ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವತಿಯರನ್ನು ವಾಯುಪಡೆಗೆ ಸೆಳೆಯಲು ಸ್ಕೈ ಡೈವಿಂಗ್‌

Last Updated 23 ಫೆಬ್ರುವರಿ 2019, 20:11 IST
ಅಕ್ಷರ ಗಾತ್ರ

ಬೆಂಗಳೂರು: 'ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಶಸ್ತ್ರ ಪಡೆಗಳಿಗೆ ಬರಬೇಕು. ಅದಕ್ಕೆ ಪ್ರೇರಣೆ ಒದಗಿಸುವುದು ಈ ಸ್ಕೈಡೈವಿಂಗ್‌ನ ಮುಖ್ಯ ಉದ್ದೇಶವಾಗಿತ್ತು' ಎಂದು ವಿಂಗ್ ಕಮಾಂಡರ್ ಸಂಗೀತಾ ಪೌಲಜ್ ಹೆಮ್ಮೆಯಿಂದ ಹೇಳಿದರು.

'ವೈಮಾನಿಕ ಕ್ಷೇತ್ರದಲ್ಲಿ ಮಹಿಳೆಯರು' ಆಶಯದ ಭಾಗವಾಗಿ 'ಏರೊ ಇಂಡಿಯಾ 2019' ವೈಮಾನಿಕ ಪ್ರದರ್ಶನದಲ್ಲಿ ವಾಯುಪಡೆಯು ಶನಿವಾರ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಅದರ ಭಾಗವಾಗಿ ಐವರು ಮಹಿಳೆಯರಿದ್ದ ತಂಡ 5,000 ಅಡಿ ಎತ್ತರದಿಂದ ಜಿಗಿದು ಇತಿಹಾಸ ನಿರ್ಮಿಸಿತು. ಆ ತಂಡ ಭೂಮಿಯ ಮೇಲೆ ಕಾಲೂರಲು ತೆಗೆದುಕೊಂಡ ಅವಧಿ ಎಂಟು ನಿಮಿಷಗಳು.

ಈ ತಂಡದ ಭಾಗವಾಗಿದ್ದ ಸಂಗೀತಾ ಕನ್ನಡವನ್ನು ಚೆನ್ನಾಗಿ ಮಾತನಾಡುತ್ತಾರೆ. 'ನಾನು ಸ್ಕೈಡಿವಿಂಗ್ ಮಾಡಲು ಶುರು ಮಾಡಿ 10 ವರ್ಷಗಳೇ ಆಗಿವೆ. ಈವರೆಗೆ 307 ಫ್ರೀ-ಫಾಲ್ ಜಂಪ್ ಮಾಡಿದ್ದೇನೆ. ವೈಮಾನಿಕ ಪ್ರದರ್ಶನದಲ್ಲಿ ಸ್ಕೈಡೈವಿಂಗ್ ಮಾಡಲು ಅವಕಾಶ ಸಿಕ್ಕಿದ್ದು ಹೆಮ್ಮೆ ಎನಿಸಿತು. ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಸಶಸ್ತ್ರ ಪಡೆಗಳಿಗೆ, ವಾಯುಪಡೆಗೆ ಸೇರಲು ಪ್ರೇರಣೆ ಒದಗಿಸುವುದು ನಮ್ಮ ಸ್ಕೈಡೈವಿಂಗ್‌ನ ಮುಖ್ಯ ಉದ್ದೇಶವಾಗಿತ್ತು' ಎಂದು ಅವರು ಖುಷಿ ಹಂಚಿಕೊಂಡರು.

ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸಂಗೀತಾ ವಾಯುಪಡೆಗೆ ಸೇರಿದ್ದು 2004ರಲ್ಲಿ. ‘30 ಸಾವಿರ ಅಡಿಗಳಷ್ಟು ಎತ್ತರದಿಂದ ಜಿಗಿದಿರುವುದು ನನ್ನ ಈವರೆಗಿನ ಅತ್ಯುತ್ತಮ ದಾಖಲೆ. ಅಂಡಮಾನ್‌ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿರುವ ಕಾರ್ಣಿಕ್ ವಾಯುನೆಲೆಯಲ್ಲಿ ಪ್ಯಾರಾ ಜಂಪಿಂಗ್ ಮಾಡಿದ್ದು ಅತ್ಯುತ್ತಮ ಅನುಭವ. ನಾನು ವಾಯುಪಡೆಗೆ ಸೇರಲು ತಂದೆಯೇ ಸ್ಫೂರ್ತಿ. ಅವರ ಮಾತುಗಳೇ ಪ್ರೇರಣೆ’ ಎಂದು ಹೆಮ್ಮೆಯಿಂದ ನುಡಿದರು.

ಐವರು ಸದಸ್ಯರಿದ್ದ ತಂಡದ ನಾಯಕತ್ವ ವಹಿಸಿದ್ದವರು ವಿಂಗ್ ಕಮಾಂಡರ್ ಆಶಾ ಜ್ಯೋತಿರ್ಮಯಿ. ಹೈದರಾಬಾದ್ ಮೂಲದ ಆಶಾ ಸ್ಕೈಡೈವಿಂಗ್ ಸಾಹಸ ಶುರು ಮಾಡಿ 20 ವರ್ಷಗಳೇ ಸರಿದಿವೆ. ನಮ್ಮ ದೇಶದಲ್ಲಿ ಅತಿಹೆಚ್ಚು ಸ್ಕೈಡೈವ್ ಮಾಡಿದ (ಒಟ್ಟು 864) ಮತ್ತು ಮೊದಲ ಬಾರಿಗೆ (2001ರಲ್ಲಿ) ಮೈಕ್ರೊಲೈಟ್ ಏರ್‌ಕ್ರಾಫ್ಟ್‌ನಲ್ಲಿ ಸ್ಕೈಡೈವ್ ಮಾಡಿದ ಮಹಿಳೆ ಎನ್ನುವ ದಾಖಲೆ ಅವರ ಹೆಸರಿನಲ್ಲಿಯೇ ಇದೆ.

‘ಯಲಹಂಕ ವಾಯುನೆಲೆಯಲ್ಲಿ ನಮ್ಮ ತಂಡವು ತನ್ನ ಸಾಹಸ ಮತ್ತು ಧೈರ್ಯ ಗಳಿಸಿದ ಕೀರ್ತಿ ಸಂಪೂರ್ಣವಾಗಿ ಭಾರತೀಯ ಮಹಿಳೆಯರಿಗೆ ಸಲ್ಲಬೇಕು. ನಮ್ಮ ಸಶಸ್ತ್ರಪಡೆಗಳಲ್ಲಿ 10 ವರ್ಷಗಳ ಹಿಂದೆ ಇದ್ದ ಪರಿಸ್ಥಿತಿ ಈಗ ಇಲ್ಲ. ವಾಯುಪಡೆಯಲ್ಲಿ ಮಹಿಳೆಯರಿಗೆ ಇರುವ ಅವಕಾಶಗಳ ಬಗ್ಗೆ ಯುವತಿಯಲ್ಲಿ ಜಾಗೃತಿ ಮೂಡಿಸಬೇಕಿದೆ’ ಎಂದು ಮನದ ಮಾತು ಹಂಚಿಕೊಂಡರು.

ತಮ್ಮ ಅನುಭವ ಹಂಚಿಕೊಂಡ ರಾಜಸ್ಥಾನ ಮೂಲದ ಫ್ಲೈಯಿಂಗ್ ಆಫೀಸರ್ ತುಹಿನಾ ಗೌರ್, 'ನಾನು ಯುದ್ಧವಿಮಾನದ ಪೈಲಟ್. ನಾನು ಸ್ಕೈಡೈವಿಂಗ್‌ಗೆ ಹೋಗುತ್ತೇನೆ ಎಂದು ನನ್ನ ವಿಂಗ್ ಕಮಾಂಡರ್‌ ಬಳಿ ಅನುಮತಿ ಪಡೆಯಲು ಹೋದಾಗ, 'ಇಳಿಯುವಾಗ ಒಂದು ವೇಳೆ ಗಾಯವಾದರೆ ನೀನು ಪೈಲಟ್ ಕೆಲಸಕ್ಕೆ ಮೆಡಿಕಲಿ ಅನ್‌ಫಿಟ್ ಆಗಬಹುದು' ಎಂದು ಅವರು ಹಿಂಜರಿದರು. ಆದರೂ ಕೊನೆಗೆ ಅನುಮತಿ ನೀಡಿದರು' ಎಂದು ತಾವು ಸಾಗಿ ಬಂದ ಹಾದಿಯನ್ನು ಸ್ಮರಿಸಿಕೊಂಡರು.

ಸ್ಕಾರ್ಡನ್ ಲೀಡರ್ ಇಶಾ ಗಿಲ್ ಈ ತಂಡದ ಮತ್ತೊಬ್ಬ ಸದಸ್ಯೆಯಾಗಿದ್ದಾರೆ.

15 ದಿನಗಳ ತರಬೇತಿ

ಐವರು ಯುವತಿಯರಿಗೆ ಕೇವಲ 15 ದಿನಗಳಲ್ಲಿ ಪ್ಯಾರಾ ಗ್ಲೈಡಿಂಗ್ ತರಬೇತಿ ನೀಡಿದವರು ವಿಂಗ್‌ ಕಮಾಂಡರ್ ವಿಶಾಲ್ ಲಾಕೇಶ್. ‘ಪ್ಯಾರಾ ಜಂಪಿಂಗ್‌ ಪ್ರದರ್ಶನದ ಬಗ್ಗೆ ನಮ್ಮ ಅಧಿಕಾರಿಗಳು ಕೇವಲ 15 ದಿನಗಳ ಹಿಂದೆ ನಿರ್ಧರಿಸಿದರು. ಸತತ ತರಬೇತಿಯಿಂದ ಇದು ಸಾಧ್ಯವಾಯಿತು. ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ಯುವತಿಯರಿಗೆ ನೂರಾರು ಬಾರಿ ಆಗಸದಲ್ಲಿ ಜಿಗಿದ ಅನುಭವವಿದೆ.

ಈ ಏರ್‌ ಡೆವಿಲ್ ತಂಡವು ಇನ್ನು ಮುಂದೆ ವಾಯುಪಡೆಯ ಭಾಗವಾಗಲಿದೆ. ನಮ್ಮ ಯುವತಿಯುರು ಇಂದು ಇತಿಹಾಸವನ್ನೇ ನಿರ್ಮಿಸಿದರು’ ಎಂದು ವಿಶಾಲ್‌ ಅವರು ಖುಷಿ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT