ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಗಾಸಿಗೆ ನಿವೇಶನಗಳ ಮಾರಾಟ!

ವಿದ್ಯಾಗಿರಿ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ಭಾರಿ ಹಗರಣ
Last Updated 15 ಜೂನ್ 2020, 20:07 IST
ಅಕ್ಷರ ಗಾತ್ರ

ಬೆಂಗಳೂರು: ರಸ್ತೆಗಾಗಿ ಸ್ವಾಧೀನ ಪಡಿಸಿಕೊಂಡಿದ್ದ ಜಮೀನಿಗೆ ಬದಲಾಗಿ ‘ವಿದ್ಯಾಗಿರಿ ಗೃಹ ನಿರ್ಮಾಣ ಸಹಕಾರ ಸಂಘ’ಕ್ಕೆ ಪ್ರತಿಷ್ಠಿತ ಬಡಾವಣೆಗಳಲ್ಲಿ ವಿತರಿಸಿದ್ದ ನಿವೇಶನಗಳನ್ನು ಬಿಡಿಗಾಸಿಗೆ ಮಾರಾಟ ಮಾಡುವ ಮೂಲಕ ಕೋಟ್ಯಂತರ ರೂಪಾಯಿ ಅಕ್ರಮ ಎಸಗಲಾಗಿದೆ ಎನ್ನಲಾದ ಹಗರಣ ಬಯಲಾಗಿದೆ.

ನಾಗರಬಾವಿ ರಿಂಗ್‌ ರಸ್ತೆಗಾಗಿ ವಿದ್ಯಾಗಿರಿ ಸಹಕಾರ ಸಂಘಕ್ಕೆ ಸೇರಿದ 4.38 ಎಕರೆ ಜಮೀನನ್ನು ಬಿಡಿಎ 1995ರಲ್ಲಿ ವಶಪಡಿಸಿಕೊಂಡಿತ್ತು. ಇದಕ್ಕೆ ಬದಲಾಗಿ ಜೆ.ಪಿ ನಗರ, ಸಾರಕ್ಕಿ, ಅಗ್ರಹಾರ, ಬಿಟಿಎಂ ಬಡಾವಣೆ 1ನೇ ಹಂತ, ಬಿಟಿಎಂ ಬಡಾವಣೆ
2ನೇ ಹಂತ, ಬನಶಂಕರಿ 3ನೇ ಹಂತ, ಬಾಣಸವಾಡಿ, ಆರ್‌ಎಂವಿ ಬಡಾವಣೆ, ಕತ್ರಿಗುಪ್ಪೆ ಮೊದಲಾದ ಕಡೆ 1.27 ಲಕ್ಷ ಚದರಡಿ (21 ನಿವೇಶನ) ಜಾಗ ವಿತರಿಸಿತ್ತು.

ಈ ನಿವೇಶನಗಳನ್ನು ಚದರಡಿಗೆ ₹ 55ರ ದರದಲ್ಲಿ ಮಾರಿದ ಆರೋಪ ಸಹಕಾರ ಸಂಘದ ಮೇಲಿದೆ. ಗೃಹ ನಿರ್ಮಾಣ ಸಹಕಾರ ಸಂಘ 2015– 2019ರ ನಡುವೆ ಈ ನಿವೇಶನಗಳನ್ನು ಸಂಘದ ಸದಸ್ಯರಲ್ಲದ, ಪ್ರಭಾವಿ ವ್ಯಕ್ತಿಗಳಿಗೆ ಮಾರಿದೆ.‌ ಇದರಲ್ಲಿ ಅಕ್ರಮ ನಡೆದಿರುವುದನ್ನು ಸಹಕಾರ ಸಂಘಗಳ ಜಂಟಿ ನಿಬಂಧಕರ ವಿಚಾರಣೆ (ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಸೆಕ್ಷನ್‌ 64ರ ಅಡಿ ನಡೆಸಿದ ವಿಚಾರಣೆ) ಪತ್ತೆ ಹಚ್ಚಿದೆ.

ಹಾಲಿ ಶಾಸಕರೊಬ್ಬರೂ ಸೇರಿದಂತೆ ಅನೇಕರು ನೀಡಿದ್ದ ದೂರು ಆಧರಿಸಿ ವಿಚಾರಣೆ ನಡೆಸಲಾಗಿದೆ. ನಿವೇಶನಗಳನ್ನು ಮಾರುವಾಗ ಸಹಕಾರ ಸಂಘಗಳ ರಿಜಿಸ್ಟ್ರಾರ್‌ ಕಚೇರಿಯ ಒಪ್ಪಿಗೆ ಪಡೆದಿಲ್ಲ. ನಿವೇಶನಗಳ ಹಂಚಿಕೆ ಸಮಯದಲ್ಲಿ ಅರ್ಹರ ಪಟ್ಟಿ ಸಲ್ಲಿಸಿ ಇಲಾಖೆ ಒಪ್ಪಿಗೆ ಪಡೆಯುವುದು ಕಡ್ಡಾಯ. ಆದರೆ, ಇದನ್ನು ಗಾಳಿಗೆ ತೂರಲಾಗಿದೆಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

1956ರಲ್ಲಿ ಸ್ಥಾಪಿಸಲಾಗಿದ್ದ ‘ಬೆಂಗಳೂರು ಸಿಟಿ ಎಂಪ್ಲಾಯಿಸ್‌ ಹೌಸಿಂಗ್‌ ಆ್ಯಂಡ್‌ ಸೋಷಿಯಲ್‌ ವೆಲ್‌ಫೇರ್‌ ಕೋ– ಆಪ್‌ ಸೊಸೈಟಿ ಲಿ.’, ಹೆಸರನ್ನು 2015ರಲ್ಲಿ ‘ವಿದ್ಯಾಗಿರಿ ಗೃಹ ನಿರ್ಮಾಣ ಸಹಕಾರ ಸಂಘ ನಿ.’, ಎಂದು ಬದಲಾಯಿಸಲಾಗಿದೆ.

‘ಬಿಡಿಎ 25 ವರ್ಷಗಳ ಹಿಂದೆ ಜಮೀನು ವಶಪಡಿಸಿಕೊಂಡಿದ್ದರೂ ಅನೇಕ ವರ್ಷ‌‌ ಸಹಕಾರ ಸಂಘಕ್ಕೆ ಬದಲಿ ನಿವೇಶನಗಳನ್ನು ಕೊಟ್ಟಿರಲಿಲ್ಲ. ಪ್ರಭಾವ ಬಳಸಿ ಪ್ರತಿಷ್ಠಿತ ಬಡಾವಣೆಗಳಲ್ಲಿ ಜಾಗ ಮಂಜೂರು ಮಾಡಿಸಿಕೊಳ್ಳಲಾಗಿತ್ತು. ಈ ಅಕ್ರಮದಲ್ಲಿ ಬಿಡಿಎ ಮತ್ತು ಸಹಕಾರ ಸಂಘಗಳ ಕಚೇರಿಯ ಕೆಲವು ಅಧಿಕಾರಿಗಳು ಭಾಗಿಯಾಗಿರುವ ಶಂಕೆ ಇದ್ದು, ಸಮಗ್ರ ತನಿಖೆ ನಡೆದರೆ ಸತ್ಯ ಹೊರಬರಲಿದೆ’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT