ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳದ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿಯಿಂದ 850 ಮುಸ್ಲಿಂ ಅಭ್ಯರ್ಥಿಗಳು

ಮತಬ್ಯಾಂಕ್‌ ಮೇಲೆ ಕಣ್ಣು
Last Updated 6 ಮೇ 2018, 9:17 IST
ಅಕ್ಷರ ಗಾತ್ರ

ಕೋಲ್ಕತ್ತ: ಪಶ್ಚಿಮ ಬಂಗಾಳದ ಅಲ್ಪಸಂಖ್ಯಾತರ ಮತಬ್ಯಾಂಕ್‌ ವಶಪಡಿಸಿಕೊಳ್ಳಲು ಬಿಜೆಪಿಯು ಸ್ಥಳೀಯ ಸಂಸ್ಥೆಗಳಿಗೆ ನಡೆಯುವ ಚುನಾವಣೆಯಲ್ಲಿ ದಾಖಲೆಯ ಸಂಖ್ಯೆಯಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ.

ಮೇ 14ರಂದು ನಡೆಯುವ ಚುನಾವಣೆಯಲ್ಲಿ ಬಿಜೆಪಿಯಿಂದ 850ಕ್ಕೂ ಹೆಚ್ಚು ಅಲ್ಪಸಂಖ್ಯಾತ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಇಷ್ಟೊಂದು ಸಂಖ್ಯೆಯಲ್ಲಿ ಅಲ್ಪಸಂಖ್ಯಾತರಿಗೆ ಅವಕಾಶ ನೀಡಲಾಗಿದೆ. 2013ರಲ್ಲಿ ನಡೆದ ಸ್ಥಳೀಯ ಚುನಾವಣೆಯಲ್ಲಿ ಪಕ್ಷದಿಂದ 100ಕ್ಕಿಂತ ಕಡಿಮೆ ಅಲ್ಪಸಂಖ್ಯಾತರು ಸ್ಪರ್ಧಿಸಿದ್ದರು.

ಈ ಕುರಿತು ಟಿಎಂಸಿ ಪಕ್ಷದ ಮುಖಂಡ ಪಾರ್ಥ ಚಟರ್ಜಿ, ‘ಬಿಜೆಪಿ ನಾಮಪತ್ರ ಸಲ್ಲಿಸಲು ಅಲ್ಪಸಂಖ್ಯಾತರಿಗೆ ಅವಕಾಶ ನೀಡುತ್ತದೆ. ಹಾಗೆಯೇ ರಾಜ್ಯದಲ್ಲಿ ಕೋಮುಕಲಹಗಳನ್ನು ಉತ್ತೇಜಿಸುತ್ತದೆ. ಅಲ್ಪಸಂಖ್ಯಾತರು ನಮ್ಮ ಮೇಲೆ ಸಂಪೂರ್ಣ ನಂಬಿಕೆ ಇರಿಸಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ರಾಜ್ಯದಲ್ಲಿನ ಶೇ.30ರಷ್ಟು ಜನರು ಅಲ್ಪಸಂಖ್ಯಾತ ಸಮುದಾಯದವರು. ಟಿಎಂಸಿ ಮತ್ತು ಇತರೇ ಪಕ್ಷಗಳು ಬಿಂಬಿಸಿದಂತೆ ಬಿಜೆಪಿ ಅಲ್ಪಸಂಖ್ಯಾತರ ಶತ್ರುವಲ್ಲ. ಈ ಅರಿವು ಅಲ್ಪಸಂಖ್ಯಾತ ಸಮುದಾಯದಲ್ಲಿಯೂ ಮೂಡಿದೆ’ ಎಂದು ಬಿಜೆಪಿಯ ಅಲ್ಪಸಂಖ್ಯಾತರ ಮೋರ್ಚಾದ ಅಧ್ಯಕ್ಷ ಅಲಿ ಹುಸೈನ್‌ ಹೇಳಿದರು.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ದಿಲಿಪ್‌ ಘೋಷ್‌, ‘ಸ್ಥಳೀಯ ಚುನಾವಣೆಯಲ್ಲಿ ಪಕ್ಷದಿಂದ 2 ಸಾವಿರಕ್ಕೂ ಹೆಚ್ಚು ಅಲ್ಪಸಂಖ್ಯಾತರು ನಾಮಪತ್ರ ಸಲ್ಲಿಸಲಿದ್ದಾರೆ. ಈ ಪ್ರಕ್ರಿಯೆ ಶಾಂತಿಯುತವಾಗಿ ನಡೆಯುತ್ತಿದೆ’ ಎಂದು ಹೇಳಿದರು.

‘ಅಭಿವೃದ್ಧಿಯಲ್ಲಿ ನಂಬಿಕೆ ಇರಿಸಿರುವ ನಮ್ಮ ಪಕ್ಷವನ್ನು ಬೆಂಬಲಿಸಲು ಅಲ್ಪಸಂಖ್ಯಾತರು ಮುಂದಾಗಬೇಕು. ನಮ್ಮ ಪಕ್ಷ ಕೇಂದ್ರವೂ ಸೇರಿದಂತೆ 20 ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಅಲ್ಲೆಲ್ಲಾ ಮುಸ್ಲಿಮರು ಯಾವುದೇ ಸಮಸ್ಯೆಗಳಿಲ್ಲದೆ, ಶಾಂತಿಯುತವಾಗಿ ಬದುಕುತ್ತಿದ್ದಾರೆ’ ಎಂದರು.

‘ನಾವು ಅಭ್ಯರ್ಥಿಯ ಜಾತಿ, ಧರ್ಮ ಆಧರಿಸಿ ಸ್ಪರ್ಧಿಸಲು ಅವಕಾಶ ನೀಡಲ್ಲ. ಗೆಲ್ಲುವ ಸಾಮರ್ಥ್ಯ ಆಧರಿಸಿ, ಅಲ್ಪಸಂಖ್ಯಾತರು ಹೆಚ್ಚಿರುವ ಪ್ರದೇಶಗಳಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT