ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕೊಡಗಿನ ಆನೆ ಚೌಕೂರು ಹೆಬ್ಬಾಗಿಲಿನಲ್ಲಿ ರಾತ್ರಿ ಸಂಚಾರ ಬಂದ್?

Last Updated 8 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ನಾಗರಹೊಳೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ ವನ್ಯಜೀವಿ ವಿಭಾಗಕ್ಕೆ ಹೊಸದಾಗಿ 200 ಚದರ ಕಿ.ಮೀ ವ್ಯಾಪ್ತಿಯ ಮೀಸಲು ಅರಣ್ಯ ಪ್ರದೇಶ ಸೇರ್ಪಡೆಗೊಂಡಿದ್ದು, ಇದೀಗ ದಕ್ಷಿಣ ಕೊಡಗಿನ ಆನೆ ಚೌಕೂರು ಹೆಬ್ಬಾಗಿಲು ರಾತ್ರಿವೇಳೆ ಮುಚ್ಚಬಹುದು. ದಕ್ಷಿಣ ಕೊಡಗು ಮತ್ತು ಕೇರಳದ ಜನರ ವಾಹನ ಸಂಚಾರಕ್ಕೆ ಸಂಚಕಾರ ಬರಲಿದೆ ಎಂಬ ಆತಂಕವೊಂದು ಜನರನ್ನು ಕಾಡಲು ಆರಂಭಿಸಿದೆ. ಇಂತಹ ಚರ್ಚೆ ಎಲ್ಲೆಡೆ ಕೇಳಿಬರುತ್ತಿದೆ.

‘ರಾಷ್ಟ್ರೀಯ ವನ್ಯಜೀವಿ ಕಾಯ್ದೆ ಅನ್ವಯ ಅರಣ್ಯ ಮಾರ್ಗವನ್ನು ರಾತ್ರಿವೇಳೆ ಬಂದ್ ಮಾಡುವುದಕ್ಕೆ ಕನಿಷ್ಠ 15 ಕಿ.ಮೀ. ದೂರವಿರಬೇಕು. ಇಲ್ಲದಿದ್ದರೆ ಅದನ್ನು ವಾಹನ ಸಂಚಾರದಿಂದ ಮುಕ್ತ ಗೊಳಿಸಲು ಬರುವುದಿಲ್ಲ. ಇದಕ್ಕೆ ಸುಪ್ರೀಂ ಕೋರ್ಟ್ ಕೂಡ ಮಾನ್ಯತೆ ನೀಡುವುದಿಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಅರಣ್ಯಾಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಈಗ ಆನೆಚೌಕೂರು ವನ್ಯಜೀವಿ ವಿಭಾಗಕ್ಕೆ ಸೇರಿದ ಅಂತರ ರಾಜ್ಯ ಹೆದ್ದಾರಿ ಕೇವಲ 10 ಕಿ.ಮೀ. ದೂರವಿದೆ. ಇದರಿಂದ ಯಾವ ಕಾರಣದಿಂದಲೂ ಈ ಮಾರ್ಗದಲ್ಲಿ ರಾತ್ರಿವೇಳೆ ವಾಹನ ಸಂಚಾರಕ್ಕೆ ‘ಬ್ರೇಕ್’ ಬೀಳುವುದಿಲ್ಲ. ಭಾರತೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಈ ಸಂಬಂಧ ಸರ್ವೆ ನಡೆಸಿದ್ದು, ಮಾರ್ಗ ಬಂದ್ ಮಾಡುವ ಬದಲು 11 ಕಿ.ಮೀ. ದೂರದ ಅರಣ್ಯದೊಳಗಿನ ಅಂತರ ರಾಜ್ಯ ಹೆದ್ದಾರಿಯಲ್ಲಿ ಮೇಲ್ಸೇತುವೆ ನಿರ್ಮಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ.

ಇದರ ಜತೆಗೆ ರಾತ್ರಿವೇಳೆ ತಲಾ 5 ಕಿ.ಮೀಗೆ ಒಂದರಂತೆ ಗಸ್ತು ತಿರುಗುವ ವಿಶೇಷ ಅರಣ್ಯಾಧಿಕಾರಿ ಪಡೆಯನ್ನು ರಚಿಸಲಾಗುವುದು ಎಂದೂ ಅಧಿಕಾರಿ ಮಾಹಿತಿ ನೀಡಿದ್ದಾರೆ.

ರಾತ್ರಿವೇಳೆ ಸಂಚರಿಸುವ ವಾಹನಗಳಿಂದ ವನ್ಯಜಿವಿಗಳಿಗೆ ಉಂಟಾಗುತ್ತಿರುವ ಜೀವ ಹಾನಿಯನ್ನು ತಡೆ ಗಟ್ಟುವುದಕ್ಕಾಗಿ ಅರಣ್ಯದೊಳಗಿನ ಮಾರ್ಗದುದ್ದಕ್ಕೂ 500 ಮೀಟರ್‌ಗೆ ಒಂದರಂತೆ 21 ರಸ್ತೆ ಉಬ್ಬುಗಳನ್ನು ನಿರ್ಮಿಸಲಾಗಿದೆ. ಇದರಿಂದ ವಾಹನಗಳ ವೇಗ ನಿಯಂತ್ರಣಕ್ಕೆ ಬಂದಿದ್ದು ಕಳೆದ 3 ತಿಂಗಳಿನಿಂದ ಯಾವುದೇ ಪ್ರಾಣಿಗಳಿಗೆ ಜೀವ ಹಾನಿಯಾಗಿಲ್ಲ. ಆದರೂ, ಭವಿಷ್ಯದಲ್ಲಿ ವನ್ಯಜೀವಿಗಳ ಸ್ವತಂತ್ರ ಓಡಾಟಕ್ಕೆ ಧಕ್ಕೆಯಾಗದಿರಲಿ ಎಂಬ ಉದ್ದೇಶದಿಂದ ಮೇಲ್ಸೇತುವೆ ನಿರ್ಮಾಣಕ್ಕೆ ಚಿಂತನೆ ನಡೆದಿದೆ ಎಂಬ ಮಾಹಿತಿ ಅರಣ್ಯ ಇಲಾಖೆ ಮೂಲಗಳಿಂದ ತಿಳಿದು ಬಂದಿದೆ.

ಎಲ್ಲಿಂದ ಎಲ್ಲಿಯ ತನಕ?

ಹುಣಸೂರು ಕಡೆಯಿಂದ ಅರಣ್ಯವನ್ನು ಪ್ರವೇಶ ಮಾಡುವ ಅಳ್ಳೂರಿನಿಂದ ಹಿಡಿದು ಅರಣ್ಯ ಮುಕ್ತಾಯಗೊಳ್ಳುವ ಕೊಡಗಿನ ತಿತಿಮತಿ ಮಜ್ಜಿಗೆ ಹಳ್ಳದ ತನಕ ಮೇಲ್ಸೇತುವೆ ನಿರ್ಮಿಸಲು ಗಂಭೀರ ಚಿಂತನೆ ನಡೆದಿದೆ.

ಹೆದ್ದಾರಿ ಪ್ರಾಧಿಕಾರದಿಂದ ಪರಿಶೀಲನೆ

‘ಗೇಟ್ ಬಂದ್ ಮಾಡಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ಯಾವುದೇ ಪ್ರಸ್ತಾಪವಿಲ್ಲ. ಅರಣ್ಯದೊಳಗೆ ಚತುಷ್ಪಥ ರಸ್ತೆ ಅಥವಾ ಮೇಲ್ಸೇತುವೆ ನಿರ್ಮಾಣ ಮಾಡುವ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ತಂಡವು ಪರಿಶೀಲಿಸಿಕೊಂಡು ತೆರಳಿದೆ. ಆದರೆ, 11 ಕಿ.ಮೀ ದೂರದ ಅರಣ್ಯದೊಳಗೆ ಚತುಷ್ಪಥ ಮಾರ್ಗ ನಿರ್ಮಾಣ ಸಾಧ್ಯತೆ ಕಡಿಮೆ’ ಎಂದು ನಾಗರಹೊಳೆ ವನ್ಯಜೀವಿ ವಿಭಾಗದ ಎಎಸಿಎಫ್ ಪ್ರಸನ್ನಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT