ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಹೇಳಿಕೆ
Last Updated 9 ನವೆಂಬರ್ 2018, 11:03 IST
ಅಕ್ಷರ ಗಾತ್ರ

ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಸರ್ಕಾರ ಭ್ರಷ್ಟಾಚಾರ ಮತ್ತು ಕೋಮುವಾದದಲ್ಲಿ ತೊಡಗಿದ್ದು, ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಏಕೈಕ ಗುರಿಯೊಂದಿಗೆ ಕಾಂಗ್ರೆಸ್ ನೇತೃತ್ವದ ಮಹಾ ಘಟಬಂಧನಕ್ಕೆ ನಮ್ಮ ಸಹಮತವಿದೆ ಎಂದು ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯಚೂರಿ ಸ್ಪಷ್ಟಪಡಿಸಿದರು.

ಕಾರ್ಲ್‌ಮಾರ್ಕ್ಸ್ 200ನೇ ಜನ್ಮದಿನದ ಪ್ರಯುಕ್ತ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಚುನಾವಣೆ ಗೆಲ್ಲುವುದಕ್ಕಾಗಿ ಮೋದಿ ನೋಟು ಅಮಾನ್ಯೀಕರಣ ಅಸ್ತ್ರವನ್ನು ಬಳಸುತ್ತಿದ್ದಾರೆ. ಆದರೆ ಅಮಾನ್ಯೀಕರಣದಿಂದ ದೇಶದ ಕೋಟ್ಯಂತರ ಜನರಿಗೆ ನಷ್ಟವಾಗಿದೆ. ಇದರಿಂದ ದೇಶ ಹಿಂದುಳಿದಿದೆ. ಲಕ್ಷಾಂತರ ಸಣ್ಣ ಕೈಗಾರಿಕೆಗಳು ಮುಚ್ಚಿ ಹೋಗಿವೆ. ಬಡವರು, ಕಾರ್ಮಿಕರು, ವ್ಯಾಪಾರಸ್ಥರು ನರಳುತ್ತಿದ್ದಾರೆ. ಇದು ರಫೆಲ್‌ಗಿಂತ ದೊಡ್ಡ ಹಗರಣವಾಗಿದೆ ಎಂದು ಟೀಕಿಸಿದರು.

ಮೋದಿ ದೇಶದಲ್ಲಿ ಅತ್ಯಂತ ಕೀಳು ರಾಜಕೀಯ ಮಾಡುತ್ತಿದ್ದಾರೆ. ಹಿಂದೂ- ಮುಸ್ಲಿಂರ ನಡುವೆ ಬೇಧ ಮೂಡಿಸುತ್ತಿದ್ದಾರೆ. ಮತಗಳಿಗಾಗಿ ಇಂತಹ ಕೀಳುಮಟ್ಟದ ರಾಜಕೀಯ ಮಾಡಬಾರದು. ದೇಶ ಬಡವಾಗುತ್ತಿದೆ. ಹಾಗಾಗಿ ಜಾತ್ಯತೀತ ಸರ್ಕಾರ ರಚನೆಯಾಗಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.

ಫಸಲ್ ಬಿಮಾ ಯೋಜನೆ ರೈತರಿಗೆ ಲಾಭವಾಗುವ ಬದಲು, ವಿಮಾ ಕಂಪನಿಗಳಿಗೆ ಲಾಭ ಆಗಿದೆ. ಈವರೆಗೆ ರೈತರ ಖಾತೆಗೆ ಎಷ್ಟು ಹಣ ಬಂದಿದೆ ಎಂದು ಮೋದಿ ಹೇಳಬೇಕು. ದೇಶದಲ್ಲಿ ರೈತರ ಆತ್ಮಹತ್ಯೆ ಬಹಳಷ್ಟು ವೇಗವಾಗಿದೆ. ಬಹುಶಃ ಇದರ ಬಗ್ಗೆ ಪ್ರಧಾನಿ ಅವರಿಗೆ ಮಾಹಿತಿ ಇಲ್ಲ ಅನಿಸುತ್ತೆ. ಅವರೇನಿದ್ದರೂ ಬಹುರಾಷ್ಟ್ರೀಯ ಕಂಪನಿಗಳ ಲಾಭಕ್ಕಾಗಿ ದುಡಿಯುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಹೇಳಿರುವುದು ಸುಳ್ಳು, ಜೆಎಸ್‌ಟಿ ಜನರಿಗೆ ಹೊರೆಯಾಗಿದೆ. ಇಂತಹ ಜನವಿರೋಧಿ ಸರ್ಕಾರ ಕಿತ್ತೊಗೆಯಲು ರಾಷ್ಟ್ರದಾದ್ಯಂತ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದರು.

ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ: ಟಿಪ್ಪು ಜಯಂತಿಯನ್ನು ವಿರೋಧಿಸುವ ಬಿಜೆಪಿ ಬ್ರಿಟಿಷರ ವಿರುದ್ಧ ಟಿಪ್ಪು ಸುಲ್ತಾನ್ ಹೋರಾಟ ಮಾಡಿದ್ದರು ಎಂಬ ಅರಿವು ಇಲ್ಲ. ಇತಿಹಾಸವನ್ನು ಬಗೆದು ಭವಿಷ್ಯವನ್ನು ಮಸಕುಗೊಳಿಸಬಾರದು. ಇಂತಹ ಅನವಶ್ಯಕ ಹೋರಾಟದಿಂದ ಜನರಿಗೆ ಯಾವುದೇ ಲಾಭವಿಲ್ಲ. ಟಿಪ್ಪು ಜಯಂತಿ ಆಚರಣೆ ರಾಜ್ಯ ಸರ್ಕಾರದ ನಿರ್ಣಯವಾಗಿದೆ ಎಂದು ಸಮರ್ಥಿಸಿಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT