ಆಸಕ್ತಿಗೆ ಅನುಗುಣವಾಗಿ ಕೌಶಲಗಳ ಅಭಿವೃದ್ಧಿ

7
ಸಿಲ್ಕ್‌ಥಾನ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ

ಆಸಕ್ತಿಗೆ ಅನುಗುಣವಾಗಿ ಕೌಶಲಗಳ ಅಭಿವೃದ್ಧಿ

Published:
Updated:
ಧಾರವಾಡ: ಸೃಜನಾ ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಸ್ಕಿಲ್‌ಥಾನ್ ಕಾರ್ಯಕ್ರಮದಲ್ಲಿ ಕವಿವಿ ಕುಲಪತಿ ಪ್ರೊ. ಪ್ರಮೋದ ಗಾಯಿ ಕರ್ನಾಟಕ ವಿಶ್ವವಿದ್ಯಾಲಯ ಆವರಣದಲ್ಲಿ ವಿಶ್ವೇಶ್ವರಯ್ಯ ಕೌಶಲಾಭಿವೃದ್ಧಿ ಕೇಂದ್ರ ಸ್ಥಾಪಿಸುವ ಕುರಿತ ಪ್ರಸ್ತಾವನೆಯನ್ನು ಕೇಂದ್ರ ಕೌಶಲ ಅಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಅವರಿಗೆ ಸಲ್ಲಿಸಿದರು.

ಧಾರವಾಡ: ’ಯುವಜನರು ಹಾಗೂ ವಿದ್ಯಾರ್ಥಿಗಳ ಅಂತರಂಗದ ಅಭಿಲಾಷೆ ಮತ್ತು ಆಸಕ್ತಿಗಳಿಗೆ ಅನುಗುಣವಾಗಿ ವಿವಿಧ ಆಯಾಮಗಳಲ್ಲಿ ಕೌಶಲಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದು ಕೇಂದ್ರ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಅನಂತಕುಮಾರ ಹೆಗಡೆ ಹೇಳಿದರು.

ಕೌಶಲ ಭಾರತ, ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮ, ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ಸೃಜನಾ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಸ್ಕಿಲ್‌ಥಾನ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ’ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಸಾಂಪ್ರದಾಯಿಕ ಶಿಕ್ಷಣ ಪೂರೈಸಿದ ಬಳಿಕ ಯುವಜನರಿಗೆ ಬದುಕಿನ ಕಠೋರತೆ ಎದುರಾಗುತ್ತದೆ. ಅಲ್ಲಿ ನಮ್ಮ ಪದವಿ, ಸ್ನಾತಕೋತ್ತರ ಪದವಿಗಳ ಪ್ರಮಾಣ ಪತ್ರಗಳಿಗಿಂತಲೂ ಮುಖ್ಯವಾಗಿ ನಮ್ಮಲ್ಲಿರುವ ವೃತ್ತಿಕೌಶಲ, ನೈಪುಣ್ಯತೆಗಳಿಗೆ ಮಾನ್ಯತೆ ಸಿಗುತ್ತದೆ’ ಎಂದರು.

’ನಮ್ಮ ಯುವಜನರಲ್ಲಿನ ಪ್ರತಿಭೆ, ಆಸಕ್ತಿಯನ್ನು ಅರ್ಥ ಮಾಡಿಕೊಂಡು ಸರ್ಕಾರಗಳು ಕೌಶಲಾಭಿವೃದ್ಧಿ ತರಬೇತಿ ನೀಡಿದರೆ, ವೈಯಕ್ತಿಕ ಬದುಕು ರೂಪಿಸುವ ಹಾಗೂ ದೇಶದ ಭವಿಷ್ಯ ಉಜ್ವಲಗೊಳಿಸುವ ಕಾರ್ಯಗಳು ನೆರವೇರುತ್ತವೆ. ನಾವು ಹುಟ್ಟಿರುವುದೇ ಗೆಲ್ಲಲು ಎಂಬ ಭಾವನೆ ಮತ್ತು ಛಲದೊಂದಿಗೆ ಹುಡುಕಾಟದ ಪ್ರಯತ್ನಗಳಲ್ಲಿ ತೊಡಗಿದರೆ ಬದುಕು ತೆರೆದುಕೊಳ್ಳುತ್ತದೆ. ಕೆನಡಾ, ಫಿನ್‌ಲ್ಯಾಂಡ್, ರಷ್ಯಾ, ಯುರೋಪ್ ದೇಶಗಳು ಭಾರತೀಯ ಯುವಕರಿಗೆ ಉದ್ಯೋಗ ನೀಡಲು ತುದಿಗಾಲಲ್ಲಿ ನಿಂತಿವೆ. ನಮ್ಮ ಯುವಜನ ಅಲ್ಲಿಗೆ ಉದ್ಯೋಗ ಅರಸಿ ಹೋಗಿ ಕ್ರಮೇಣ ಅಲ್ಲಿನ ಉನ್ನತ ಅಧಿಕಾರ ಹಿಡಿಯುವ ಕನಸು ಕಾಣಬೇಕು’ ಎಂದು ಹೇಳಿದರು

’ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಅನೇಕ ಅಮೂಲ್ಯ ಹಸ್ತಪ್ರತಿಗಳು ಇವೆ. ಅವುಗಳನ್ನು ತಂತ್ರಜ್ಞಾನ ಬಳಸಿಕೊಂಡು ನಮ್ಮ ದೇಶಕ್ಕೆ ತರುವ ಕಾರ್ಯ ನಡೆದಿದೆ. ಇಂದು ಅಮೇರಿಕವೂ ಹೊಲಿಸ್ಟಿಕ್ ಔಷಧಿಗಳ ಹೆಸರಿನಲ್ಲಿ ಭಾರತೀಯ ಆಯುಷ್ ವೈದ್ಯ ಪದ್ಧತಿಗಳನ್ನು ಅಳವಡಿಸಿಕೊಳ್ಳುತ್ತಿದೆ’ ಎಂದರು.

ಇದೇ ವೇಳೆ ಕರ್ನಾಟಕ ವಿಶ್ವವಿದ್ಯಾಲಯ ಆವರಣದಲ್ಲಿ ವಿಶ್ವೇಶ್ವರಯ್ಯ ಕೌಶಲಾಭಿವೃದ್ಧಿ ಕೇಂದ್ರ ಸ್ಥಾಪಿಸುವ ಕುರಿತ ಪ್ರಸ್ತಾವನೆಯನ್ನು ಕುಲಪತಿ ಪ್ರೊ. ಪ್ರಮೋದ ಗಾಯಿ ಸಚಿವರಿಗೆ ಸಲ್ಲಿಸಿದರು. ’ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಯುವಜನರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ಪಿಎಂಕೆವಿವೈ ಯೋಜನೆ ಅಡಿ 40 ವಿವಿಧ ವಲಯಗಳಡಿ ಲಕ್ಷಾಂತರ ಜನರಿಗೆ ಕೌಶಲ ತರಬೇತಿ ನೀಡಲಾಗುತ್ತಿದೆ. ಯೋಗವನ್ನು ಪಠ್ಯವನ್ನಾಗಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಶಾಲಾ ಹಂತದಲ್ಲಿಯೇ ಕೌಶಲ್ಯಾಭಿವೃದ್ಧಿ ಶಿಕ್ಷಣ ಆರಂಭಿಸಲು ರಾಜ್ಯ ಸರ್ಕಾರಗಳ ಸಹಕಾರ ಅಗತ್ಯ. ಕೇವಲ ಮೂರೂವರೆ ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಕೌಶಲಾಭಿವೃದ್ಧಿ ಮಂತ್ರಾಲಯವು ಸಾಕಷ್ಟು ರಚನಾತ್ಮಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ’ ಎಂದರು.

ಕರ್ನಾಟಕ ಕಲಾ ಮಹಾವಿದ್ಯಾಲಯದ ಪ್ರವಾಸೋದ್ಯಮ ವಿಭಾಗ ಹಾಗೂ ಭಾರತ ಸರ್ಕಾರದ ಪ್ರವಾಸೋದ್ಯಮ, ಆತಿಥ್ಯ ಹಾಗೂ ಕೌಶಲ ಪರಿಷತ್ (ಟಿಎಚ್‌ಎಸ್‌ಸಿ) ಗಳ ನಡುವೆ ಮಾಡಿಕೊಳ್ಳಲಾಗಿರುವ ಒಡಂಬಡಿಕೆಗೆ ಅನಂತಕುಮಾರ ಹೆಗಡೆ ಹಾಗೂ ಡಾ. ಪ್ರಮೋದ ಗಾಯಿ ಸಹಿ ಹಾಕಿದರು.

ಸ್ಕಿಲ್ ಇಂಡಿಯಾದ ಸಲಹೆಗಾರ ಎಸ್.ವಿ. ವೆಂಕಟೇಶ, ಕರ್ನಾಟಕ ಕಲಾ ಕಾಲೇಜು ಪ್ರಾಚಾರ್ಯೆ ಡಾ. ರಾಜೇಶ್ವರಿ ಮಹೇಶ್ವರಯ್ಯ, ಕರ್ನಾಟಕ ವಿಜ್ಞಾನ ಕಾಲೇಜು ಪ್ರಾಚಾರ್ಯ ಡಾ. ಸಿ.ಎಫ್. ಮೂಲಿಮನಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !