ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಭಾರತದ ಪ್ರಥಮ ಪಂ.ದೀನದಯಾಳ್ ಅಧ್ಯಯನ ಪೀಠ ಉದ್ಘಾಟನೆ

ರೈತರಿಗೆ ನೀರು, ನದಿ ಜೋಡಣೆಗೆ ಒತ್ತು ನೀಡಲು ಸಲಹೆ
Last Updated 6 ಜೂನ್ 2019, 9:17 IST
ಅಕ್ಷರ ಗಾತ್ರ

ಬೆಳಗಾವಿ: ‘ಸ್ವಾತಂತ್ರ್ಯ ಬಂದ ನಂತರ ಭಾರತೀಯ ಸಮಾಜಕ್ಕೆ ಹೊಂದಿಕೊಳ್ಳುವಂತಹ ರಾಜನೀತಿ ಮತ್ತು ಆರ್ಥಿಕ ನೀತಿಯನ್ನು ರೂಪಿಸಿ ಅನುಷ್ಠಾನಕ್ಕೆ ತರುವುದು ಸಾಧ್ಯವಾಗಿಲ್ಲ. ಇನ್ನಾದರೂ ಈ ಕಾರ್ಯ ನಡೆಯುವ ಅಗತ್ಯವಿದೆ’ ಎಂದು ರಾಜ್ಯಪಾಲ ವಜೂಭಾಯಿ ಆರ್. ವಾಲಾ ಹೇಳಿದರು.

ಕೇಂದ್ರ ಸಂಸ್ಕೃತಿ ಸಚಿವಾಲಯದಿಂದ ದೊರೆತ ₹ 5.78 ಕೋಟಿ ಅನುದಾನದಲ್ಲಿ ದಕ್ಷಿಣ ಭಾರತದಲ್ಲಿಯೇ ಮೊದಲಿಗೆ ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಿರುವ ಪಂಡಿತ್ ದೀನದಯಾಳ್ ಉಪಾಧ್ಯಾಯ ಅಧ್ಯಯನ ಪೀಠವನ್ನು ರಾಜ್ಯಪಾಲ ವಜೂಭಾಯಿ ಆರ್. ವಾಲಾ ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಸಮುದ್ರಕ್ಕೆ ವ್ಯರ್ಥವಾಗಿ ಹರಿದು ಹೋಗುವ ನದಿಯ ನೀರನ್ನು ರೈತನ ಹೊಲಗಳಿಗೆ ಹರಿಸಲು ನದಿ ಜೋಡಣೆ ಮಾಡಬೇಕು ಎನ್ನುವ ಪರಿಕಲ್ಪನೆಯನ್ನು ದೀನದಯಾಳ್ ಹೊಂದಿದ್ದರು. ಸ್ವಾಭಿಮಾನದ ಜೀವನ ರೂಪಿಸುವ ಮೂಲಕ ಸದೃಢ ಭಾರತ ನಿರ್ಮಾಣ ಅವರ ಕನಸಾಗಿತ್ತು. ಅದನ್ನು ನನಸಾಗಿಸುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಬೇಕು’ ಎಂದು ಸಲಹೆ ನೀಡಿದರು.

‘ದೊಡ್ಡ ಜಲಾಶಯಗಳ ಬದಲಿಗೆ, ಸಣ್ಣ ಜಲಾಶಯಗಳನ್ನು ನಿರ್ಮಿಸಬೇಕು. ಈ ಮಾದರಿಯನ್ನು ಗುಜರಾತ್ ರಾಜ್ಯದಲ್ಲಿ ಅನುಸರಿಸಲಾಗಿದೆ. ಆ ರೀತಿ ಇಲ್ಲಿಯೂ ಆಗಬೇಕು. ಕಾವೇರಿ, ತುಂಗಭದ್ರಾ ಮತ್ತು ಕೃಷ್ಣಾ‌ ನದಿಗೆ ದೊಡ್ಡ ದೊಡ್ಡ ಜಲಾಶಯಗಳನ್ನು ಕಟ್ಟಲಾಗಿದೆ. ಆದರೆ, ನೀರಿನ ಕೊರತೆಯ ಸಮಸ್ಯೆ ಪರಿಹಾರವಾಗಿದೆಯೇ? ಚಿಕ್ಕ ಜಲಾಶಯಗಳಿಂದ ಆ ಭಾಗದಲ್ಲಿನ ಹೆಚ್ಚಿನ ಜನರಿಗೆ ಅನುಕೂಲವಾಗುತ್ತದೆ. ಹೀಗಾಗಿ, ಚಿಕ್ಕ ಜಲಾಶಯಗಳ ನಿರ್ಮಾಣಕ್ಕೆ ಆದ್ಯತೆ ಕೊಡಬೇಕು’ ಎಂದು ತಿಳಿಸಿದರು.

‘ರೈತರಿಗೆ ಸಾಲ ಕೊಡಬೇಕಾಗಿಲ್ಲ. ಅವರಿಗೆ ಬೇಕಾಗಿರುವುದು ನೀರು. ನದಿಗಳ‌ ಜೋಡಣೆಯಿಂದ ಇದು ಸಾಧ್ಯವಾಗುತ್ತದೆ. ಇದರೊಂದಿಗೆ ವಾಟರ್ ಗ್ರಿಡ್ ಯೋಜನೆ ಜಾರಿಗೊಳಿಸಬೇಕು. ರೈತರ ಅನುಕೂಲಕ್ಕಾಗಿ, ನದಿಗಳ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.

‘ದುಡಿಯುವ ಕೈಗಳಿಗೆ ಕೆಲಸ ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಉದ್ಯೋಗ ಸೃಷ್ಟಿ, ಹೂಡಿಕೆ ಹಾಗೂ ಕೌಶಲ ಅಭಿವೃದ್ಧಿಗೆ ಒತ್ತು ನೀಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಹೊಸದಾಗಿ ಎರಡು ಸಂಪುಟ ಸಮಿತಿಗಳನ್ನು ರಚಿಸಿರುವುದು ಒಳ್ಳೆಯ ಬೆಳವಣಿಗೆ’ ಎಂದು ಶ್ಲಾಘಿಸಿದರು.

ನೆರೆದಿದ್ದವರನ್ನು ಹುರಿದುಂಬಿಸಿ, ಭಾರತ ಮಾತೆಗೆ ಮೂರು ಬಾರಿ ಗಟ್ಟಿ ದನಿಯಲ್ಲಿ ಜೈಕಾರ ಹಾಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT