ಸರ್ಕಾರಿ ಆಸ್ಪತ್ರೆಗಳಿಗೆ ಸೌರ ‘ಶಕ್ತಿ’

7
ಬೆಳಗಾವಿ ಜಿಲ್ಲೆಯಲ್ಲಿ ಸೌರಫಲಕ ಅಳವಡಿಕೆಯಿಂದ ಅನುಕೂಲ

ಸರ್ಕಾರಿ ಆಸ್ಪತ್ರೆಗಳಿಗೆ ಸೌರ ‘ಶಕ್ತಿ’

Published:
Updated:
Deccan Herald

ಬೆಳಗಾವಿ: ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳು ಸೌರಶಕ್ತಿಯ ಸದ್ಬಳಕೆಗೆ ಮುಂದಾಗಿದ್ದು, ಈ ಮೂಲಕ ವಿದ್ಯುತ್‌ ಸ್ವಾವಲಂಬನೆ ಸಾಧಿಸುವ ಪ್ರಯತ್ನ ನಡೆದಿದೆ.

ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆ, 139 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 16 ಸಮುದಾಯ ಆರೋಗ್ಯ ಕೇಂದ್ರಗಳು, 9 ತಾಲ್ಲೂಕು ಆಸ್ಪತ್ರೆ ಹಾಗೂ 12 ನಗರ ಆರೋಗ್ಯ ಕೇಂದ್ರಗಳಿವೆ. ಇವುಗಳಲ್ಲಿ 80 ಆಸ್ಪತ್ರೆಗಳು ದಿನದ 24 ತಾಸೂ ಸೇವೆ ಒದಗಿಸುತ್ತಿವೆ. ಇಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾದಾಗ ಆರೋಗ್ಯ ಸೇವೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಜನರೇಟರ್‌ಗಳ ಮೊರೆ ಹೋಗಲಾಗಿತ್ತು.

ಆದರೆ, ಜನರೇಟರ್‌ಗಳ ಜೊತೆ ಜೊತೆಗೇ ಸೌರಶಕ್ತಿಯನ್ನೂ ಬಳಸಿಕೊಳ್ಳುವ ಬಗ್ಗೆ ಯೋಚಿಸಿ, ಇತ್ತೀಚಿನ ದಿನಗಳಲ್ಲಿ ಕಟ್ಟಡಗಳ ಮೇಲೆ ಸೌರಫಲಕಗಳನ್ನು ಅಳವಡಿಸಲಾಗುತ್ತಿದೆ.

ಬಹುತೇಕ ಕಡೆ, ಕನಿಷ್ಠ 5 ಕಿಲೋವಾಟ್‌ನಿಂದ ಗರಿಷ್ಠ 10 ಕಿಲೋವಾಟ್‌ ಸಾಮರ್ಥ್ಯದ ಫಲಕಗಳನ್ನು ಅಳವಡಿಸಲಾಗಿದೆ. ಪ್ರತಿ 10 ಕೆ.ವಿ. ಸೋಲಾರ್‌ ಘಟಕದಿಂದ ನಿತ್ಯ 40ರಿಂದ 60 ಕೆ.ವಿ. ವಿದ್ಯುತ್‌ ಉತ್ಪಾದನೆಯಾಗುತ್ತಿದ್ದು, ಇದರಿಂದ ಸಾಂಪ್ರದಾಯಿಕ ವಿದ್ಯುತ್ ಮೇಲಿನ ಅವಲಂಬನೆ ತಗ್ಗಿದೆ.

60ಕ್ಕೂ ಹೆಚ್ಚು ಕಡೆ: ‘ಸೌರಶಕ್ತಿಯ ಸದ್ಬಳಕೆ ಇಂದಿನ ಅಗತ್ಯಗಳಲ್ಲೊಂದಾಗಿದೆ. ಇದಕ್ಕಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸೌರಶಕ್ತಿ ಘಟಕ ಸ್ಥಾಪನೆಗೆ ಆದ್ಯತೆ ನೀಡಲಾಗಿದೆ. ಕೇಂದ್ರ ಕಚೇರಿಯಿಂದಲೇ ಕೆಲವು ಆಸ್ಪತ್ರೆಗಳಿಗೆ ಸೌಲಭ್ಯ ಒದಗಿಸಲಾಗಿದೆ. ನಮ್ಮಲ್ಲಿ ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲೂ ಘಟಕಗಳಿವೆ. ಮುಖ್ಯವಾಗಿ 24 ಗಂಟೆಯೂ ಬಿಸಿನೀರಿನ ಅಗತ್ಯ ಬೀಳುವ ಪ್ರಸೂತಿ ಆಸ್ಪತ್ರೆಗಳಿಗೆ ಆದ್ಯತೆ ನೀಡಲಾಗಿದೆ. ಸೋಲಾರ್ ವಾಟರ್ ಹೀಟರ್‌ಗಳನ್ನೂ ಅಳವಡಿಸಲಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಪ್ಪಾಸಾಹೇಬ ನರಟ್ಟಿ ‘ಪ‍್ರಜಾವಾಣಿ’ಗೆ ತಿಳಿಸಿದರು.

‘ಹಂತ ಹಂತವಾಗಿ ಎಲ್ಲ ಆಸ್ಪತ್ರೆಗಳಲ್ಲೂ ಸೌರಶಕ್ತಿ ಬಳಕೆಗೆ ಕ್ರಮ ಕೈಗೊಳ್ಳಲಾಗುವುದು. ಸರ್ಕಾರದಿಂದಲೂ ಇದಕ್ಕೆ ಉತ್ತೇಜನ ದೊರೆಯುತ್ತಿದೆ. ಈವರೆಗೆ 60ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಸೌರವಿದ್ಯುತ್‌ ಬಳಸಲಾಗುತ್ತಿದೆ. ಇದರಿಂದ ವಿದ್ಯುತ್‌ ಶುಲ್ಕದಲ್ಲಿ ಶೇ 50ರಷ್ಟು ಕಡಿಮೆಯಾಗುತ್ತಿದೆ. ದಿನವಿಡೀ ಬಿಸಿನೀರು ಲಭ್ಯವಿರುವಂತೆ ನೋಡಿಕೊಳ್ಳಲಾಗುತ್ತಿದ್ದು, ಅನುಕೂಲವಾಗುತ್ತಿದೆ’ ಎನ್ನುತ್ತಾರೆ.

ನಿರಂತರ ವಿದ್ಯುತ್‌ ಪೂರೈಕೆಗೆ ಸಹಕಾರಿ: ‘ಜಿಲ್ಲಾ ಆಸ್ಪತ್ರೆ, ಬಿಮ್ಸ್‌ (ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ) ಆವರಣದಲ್ಲಿರುವ ಹಾಸ್ಟೆಲ್‌ಗಳು, ವಸತಿ ಗೃಹಗಳ ಕಟ್ಟಡಗಳ ಮೇಲೆ ಸೌರವಿದ್ಯುತ್‌ ಘಟಕ ಅಳವಡಿಸಲಾಗಿದೆ. ಆಸ್ಪತ್ರೆಯಲ್ಲಿ ವಿಶೇಷವಾಗಿ ತೀವ್ರ ನಿಗಾ ಘಟಕ ಹಾಗೂ ಆಪರೇಷನ್‌ ಥಿಯೇಟರ್‌ಗಳಲ್ಲಿ ನಿರಂತರವಾಗಿ ವಿದ್ಯುತ್‌ ಪೂರೈಕೆ ಇರುವಂತೆ ನೋಡಿಕೊಳ್ಳಬೇಕಾಗುತ್ತದೆ. ಸೌರವಿದ್ಯುತ್‌ ಲಭ್ಯವಿರುವುದರಿಂದ, ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಆದಾಗ ಪರದಾಡುವ ಪ್ರಮೇಯವಿಲ್ಲ’ ಎಂದು ಬಿಮ್ಸ್‌ ನಿರ್ದೇಶಕ ಡಾ.ಷಣ್ಮುಖ ಟಿ. ಕಳಸದ ಮಾಹಿತಿ ನೀಡಿದರು.

* ಆಯಾ ಆಸ್ಪತ್ರೆಗಳ ಆರೋಗ್ಯ ರಕ್ಷಾ ಸಮಿತಿಯ ನಿಧಿಯಿಂದ, ಸೌರಶಕ್ತಿ ಘಟಕ ಅಳವಡಿಸಲು ಕ್ರಮ ಕೈಗೊಳ್ಳುವಂತೆ ವೈದ್ಯಾಧಿಕಾರಿಗಳು ಹಾಗೂ ಟಿಎಚ್‌ಒಗಳಿಗೆ ಸೂಚಿಸಲಾಗಿದೆ.
–ಡಾ.ಅಪ್ಪಾಸಾಹೇಬ ನರಟ್ಟಿ, ಡಿಎಚ್‌ಒ, ಬೆಳಗಾವಿ

ಮುಖ್ಯಾಂಶಗಳು

* ವಿದ್ಯುತ್‌ ಸ್ವಾವಲಂಬನೆಯತ್ತ ಹೆಜ್ಜೆ

* ವಿದ್ಯುತ್‌ ಶುಲ್ಕದಲ್ಲಿ ಗಣನೀಯ ಇಳಿಕೆ

* ಎಲ್ಲ ಆಸ್ಪತ್ರೆಗಳಲ್ಲೂ ಅಳವಡಿಕೆಗೆ ಚಿಂತನೆ

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !