ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್ ಸಿಟಿಗೆ ರಾಜ್ಯ ನಿರಾಸಕ್ತಿ!

ಕೇಂದ್ರ ಬಿಡುಗಡೆ ಮಾಡಿದ್ದು ₹886 ಕೋಟಿ–ರಾಜ್ಯ ಬಳಸಿದ್ದು ₹86.02 ಕೋಟಿ!
Last Updated 25 ಡಿಸೆಂಬರ್ 2018, 20:29 IST
ಅಕ್ಷರ ಗಾತ್ರ

ನವದೆಹಲಿ: ಎನ್‌ಡಿಎ ಸರ್ಕಾರದ ಮಹತ್ವಾಕಾಂಕ್ಷೆಯ ’ಸ್ಮಾರ್ಟ್ ಸಿಟಿ’ ಯೋಜನೆಗೆ ಕೇಂದ್ರ ಸರ್ಕಾರ ₹886 ಕೋಟಿ ಬಿಡುಗಡೆ ಮಾಡಿದರೂ ರಾಜ್ಯ ಸರ್ಕಾರ ವಿನಿಯೋಗಿಸಿದ ಮೊತ್ತ ಮಾತ್ರ ₹ 86.02 ಕೋಟಿ!

ಬಿಡುಗಡೆ ಮಾಡಲಾದ ಮೊತ್ತದ ಶೇ 9.70ರಷ್ಟು ಮಾತ್ರ ಯೋಜನೆಗೆ ವಿನಿಯೋಗಿಸಲಾಗಿದೆ. ಈ ಪೈಕಿ ಸರಿಸುಮಾರು ಅರ್ಧದಷ್ಟು ಮೊತ್ತವನ್ನು (₹38.47 ಕೋಟಿ) ಕಚೇರಿ ಮತ್ತು ಆಡಳಿತಾತ್ಮಕ ವೆಚ್ಚಗಳಿಗೆ ಬಳಸಲಾಗಿದೆ.

‘ಸ್ಮಾರ್ಟ್ ಸಿಟಿ‘ ಯೋಜನೆಯ ಅಡಿ ಕರ್ನಾಟಕದ ಏಳು ನಗರಗಳಲ್ಲಿ ಹಲವು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಕೇಂದ್ರ ಸರ್ಕಾರ ₹886 ಕೋಟಿ ಬಿಡುಗಡೆ ಮಾಡಿದೆ.

ಈ ವಿಷಯವನ್ನು ಸ್ವತ ರಾಜ್ಯ ಸರ್ಕಾರವು ಇತ್ತೀಚೆಗೆ ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯಕ್ಕೆ ಸಲ್ಲಿಸಿದ ಹಣಕಾಸು ವಿನಿಯೋಗ ಪತ್ರದಲ್ಲಿ ಒಪ್ಪಿಕೊಂಡಿದೆ.

ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಶಿವಮೊಗ್ಗ, ಮಂಗಳೂರು, ತುಮಕೂರು ಹಾಗೂ ಬೆಂಗಳೂರು ನಗರಗಳನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಆಯ್ಕೆ ಮಾಡಿತ್ತು.

2016ರ ಜನವರಿಯಲ್ಲಿ ಆಯ್ಕೆ ಮಾಡಲಾಗಿದ್ದ ಮೊದಲ ಎರಡು ನಗರಗಳಾದ ದಾವಣಗೆರೆ ಮತ್ತು ಬೆಳಗಾವಿ ಅಭಿವೃದ್ಧಿಗೆ ಕ್ರಮವಾಗಿ ಕೇವಲ ₹14.41 ಮತ್ತು ₹23.63 ಕೋಟಿ ಮಾತ್ರ ವಿನಿಯೋಗಿಸಲಾಗಿದೆ. 2016ರ ಮೇ ತಿಂಗಳಿನಲ್ಲಿ ಆಯ್ಕೆಯಾದ ಬೆಂಗಳೂರು ಕಾಮಗಾರಿಗೆ ಈವರೆಗೆ ಆಗಿರುವ ವೆಚ್ಚ ₹3.79 ಕೋಟಿ.

ನಗರ ಪ್ರದೇಶಗಳಿಗೆ ಆಧುನಿಕ ಸೌಲಭ್ಯ ಕಲ್ಪಿಸಲು 2015ರಲ್ಲಿ ಎನ್‌ಡಿಎ ಸರ್ಕಾರ ’ಸ್ಮಾರ್ಟ್ ಸಿಟಿ‘ ಯೋಜನೆಗೆ ಚಾಲನೆ ನೀಡಿತ್ತು. ಪ್ರತಿ ನಗರಕ್ಕೆ ತಲಾ ₹500 ಕೋಟಿ ಆರ್ಥಿಕ ನೆರವು ಪ್ರಕಟಿಸಿತ್ತು. ಸ್ಮಾರ್ಟ್ ರಸ್ತೆಗಳು, ಕೆರೆಕಟ್ಟೆ ಸರೋವರಗಳ ಅಭಿವೃದ್ಧಿ, ಕಾಲುನಡಿಗೆ ಮತ್ತು ಸೈಕಲ್ ಪಥಗಳ ನಿರ್ಮಾಣ, ಸ್ಮಾರ್ಟ್ ತರಗತಿಗಳು ಹಾಗೂ ಆರೋಗ್ಯ ಸೌಲಭ್ಯಗಳ ಸುಧಾರಣೆ ಈ ಯೋಜನೆಯಲ್ಲಿ ಸೇರಿವೆ.

ಸಣ್ಣ ನಗರಗಳೇ ವಾಸಿ

ಸ್ಮಾರ್ಟ್ ಸಿಟಿ ಯೋಜನೆ ಜಾರಿ ಮಾಡುವಲ್ಲಿ ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಹಿಮಾಚಲ ಪ್ರದೇಶ ಹಾಗೂ ಪಂಜಾಬ್ ಹಿಂದುಳಿದಿವೆ.

ಸ್ಮಾರ್ಟ್‌ಸಿಟಿ ಯೋಜನೆ ಜಾರಿ ಮಾಡುವಲ್ಲಿ ಸೂರತ್, ನಾಗಪುರ, ಇಂದೋರ್, ವಾರಾಣಸಿ, ಉದಯಪುರನಂತಹ ಸಣ್ಣ ನಗರಗಳು ಬಹಳ ಮುಂದಿವೆ. ದೆಹಲಿಯಲ್ಲಿ ಇತ್ತೀಚೆಗೆ ಜರುಗಿದ ಮರುವಿಮರ್ಶಾ ಸಭೆಯಲ್ಲಿ ಈ ವಿಷಯ ಕಂಡು ಬಂದಿದೆ. ಯೋಜನೆ ಜಾರಿಗಾಗಿ ವಿಶೇಷ ಉದ್ದೇಶ ಏಜೆನ್ಸಿಯ ಸ್ಥಾಪನೆ ಮತ್ತು ಕಾಮಗಾರಿಗಳನ್ನು ಗುರುತಿಸಿ ಟೆಂಡರ್ ಅಂತಿಮಗೊಳಿಸುವಲ್ಲಿ ವಿಳಂಬ ಆಗಿರುವುದೇ ಈ ರಾಜ್ಯಗಳು ಹಿಂದೆ ಬೀಳಲು ಕಾರಣ ಎಂದು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಮೂಲಗಳು ತಿಳಿಸಿವೆ.

ತಿಂಗಳಿಗೊಮ್ಮೆ ಸಭೆ: ಖಾದರ್‌

‘ಇದೊಂದು ವಿನೂತನ ಯೋಜನೆ. ಇದಕ್ಕಾಗಿ ಹೊಸ ಮಾರ್ಗಸೂಚಿಗಳನ್ನು ಸಿದ್ಧಪಡಿಸಬೇಕಿದೆ. ಯೋಜನಾ ಸಲಹಾಗಾರರನ್ನು ನೇಮಿಸಬೇಕಿದೆ. ಎಲ್ಲ ನಗರಗಳು ಒಂದೇ ಸಲ ಈ ಯೋಜನೆಗೆ ಆಯ್ಕೆಯಾಗಿಲ್ಲ. ಹಾಗಾಗಿ, ಹೆಚ್ಚಿನ ಅನುದಾನ ಬಳಕೆಯಾಗಿಲ್ಲ’ ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್‌ ಸ್ಪಷ್ಟಪಡಿಸಿದರು.

‘ಏಳು ನಗರಗಳಲ್ಲಿ ₹21.48 ಕೋಟಿ ವೆಚ್ಚದ ಏಳು ಕಾಮಗಾರಿ ಪೂರ್ಣಗೊಳಿಸಿದ್ದೇವೆ. ₹704 ಕೋಟಿ ವೆಚ್ಚದ 74 ಕಾಮಗಾರಿಗಳು ಪ್ರಗತಿಯಲ್ಲಿವೆ. ₹1,776 ಕೋಟಿ ವೆಚ್ಚದ 87 ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಸಾರ್ವಜನಿಕ ಸಹಭಾಗಿತ್ವದಲ್ಲಿ ₹233 ಕೋಟಿ ವೆಚ್ಚದ ಐದು ಕೆಲಸಗಳು ಅನುಷ್ಠಾನ ಹಂತದಲ್ಲಿವೆ ಹಾಗೂ ₹869 ಕೋಟಿ ವೆಚ್ಚದ 9 ಕೆಲಸಗಳು ಟೆಂಡರ್‌ ಹಂತದಲ್ಲಿವೆ. ಇನ್ನಷ್ಟು ವೇಗ ನೀಡಲು ಸ್ಥಳೀಯ ಮಟ್ಟದಲ್ಲಿ ತಿಂಗಳಿಗೊಂದು ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT