ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ್ತಿ ಶಿಫಾರಸು ಮರಳಿ ಕಳಿಸಿ

ಕೆ.ಎಂ. ಜೋಸೆಫ್‌ ಪ್ರಕರಣ: ಮುಖ್ಯ ನ್ಯಾಯಮೂರ್ತಿಗೆ ಚೆಲಮೇಶ್ವರ್‌ ಪತ್ರ
Last Updated 10 ಮೇ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಉತ್ತರಾಖಂಡ ಮುಖ್ಯ ನ್ಯಾಯಮೂರ್ತಿ ಕೆ.ಎಂ. ಜೋಸೆಫ್‌ ಅವರನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಿಸುವಂತೆ ಕೇಂದ್ರಕ್ಕೆ ಮತ್ತೆ ಶಿಫಾರಸು ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ದೀಪಕ್‌ ಮಿಶ್ರಾ ಅವರನ್ನು ಅತ್ಯಂತ ಹಿರಿಯ ನ್ಯಾಯಮೂರ್ತಿ ಜೆ.ಚೆಲಮೇಶ್ವರ್‌ ಒತ್ತಾಯಿಸಿದ್ದಾರೆ.

ಸಿಜೆಐಗೆ ಪತ್ರ ಬರೆದಿರುವ ಚೆಲಮೇಶ್ವರ್‌ ಅವರು, ಕೆ.ಎಂ. ಜೋಸೆಫ್‌ ಅವರ ಹೆಸರನ್ನು ತುರ್ತಾಗಿ ಶಿಫಾರಸು ಮಾಡುವುದಕ್ಕಾಗಿ ಕೊಲಿಜಿಯಂ ಸಭೆ ಕರೆಯಬೇಕು ಎಂದು ಆಗ್ರಹಿಸಿದ್ದಾರೆ.

ಕೆ.ಎಂ. ಜೋಸೆಫ್‌ ಅವರಿಗೆ ಬಡ್ತಿ ನೀಡಲು ಕೊಲಿಜಿಯಂ ಮಾಡಿದ್ದ ಶಿಫಾರಸನ್ನು ಏಪ್ರಿಲ್‌ 26ರಂದು ಕೇಂದ್ರ ಸರ್ಕಾರ ವಾಪಸ್‌ ಕಳುಹಿಸಿತ್ತು. ಸುಪ್ರೀಂ ಕೋರ್ಟ್‌ನ ಮಾನದಂಡಗಳಿಗೆ ಅನುಗುಣವಾಗಿ ಈ ಶಿಫಾರಸು ಇಲ್ಲ. ಜೋಸೆಫ್‌ ಅವರು ಕೇರಳ ಹೈಕೋರ್ಟ್‌ನಿಂದ ಬಂದವರಾಗಿದ್ದು ಈ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ಸಾಕಷ್ಟು ಪ್ರಾತಿನಿಧ್ಯ ಇದೆ. ಅಲ್ಲದೆ ಅವರು ಹೈಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಮೂರ್ತಿಯೂ ಅಲ್ಲ ಎಂದು ಕೇಂದ್ರ ಸರ್ಕಾರ ಹೇಳಿತ್ತು.

ಜನವರಿ 10ರಂದು ಜೋಸೆಫ್‌ ಅವರ ಹೆಸರನ್ನು ಶಿಫಾರಸು ಮಾಡಲಾಗಿತ್ತು. ಆಗ ಇದ್ದ ಸನ್ನಿವೇಶವೇ ಈಗಲೂ ಇದೆ, ಯಾವುದೇ ಬದಲಾವಣೆ ಆಗಿಲ್ಲ. ಹಾಗಿರುವಾಗ ಜೋಸೆಫ್‌ ಅವರ ಬಡ್ತಿಯ ಶಿಫಾರಸಿಗೆ ತಾನು ಬದ್ಧನಾಗಿದ್ದೇನೆ ಎಂದು ಬುಧವಾರ ಸಂಜೆ ಬರೆದ ಪತ್ರದಲ್ಲಿ ಚೆಲಮೇಶ್ವರ್‌ ಪ್ರತಿಪಾದಿಸಿ
ದ್ದಾರೆ ಎಂದು ಸುಪ್ರೀಂ ಕೋರ್ಟ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜೋಸೆಫ್‌ ಬಡ್ತಿಗೆ ಸಂಬಂಧಿಸಿ ಕೇಂದ್ರ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಅವರು ಎತ್ತಿರುವ ಎಲ್ಲ ಪ್ರಶ್ನೆಗಳಿಗೂ ಚೆಲಮೇಶ್ವರ್‌ ಅವರು ತಮ್ಮ ಪತ್ರದಲ್ಲಿ ಉತ್ತರ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಜೂನ್‌ 22ರಂದು ಚೆಲಮೇಶ್ವರ್‌ ನಿವೃತ್ತರಾಗಲಿದ್ದಾರೆ.

ಕೊಲಿಜಿಯಂ ಸಭೆ ಬುಧವಾರ ಸಂಜೆ ನಡೆಯಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಚೆಲಮೇಶ್ವರ್‌ ಅವರು ರಜೆಯಲ್ಲಿದ್ದುದರಿಂದ ಆ ಸಭೆ ನಡೆದಿಲ್ಲ. ಸಿಜೆಐ, ಚೆಲಮೇಶ್ವರ್‌ ಅವರಲ್ಲದೆ, ನ್ಯಾಯಮೂರ್ತಿಗಳಾದ ರಂಜನ್‌ ಗೊಗೊಯ್‌, ಮದನ್‌ ಬಿ. ಲೋಕೂರ್‌ ಮತ್ತು ಕುರಿಯನ್‌ ಜೋಸೆಫ್‌ ಅವರು ಕೊಲಿಜಿಯಂ ಸದಸ್ಯರಾಗಿದ್ದಾರೆ.

ಕುರಿಯನ್‌ ಜೋಸೆಫ್‌ ಅವರು ಕಳೆದ ವಾರ ಮಾತನಾಡಿ, ಕೆ.ಎಂ. ಜೋಸೆಫ್‌ ಅವರ ಬಡ್ತಿ ಶಿಫಾರಸಿಗೆ ತಾವು ಬದ್ಧ ಎಂದು ಹೇಳಿದ್ದರು.

ಇಂದು ಕೊಲಿಜಿಯಂ ಸಭೆ?
ಸುಪ್ರೀಂ ಕೋರ್ಟ್‌ ಕೊಲಿಜಿಯಂನ ಸಭೆ ಶುಕ್ರವಾರ ನಡೆಯುವ ಸಾಧ್ಯತೆ ಇದೆ. ಕೆ.ಎಂ. ಜೋಸೆಫ್‌ ಅವರ ಬಡ್ತಿ ಶಿಫಾರಸು ವಿಚಾರವಾಗಿ ಕೊಲಿಜಿಯಂ ಸದಸ್ಯರ ನಡುವೆ ಸಮಾಲೋಚನೆ ನಡೆಯುತ್ತಿದೆ. ಶುಕ್ರವಾರವೇ ಸಭೆ ನಡೆದು ನಿರ್ಧಾರ ಕೈಗೊಳ್ಳಬಹುದು ಎಂದು ಮೂಲಗಳು ಹೇಳಿವೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT