ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು-ಮೈಸೂರು ಮಾರ್ಗದಲ್ಲಿ ರಾತ್ರಿ 7ರ ನಂತರ ಓಡಲಿದೆ ಮೆಮು ರೈಲು

ನೈಋತ್ಯ ರೈಲ್ವೆಯಿಂದ ರೈಲ್ವೆ ಮಂಡಳಿಗೆ ಪ್ರಸ್ತಾವ
Last Updated 19 ಡಿಸೆಂಬರ್ 2018, 1:19 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು–ರಾಮನಗರ ನಡುವೆ ಸಂಚರಿಸುವ ‘ಮೆಮು’ (MEMU- mainline electric multiple unit) ರೈಲನ್ನು ಮೈಸೂರಿನವರೆಗೂ ವಿಸ್ತರಿಸಲು ಅನುಮತಿ ಕೋರಿ ನೈಋತ್ಯ ರೈಲ್ವೆ ವ್ಯವಸ್ಥಾಪಕ ಎಚ್.ಎಂ.ದಿನೇಶ್ ರೈಲ್ವೆ ಮಂಡಳಿಗೆ ಪ್ರಸ್ತಾವ ಸಲ್ಲಿಸಿದ್ದಾರೆ.

ಬೆಂಗಳೂರು–ರಾಮನಗರ ನಡುವೆ ಸಂಚರಿಸುತ್ತಿರುವ ಈ ರೈಲನ್ನು (ಸಂಖ್ಯೆ 66539) ವಾರದಲ್ಲಿ ನಾಲ್ಕುದಿನ ಮೈಸೂರುವರೆಗೆ ವಿಸ್ತರಿಸಲು ನೈಋತ್ಯ ರೈಲ್ವೆ ಆಲೋಚಿಸುತ್ತಿದೆ. ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರಗಳಂದು ಈ ರೈಲು ‘ಮೈಸೂರು ರಾಮನಗರಂ ಮೆಮು ಸ್ಪೆಷಲ್’ (ಸಂಖ್ಯೆ 06576) ಆಗಿ ಸಂಚರಿಸಲಿದೆ.

ಈ ಮೊದಲು ಬೆಂಗಳೂರು–ಮೈಸೂರು ಮಾರ್ಗದಲ್ಲಿ ಓಡುತ್ತಿದ್ದಕಣ್ಣೂರು/ಕಾರವಾರ ಎಕ್ಸ್‌ಪ್ರೆಸ್‌ ರೈಲು ಕಳೆದ ಫೆಬ್ರುವರಿಯಿಂದ ವಾರದಲ್ಲಿ ನಾಲ್ಕುದಿನ ಶ್ರವಣಬೆಳಗೊಳ ಮಾರ್ಗದಲ್ಲಿ ಓಡುತ್ತಿದೆ. ಹೀಗಾಗಿ ಸಂಜೆ 7ರ ನಂತರ ಮೈಸೂರಿಗೆ ತೆರಳುವ ಪ್ರಯಾಣಿಕರು ರಾತ್ರಿ 10.30ರವರೆಗೆ ರೈಲುಗಳಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಬದಲಿ ವ್ಯವಸ್ಥೆಗಾಗಿ ಪ್ರಯಾಣಿಕರು ಒತ್ತಾಯಿಸುತ್ತಲೇ ಇದ್ದರು.

‘ಬೆಂಗಳೂರು ನಿಲ್ದಾಣವನ್ನು ರಾತ್ರಿ 7.55ಕ್ಕೆ ಬಿಡುವ ‘ರಾಮನಗರ ಮೆಮು’ ರಾತ್ರಿ 9ಕ್ಕೆ ರಾಮನಗರ ತಲುಪುತ್ತಿದೆ. ಇದೇ ರೈಲು ಇನ್ನು ಮುಂದೆ ರಾಮನಗರವನ್ನು ರಾತ್ರಿ 9ಕ್ಕೆ ಬಿಟ್ಟು ಮೈಸೂರು ನಿಲ್ದಾಣವನ್ನು ರಾತ್ರಿ 11.15ಕ್ಕೆ ತಲುಪಲಿದೆ. ಮೈಸೂರಿನಿಂದ ಬೆಂಗಳೂರು ಕಡೆಗೆ ಬರುವ ಸಮಯವನ್ನು ಶೀಘ್ರ ಅಂತಿಮಗೊಳಿಸಲಾಗುವುದು’ ಎಂದು ರೈಲ್ವೆ ಇಲಾಖೆ ಮೂಲಗಳನ್ನು ಉಲ್ಲೇಖಿಸಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.

ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಮನವಿ ಸಲ್ಲಿಸುವ ಚಿತ್ರವನ್ನು ಸಂಸದ ಪ್ರತಾಪ್ ಸಿಂಹ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ‘ನನ್ನ ಕೋರಿಕೆ ಮನ್ನಿಸಿ ರಾಮನಗರ ರೈಲನ್ನು ಮೈಸೂರುವರೆಗೆ ವಿಸ್ತರಿಸಲು ಅಧಿಕಾರಿಗಳಿಗೆ ರೈಲ್ವೆ ಸಚಿವರು ಸೂಚಿಸಿದ್ದಾರೆ. ಬೇಗ ಇದು ಕಾರ್ಯರೂಪಕ್ಕೆ ಬರಲಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT