ಸೋಮವಾರ, ಸೆಪ್ಟೆಂಬರ್ 16, 2019
26 °C
ಎರಡು ದಿನಗಳ ರಾಜ್ಯ ಮಟ್ಟದ ಇತಿಹಾಸ ಸಮ್ಮೇಳನ ಮುಕ್ತಾಯ

ಲಕ್ಷ್ಮಣ ತೆಲಗಾವಿಗೆ ಸೋದೆ ಸದಾಶಿವರಾಯ ಪ್ರಶಸ್ತಿ ಪ್ರದಾನ

Published:
Updated:
Prajavani

ಶಿರಸಿ: ಸಾಮಂತ ಅರಸರಲ್ಲಿ ಒಬ್ಬರಾಗಿರುವ ‘ಸೋದೆ ಸದಾಶಿವರಾಯ’ ಹೆಸರಿನಲ್ಲಿ ನೀಡುವ ಪ್ರಶಸ್ತಿಯನ್ನು ಇತಿಹಾಸಕಾರ ಚಿತ್ರದುರ್ಗದ ಪ್ರೊ. ಲಕ್ಷ್ಮಣ ತೆಲಗಾವಿ ಅವರಿಗೆ ಭಾನುವಾರ ಮುಕ್ತಾಯಗೊಂಡ ರಾಜ್ಯ ಮಟ್ಟದ ಇತಿಹಾಸ ಸಮ್ಮೇಳನದಲ್ಲಿ ಪ್ರದಾನ ಮಾಡಲಾಯಿತು.

ತಾಲ್ಲೂಕಿನ ಸೋಂದಾ ಸ್ವರ್ಣವಲ್ಲಿ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹಾಗೂ ಸ್ವಾದಿ ದಿಗಂಬರ ಜೈನ ಮಠಾಧೀಶ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿದರು.

ಸ್ವರ್ಣವಲ್ಲಿ ಸ್ವಾಮೀಜಿ ಮಾತನಾಡಿ, ‘ಭಾರತದಲ್ಲಿ ರಾಜರ ಇತಿಹಾಸಕ್ಕೆ ಸಿಕ್ಕಿದ ಮಹತ್ವ ಅಧ್ಯಾತ್ಮ ಸಾಧಕರು, ಪ್ರಾಚೀನ ವಿಜ್ಞಾನಿಗಳು, ಐತಿಹಾಸಿಕ ಕಲಾವಿದರಿಗೂ ಸಿಗಬೇಕು. ಆಧ್ಯಾತ್ಮಿಕ ಸಾಧಕರ ಚರಿತ್ರೆ ವಿವರವಾಗಿ ಲಭ್ಯವಾಗಬೇಕು. ಸಾಮ್ರಾಜ್ಯ ಸ್ಥಾಪಕರ ಇತಿಹಾಸದಂತೆ, ಪರಂಪರೆಗೆ ಕೊಡುಗೆ ನೀಡಿದವರ ಹೆಸರು ಚಿರಸ್ಥಾಯಿಯಾಗಬೇಕು’ ಎಂದರು.

ಸ್ವಾದಿ ಜೈನ ಮಠಾಧೀಶರು ಮಾತನಾಡಿ, ‘ಮಠ–ಮಂದಿರಗಳ ಇತಿಹಾಸ ಸುದೀರ್ಘವಾಗಿದ್ದು, ಕೆಲ ದಾಖಲೆಗಳು ಮಾತ್ರ ಲಭ್ಯವಾಗಿವೆ. ಈವರೆಗೂ ಅಗೋಚರವಾಗಿ ಉಳಿದಿರುವ ಚಾರಿತ್ರಿಕ ಮಹತ್ವದ ದಾಖಲೆಗಳ ಶೋಧನಗೆ ಇತಿಹಾಸ ಸಂಶೋಧಕರು ಮಹತ್ವ ನೀಡಬೇಕು’ ಎಂದು ಸಲಹೆ ಮಾಡಿದರು. 

ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯರ ವಂಶಸ್ಥರಾಗಿರುವ ಆನೆಗೊಂದಿ ಸಂಸ್ಥಾನದ ರಾಜಾ ಕೃಷ್ಣದೇವರಾಯ ಅವರನ್ನು ಸನ್ಮಾನಿಸಲಾಯಿತು. ಸಂಸ್ಕೃತಿ ಚಿಂತಕ ದಿವಾಕರ ಕೆರೆಹೊಂಡ ಸಮಾರೋಪ ಮಾತನಾಡಿದರು. 

ಇತಿಹಾಸತಜ್ಞ ಡಾ.ಎಚ್.ಎಸ್.ಗೋಪಾಲರಾವ್ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ವೆಂಕಟಗಿರಿ ದಳವಾಯಿ, ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರಾ ಇಲಾಖೆ ನಿರ್ದೇಶಕ ಡಾ.ಆರ್.ಗೋಪಾಲ, ಐಸಿಎಚ್ಆರ್ ಪ್ರಾದೇಶಿಕ ನಿರ್ದೇಶಕ ಡಾ.ಎಸ್.ಕೆ.ಅರುಣಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಶಾಸನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಅಮರೇಶ ಯತಗಲ್ ಇದ್ದರು. ಸಮ್ಮೇಳನದ ಸಂಚಾಲಕ ಲಕ್ಷ್ಮೀಶ ಸೋಂದಾ ಸ್ವಾಗತಿಸಿದರು. ವಿ.ಎಂ.ಭಟ್ಟ ನಿರೂಪಿಸಿದರು.

Post Comments (+)