ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರದಲ್ಲಿ ಭಾರತೀಯ ಸಂಸ್ಕೃತಿ ಉತ್ಸವ

ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ ಹೇಳಿಕೆ
Last Updated 18 ಜೂನ್ 2018, 10:12 IST
ಅಕ್ಷರ ಗಾತ್ರ

ಬೀದರ್: ‘ಭಾರತ ವಿಕಾಸ ಸಂಗಮ, ವಿಜಯಪುರದ ಸಿದ್ದೇಶ್ವರ ಸಂಸ್ಥೆ ಹಾಗೂ ಬಾಗಲಕೋಟೆ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘಗಳ ಸಹಯೋಗದಲ್ಲಿ ವಿಜಯಪುರದ ಕಗ್ಗೋಡದ ರಾಮನಗೌಡ ಆರ್. ಪಾಟೀಲ ಗೋರಕ್ಷಾ ಕೇಂದ್ರದಲ್ಲಿ ಡಿಸೆಂಬರ್‌ 24 ರಿಂದ 31 ವರೆಗೆ 5ನೇ ಭಾರತೀಯ ಸಂಸ್ಕೃತಿ ಉತ್ಸವ ನಡೆಯಲಿದೆ’ ಎಂದು ವಿಕಾಸ ಅಕಾಡೆಮಿ ಮುಖ್ಯ ಸಂಯೋಜಕರಾದ ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ ತಿಳಿಸಿದರು.

ನಗರದ ಪ್ರತಾಪನಗರದಲ್ಲಿ ಇರುವ ಜನಸೇವಾ ಶಾಲೆಯಲ್ಲಿ ವಿಕಾಸ ಅಕಾಡೆಮಿ ತಾಲ್ಲೂಕು ಸಂಯೋಜಕರ ಹಾಗೂ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ವಿಜಯಪುರದ ಸಿದ್ದೇಶ್ವರ ಶ್ರೀಗಳ ಉಪಸ್ಥಿತಿಯಲ್ಲಿ ಉತ್ಸವ ಜರುಗಲಿದ್ದು, ಈ ಉತ್ಸವದಲ್ಲಿ ಸಂತರು, ಸಾಧುಗಳು, ಸಾಧಕರು, ಕೃಷಿ ಪಂಡಿತರು, ಚಿಂತಕರು, ವಿಜ್ಞಾನಿಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ದಿಗ್ಗಜರು ಭಾಗವಹಿಸಲಿದ್ದಾರೆ.
ಎಂಟು ದಿನಗಳ ನಡೆಯುವ ಉತ್ಸವದಲ್ಲಿ 10 ಲಕ್ಷಕ್ಕಿಂತ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ’ ಎಂದು ಹೇಳಿದರು.

‘ಭಾರತದ ಶ್ರೇಷ್ಠ ಸಂಸ್ಕೃತಿಯನ್ನು ಮುಂದಿನ ಪಿಳಿಗೆಗೆ ತಿಳಿಸುವುದರ ಮೂಲಕ ಭಾರತದ ಶಕ್ತಿಯನ್ನು ಅನಾವರಣ ಮಾಡುವ ಉದ್ದೇಶದಿಂದ ಈ ಉತ್ಸವ ಆಯೋಜಿಸಲು ನಿರ್ಧರಿಸಲಾಗಿದೆ’ ಎಂದರು.

‘ಆಗಸ್ಟ್ 16, 17 ಹಾಗೂ 18 ರಂದು ಕಲಬುರ್ಗಿಯಲ್ಲಿ ವಿಶೇಷ ತರಬೇತಿ ನಡೆಯಲಿದ್ದು, ಶಿಕ್ಷಣ ತಜ್ಞ ಗುರುರಾಜ ಕರಜಗಿ ಮಾರ್ಗದರ್ಶನ ನೀಡುವರು. ಶಿಬಿರಲ್ಲಿ 16 ವರ್ಷದಿಂದ 23 ವರ್ಷದೊಳಗಿನ ಜಿಲ್ಲೆಯ ಎಲ್ಲ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಬಹುದು. ಮನೋ ವಿಜ್ಞಾನಿ ಡಾ.ಸಿ.ಆರ್.ಚಂದ್ರಶೇಖರ ಹಾಗೂ ರಾಮಚಂದ್ರರಾವ್‌ ಅವರು ತರಬೇತಿ ನೀಡಲಿದ್ದಾರೆ. ಜಿಲ್ಲೆಯ ಪ್ರತಿ ಕಾಲೇಜಿನಿಂದ ಒಬ್ಬ ಶಿಕ್ಷಕ ಹಾಗೂ ಕನಿಷ್ಠ 10 ವಿದ್ಯಾರ್ಥಿಗಳು ಭಾಗವಹಿಸಿ ಇದರ ಲಾಭ ಪಡೆಯಬೇಕು’ ಎಂದು ತಿಳಿಸಿದರು.

‘ಆಕ್ಟೋಬರ್‌ 7, 8 ಹಾಗೂ 9 ರಂದು ವಿಜಯಪುರ ಜಿಲ್ಲೆಯ ಸಂಗನಬಸವ ಶಾಲೆಯಲ್ಲಿ 18 ರಿಂದ 35 ವರ್ಷದ ಒಳಗಿನ ಯುವಜನರಿಗೆ ತರಬೇತಿ ನೀಡಲಾಗುವುದು. ಈ ತರಬೇತಿಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ಗೋವಾ, ತಮಿಳುನಾಡು, ಕೇರಳ, ಪಾಂಡಿಚರಿ, ತೆಲಂಗಾಣಾ, ಆಂಧ್ರಪ್ರದೇಶದಿಂದ ಯುವಜನರು ಭಾಗವಹಿಸಲಿದ್ದಾರೆ’ ಎಂದು ಹೇಳಿದರು.

‘ಎಸ್.ಎಸ್.ಎಸ್ ಸಂಸ್ಥೆ ವತಿಯಿಂದ ಬೀದರ್‌ನ ಪ್ರತಿ ತಾಲ್ಲೂಕಿನಲ್ಲಿ ತರಬೇತಿ ಕೇಂದ್ರ ಸ್ಥಾಪಿಸಿ 2025ಕ್ಕಿಂತ ಮುಂಚೆ ಶಿಕ್ಷಣ, ಕೃಷಿ, ಗ್ರಾಮೀಣ ಅಭಿವೃದ್ಧಿ, ಯುವ, ಆರೋಗ್ಯ, ಮಹಿಳಾ ಸಬಲೀಕರಣ, ಕಲೆ ಹಾಗೂ ಸಾಹಿತ್ಯ ಸೇರಿ ಎಂಟು ಕ್ಷೇತ್ರಗಳಲ್ಲಿ ಕನಿಷ್ಠ 5 ಸಾವಿರ ಜನರಿಗೆ ತರಬೇತಿ ನೀಡುವ ಗುರಿ ವಿಕಾಸ ಅಕಾಡೆಮಿ ಹೊಂದಿದೆ’ ಎಂದು ಹೇಳಿದರು.

ವಿಕಾಸ ಅಕಾಡೆಮಿಯ ಮಹಿಳಾ ವಿಭಾಗದ ಪ್ರಮುಖರಾದ ಲಕ್ಷ್ಮೀ ಸಿಂಪಿ, ನಿರ್ಮಲಾ ಹಿರೇಮಠ, ವಿಕಾಸ ಅಕಾಡೆಮಿ ಅಕಾಡೆಮಿ ಜಿಲ್ಲಾ ಘಟಕದ ಅಧ್ಯಕ್ಷ ಕರ್ನಲ್ ಶರಣಪ್ಪ ಸಿಕೆನಪುರೆ, ಸಂಚಾಲಕ ರೇವಣಸಿದ್ದಪ್ಪ ಜಲಾದೆ, ತಾಲ್ಲೂಕು ಸಂಚಾಲಕ ರವಿ ಶಂಭು, ನಗರ ಸಂಚಾಲಕ ಧನರಾಜ ರೆಡ್ಡಿ, ಪ್ರಮುಖರಾದ ಮಹಾದೇವ ನಾಗೂರೆ, ಸುಧಾಕರ ದೇಶಪಾಂಡೆ, ಸುರೇಶ ಚನಶಟ್ಟಿ, ಗುರುನಾಥ ವಟಗೆ, ಯಶವಂತರಾವ ಬಿರಾದಾರ, ಆರ್.ಜಿ.ಜಗತಾಪ, ಪ್ರೊ.ದೇವೆಂದ್ರ ಕಮಲ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT