ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯತಿಧರ್ಮದ ಚೌಕಟ್ಟು ಮೀರದೆ ಸಮಾಜಸೇವೆ

ಮಠಗಳ ಕಟ್ಟುಪಾಡು ಸಡಿಲಿಸಿ ಸಮಾಜಕ್ಕೆ ಹತ್ತಿರವಾಗಿಸುವಲ್ಲಿ ಯಶಸ್ವಿ
Last Updated 30 ಡಿಸೆಂಬರ್ 2019, 9:59 IST
ಅಕ್ಷರ ಗಾತ್ರ

ಉಡುಪಿ: ಅಗಾಧ ಪಾಂಡಿತ್ಯ, ವೈಚಾರಿಕ ಸಂತ, ಕವಿ, ಸಂಸ್ಕೃತಭಾಷಾ ಪಂಡಿತ, ಪ್ರಖರ ಹಿಂದುತ್ವವಾದಿ, ಹಿಂದೂ ಧರ್ಮದ ರಾಯಭಾರಿ –ಎಂದೆಲ್ಲ ಕರೆಸಿಕೊಂಡ ಪೇಜಾವರಶ್ರೀಗಳದ್ದು ಬಹುಮುಖ ವ್ಯಕ್ತಿತ್ವ. ಅಷ್ಠಮಠಗಳ ಇತರ ಯತಿಗಳದ್ದು ಒಂದು ತೂಕವಾದರೆ, ಪೇಜಾವರ ಶ್ರೀಗಳದ್ದು ಮತ್ತೊಂದು ತೂಕ.

ಮಾಧ್ವಪೀಠದ ಪ್ರಮುಖ ಯತಿಗಳಾದರೂ ಮಾಧ್ವ ಸಮಾಜದ ಸ್ವತ್ತಾಗಿ ಮಾತ್ರ ಉಳಿಯದೆ, ಸಮಸ್ತ ಹಿಂದೂ ಸಮಾಜದ ಅಘೋಷಿತ ನಾಯಕರಾದರು. ಯತಿಧರ್ಮದ ಚೌಕಟ್ಟಿನೊಳಗೆ ಮಡಿವಂತಿಕೆ ಕಳಚಿಟ್ಟು ಸಮಾಜ ಸುಧಾರಣೆ ಮಾಡಿ ಮೇಲ್ಪಂಕ್ತಿ ಹಾಕಿದರು.

ಕಟ್ಟುಪಾಡು ಸಡಿಲಿಕೆ:

ಮಾಧ್ವ ಪರಂಪರೆಯ ಕಟ್ಟುಪಾಡುಗಳನ್ನು ಸಡಿಲಿಸಿ, ಮಠಗಳನ್ನು ಸಮಾಜಕ್ಕೆ ಹತ್ತಿರವಾಗಿಸಿದ್ದು ಪೇಜಾವರರು. ಜಪ, ತಪ, ಮಡಿ, ಪೂಜೆ, ಪ್ರವಚನಗಳಿಗೆ ಯತಿಗಳು ಸೀಮಿತವಾಗುವುದು ಸಲ್ಲದು. ಯತಿಧರ್ಮಕ್ಕೆ ಚ್ಯುತಿ ಬಾರದಂತೆ ಸಮಾಜದೊಟ್ಟಿಗೆ ಸಾಗಬೇಕಾದ ಅನಿವಾರ್ಯತೆ ಇದೆ ಎಂದು ಒತ್ತಿ ಹೇಳಿದರು. ಅದನ್ನು ಅಕ್ಷರಶಃ ಪಾಲಿಸಿದರು.

ಗುರುಕುಲ ಶಿಕ್ಷಣಕ್ಕೆ ಒತ್ತು:

1956ರಲ್ಲಿಬೆಂಗಳೂರಿನಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠ ಆರಂಭಿಸುವ ಮೂಲಕ ಗುರುಕುಲ ಮಾದರಿಯ ಶಿಕ್ಷಣ ನೀಡುವ ಶ್ರೀಗಳ ಕನಸು ಸಾಕಾರವಾಗಿತ್ತು. ಧರ್ಮ, ಸಂಸ್ಕೃತಿ ರಕ್ಷಣೆ, ತತ್ವ–ಶಾಸ್ತ್ರಜ್ಞಾನ ಪ್ರಸಾರ, ಸಂಶೋಧನೆಯ ಉದ್ದೇಶದಿಂದ ಸ್ಥಾಪನೆಯಾದ ವಿದ್ಯಾಪೀಠ ದೇಶದ ಆದರ್ಶ ಗುರುಕುಲಗಳಲ್ಲಿ ಒಂದಾಗಿ ಬೆಳೆದು ನಿಂತಿದೆ. ನೂರಾರು ವಿದ್ವಾಂಸರನ್ನೂ ಯಾಜ್ಞಿಕರನ್ನೂ ತಯಾರು ಮಾಡಿದೆ. ಇಂದಿಗೂ ಅಲ್ಲಿ ವಿದ್ಯಾರ್ಥಿಗಳು ವಸತಿ, ಊಟದ ಸೌಲಭ್ಯದ ಜತೆಗೆ ವೇದ-ಶಾಸ್ತ್ರಾಭ್ಯಾಸ ಪಡೆಯುತ್ತಿದ್ದಾರೆ. ಹಲವು ತತ್ವಶಾಸ್ತ್ರದ ಗ್ರಂಥಗಳು ಭಾಷಾಂತರಗೊಂಡು ನಾಡಿನೆಲ್ಲೆಡೆ ಪ್ರಸಾರಗೊಂಡಿವೆ.

ದಿಟ್ಟ ಹೆಜ್ಜೆ:

ದಲಿತರೂ ಹಿಂದೂ ಸಮಾಜದವರು ಎಂದು ಗಟ್ಟಿ ಧ್ವನಿ ಎತ್ತಿದವರು ವಿಶ್ವೇಶ ತೀರ್ಥರು. ಮಠ, ದೇಗುಲ, ಮನೆ, ಸಾರ್ವಜನಿಕ ಪ್ರದೇಶಗಳಿಗೆ ಅನ್ಯಧರ್ಮದವರಿಗೆ ಪ್ರವೇಶ ಇರುವಾಗ, ದಲಿತರಿಗೆ ಏಕಿಲ್ಲ ಎಂಬ ಅವರ ನಿಲುವು ಅಸ್ಪೃಶ್ಯತೆ ವಿರುದ್ಧ ಹೆಜ್ಜೆ ಇರಿಸಲು ಕಾರಣವಾಯಿತು. ದಲಿತರನ್ನು ದೂರವಿಡುವುದು ಧರ್ಮಕ್ಕೆ, ಸಮಾಜಕ್ಕೆ ಮಾಡಿದ ಅವಮಾನ ಎಂದು ಘೋಷಿಸಿ, ದಲಿತರ ಕೇರಿಗಳಲ್ಲಿ ಪಾದಯಾತ್ರೆ ನಡೆಸಿದರು.

ಸಂಪ್ರದಾಯವಾದಿಗಳ ವಿರೋಧ ಕಟ್ಟಿಕೊಂಡರೂ ಅಸ್ಪೃಶ್ಯತೆ ವಿರುದ್ಧ ಇಟ್ಟ ಹೆಜ್ಜೆ ಹಿಂತೆಗೆಯಲಿಲ್ಲ. ತಮಿಳುನಾಡಿನ ಮೀನಾಕ್ಷಿಪುರಂನಲ್ಲಿ ದಲಿತರ ಸಾಮೂಹಿಕ ಮತಾಂತರದ ವಿರುದ್ಧ ಧ್ವನಿ ಎತ್ತಿ ಮತಾಂತರ ತಡೆಯುವಲ್ಲಿ ಯಶಸ್ವಿಯೂ ಆದರು.

‘ನಾನಾಜನಸ್ಯ ಶುಶ್ರೂಶಾ ಕರ್ಮಾಖ್ಯಾ ಕರವನ್ಮಿತೇಃ’ ಎಂಬ ಸಂಸ್ಕೃತ ಶ್ಲೋಕದಂತೆ, ‘ನಾವೆಲ್ಲರೂ ನೊಂದವರ ಸೇವೆ ಮೂಲಕ ದೇವರಿಗೆ ಸುಂಕ ಕಟ್ಟಬೇಕು’ ಎಂದರು. 1975ರಲ್ಲಿ ಕಲಬುರಗಿಯಲ್ಲಿ ಕ್ಷಾಮ ತಲೆದೋರಿದಾಗ ಗಂಜಿಕೇಂದ್ರ ತೆರೆದು ಸಂತ್ರಸ್ತರ ಸಾಂತ್ವನಕ್ಕೆ ನಿಂತರು.

ಆಂಧ್ರದ ಹಂಸಲದಿವಿಯಲ್ಲಿ ಬಿರುಗಾಳಿಗೆ ಸಿಲುಕಿ ಸಾವಿರಾರು ಮಂದಿ ನಿರ್ವಸಿತರಾದಾಗ ಮಠದಿಂದ 150 ಮನೆಗಳನ್ನು ಕಟ್ಟಿಸಿಕೊಟ್ಟರು. ಲಾತೂರಿನಲ್ಲಿ ಭೂಕಂಪ ಸಂತ್ರಸ್ತರ ಪುನರ್ವಸತಿಗೆ ನೆರವು ನೀಡಿದರು.

ಬೆಂಗಳೂರಿನಲ್ಲಿ ಬಡರೋಗಿಗಳ ಸೇವೆಗೆ ಶ್ರೀಕೃಷ್ಣ ಸೇವಾಶ್ರಮ,ಉಡುಪಿಯಲ್ಲಿ ಶ್ರೀಕೃಷ್ಣ ಚಿಕಿತ್ಸಾಲಯ ನಿರ್ಮಿಸಲಾಗಿದೆ.ವೈದಿಕ ಶಿಕ್ಷಣದ ಜೊತೆಗೆ ಲೌಕಿಕ ವಿದ್ಯಾಭ್ಯಾಸವೂ ಮುಖ್ಯ ಎಂದು ಅರಿತು ಶಾಲಾ ಕಾಲೇಜುಗಳನ್ನು ತೆರದಿದ್ದಾರೆ.

ದೇಶದೆಲ್ಲೆಡೆ ಶಾಖಾ ಮಠ ಸ್ಥಾಪನೆ:

ತೀರ್ಥಕ್ಷೇತ್ರಗಳಲ್ಲಿ ಭಕ್ತರ ಸುಲಿಗೆ ತಡೆಯಲು ದೇಶದ ಹಲವೆಡೆ ಯಾತ್ರಿ ನಿವಾಸ ಹಾಗೂ ಶಾಖಾ ಮಠಗಳನ್ನು ತೆರೆಯಲಾಗಿದೆ. ಹಿಮಾಲಯದ ಬದರಿನಾಥ, ತಿರುಪತಿಯ ಉಡುಪಿ ಮಠ, ಹರಿದ್ವಾರದ ಮಧ್ವಾಶ್ರಮ, ರಾಮೇಶ್ವರ, ವೃಂದಾವನ, ಜಗನ್ನಾಥ ಪುರಿ, ಕಾಶಿ ಕ್ಷೇತ್ರಗಳಲ್ಲಿ ಯಾತ್ರಿಕರ ವಸತಿ ಗೃಹಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT