ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನಿಟ್ರ್ಯಾಪ್‌: ವಿದ್ಯಾರ್ಥಿನಿ ಸೇರಿ ಆರು ಮಂದಿ ಸೆರೆ

ಬಂಧನಕ್ಕೆ ತೆರಳಿದ್ದ ವೇಳೆ ಪೊಲೀಸರ ಮೇಲೆಯೇ ಫೈರಿಂಗ್‌
Last Updated 27 ಸೆಪ್ಟೆಂಬರ್ 2019, 13:51 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗಿನಲ್ಲಿ ನಡೆದಿದ್ದ ‘ಹನಿಟ್ರ್ಯಾಪ್‌’ ಪ್ರಕರಣದ ಆರು ಮಂದಿ ಆರೋಪಿಗಳನ್ನು ಜಿಲ್ಲಾ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಪ್ರಕರಣದ ಸೂತ್ರಧಾರ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿ, ತಲೆಮರೆಸಿಕೊಂಡಿದ್ದು ಆತನಿಗೆ ಶೋಧ ಮುಂದುವರಿದಿದೆ.

ರಿಯಲ್‌ ಎಸ್ಟೇಟ್‌ ಉದ್ಯಮಿ ಮೊಹಮ್ಮದ್‌ ಅಜರುದ್ದೀನ್‌ (24), ಕತ್ತಾರನ್‌ನಲ್ಲಿ ಕಾರು ಚಾಲಕನಾಗಿದ್ದ ಅಬುಬಕ್ಕರ್‌ ಸಿದ್ದಿಕ್‌ (33), ಹಸೈನಾರ್‌ (27), ಇರ್ಷಾದ್‌ ಅಲಿ (27), ಎ.ಎ.ಸಮೀರ್ (28) ಬಂಧಿತ ಆರೋಪಿಗಳು. ಎಲ್ಲರೂ ಮಡಿಕೇರಿ ತಾಲ್ಲೂಕಿನ ಎಮ್ಮೆಮಾಡು ಗ್ರಾಮದವರು.

ಕೃತ್ಯದಲ್ಲಿ ಕುಶಾಲನಗರದ ಕೂಡಿಗೆಯ ಭುವನಗಿರಿಯ ವಿದ್ಯಾರ್ಥಿನಿಯೊಬ್ಬಳು ಭಾಗಿಯಾಗಿದ್ದು ಈಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಈಕೆ ಮಡಿಕೇರಿ ಮಹಿಳಾ ಕಾಲೇಜೊಂದರ ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ.

‘ಕರೀಂ ಸೇರಿ ನಾಲ್ವರು ತಲೆಮರೆಸಿಕೊಂಡಿದ್ದಾರೆ. ಕರೀಂ ಹಲವು ಕೃತ್ಯದಲ್ಲಿ ಈ ಹಿಂದೆಯೂ ಭಾಗಿಯಾಗಿದ್ದ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್‌ ಡಿ. ಪೆನ್ನೇಕರ್ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾಹಿತಿ ನೀಡಿದರು.

ಏನಿದು ಕೃತ್ಯ?:

ಎಮ್ಮೆಮಾಡು ಗ್ರಾಮದ ಗಫೂರ್ ದುಬೈನಲ್ಲಿ ನೆಲೆಸಿದ್ದು, ಇತ್ತೀಚೆಗೆ ಹೊಸ ಮನೆ ನಿರ್ಮಾಣಕ್ಕೆಂದು ಊರಿಗೆ ಬಂದಿದ್ದರು. ಅವರ ಬಳಿ ಮನೆ ನಿರ್ಮಾಣದ ಹಣವಿರುವ ಮಾಹಿತಿ ತಿಳಿದ 10 ಮಂದಿ ಆರೋಪಿಗಳು, ದರೋಡೆಗೆ ಸಂಚು ರೂಪಿಸಿದ್ದರು. ಎಲೆಕ್ಟ್ರಾನಿಕ್‌ ಉಪಕರಣ ಕೊಡಿಸುವ ನೆಪದಲ್ಲಿ ಮೈಸೂರಿಗೆ ಕರೆದೊಯ್ಯುವ ಯೋಜನೆ ರೂಪಿಸಿ, ಆಗಸ್ಟ್ 16ರಂದು ಕರೀಂ ಹಾಗೂ ಅಜರುದ್ದೀನ್‌ ಮೈಸೂರಿಗೆ ಕಾರಿನಲ್ಲಿ ಕರೆದೊಯ್ಯುವಾಗ ವಿದ್ಯಾರ್ಥಿನಿಯನ್ನು ಹತ್ತಿಸಿಕೊಂಡಿದ್ದರು. ಮೈಸೂರಿನ ರಿಂಗ್‌ ರಸ್ತೆ ಸಮೀಪ ಹೋಮ್‌ ಸ್ಟೇಗೆ ಗಫೂರ್‌ ಹಾಗೂ ವಿದ್ಯಾರ್ಥಿನಿಯನ್ನು ಕರೆದೊಯ್ದು ಗಫೂರ್‌ಗೆ ಅಮಲು ಪದಾರ್ಥ ನೀಡಿದ್ದರು ಎಂದು ಎಸ್‌ಪಿ ಮಾಹಿತಿ ನೀಡಿದರು.

‘ಹೋಮ್‌ ಸ್ಟೇಗೆ ಉಳಿದ ಆರೋಪಿಗಳು ಪತ್ರಕರ್ತರೆಂದು ಹೇಳಿಕೊಂಡು ಪ್ರವೇಶಿಸಿ ಗಫೂರ್‌ಗೆ ಥಳಿಸಿ, ₹ 60 ಸಾವಿರ ನಗದು, 55 ಸಾವಿರ ಮೌಲ್ಯದ ವಿದೇಶಿ ಕರೆನ್ಸಿ ಕಸಿದುಕೊಂಡಿದ್ದರು. ಬಳಿಕ ಬೆದರಿಸಿ ವಿದ್ಯಾರ್ಥಿನಿಯೊಂದಿಗೆ ಅಶ್ಲೀಲ ವಿಡಿಯೊ ಚಿತ್ರೀಕರಿಸಿದ್ದರು. ₹ 50 ಲಕ್ಷ ನೀಡದಿದ್ದರೆ ವಾಹಿನಿಗಳಲ್ಲಿ ಈ ದೃಶ್ಯ ಪ್ರಸಾರ ಮಾಡುವ ಬೆದರಿಕೆಯೊಡ್ಡಿದ್ದರು. ಹೆದರಿದ ಗಫೂರ್‌, ಸಂಬಂಧಿಕರಿಂದ ₹ 3.80 ಲಕ್ಷ ತರಿಸಿ ಆರೋಪಿಗಳಿಗೆ ನೀಡಿದ್ದರು. ಬಳಿಕ ಗಫೂರ್‌ನನ್ನು ಬಿಟ್ಟು ಕಳುಹಿಸಿದ್ದರು’ ಎಂದು ಸುಮನ್‌ ಮಾಹಿತಿ ನೀಡಿದರು.

ನಾಪೋಕ್ಲು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT