ಆನೆ ದಂತ ಕಳವು: ಇಬ್ಬರ ವಿರುದ್ಧ ಕ್ರಮ?

7

ಆನೆ ದಂತ ಕಳವು: ಇಬ್ಬರ ವಿರುದ್ಧ ಕ್ರಮ?

Published:
Updated:

ಶಿವಮೊಗ್ಗ: ಇಲ್ಲಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಿಂದ ಕಳುವಾಗಿದ್ದ ಜೋಡಿ ಆನೆ ದಂತ ಪ್ರಕರಣದಲ್ಲಿ ಇಬ್ಬರು ಪೊಲೀಸರ ವಿರುದ್ಧ ಕ್ರಮ ಜರುಗಿಸಲು ಉನ್ನತಾಧಿಕಾರಿಗಳು ಮುಂದಾಗಿದ್ದಾರೆ.

ದೊಡ್ಡಪೇಟೆ ಠಾಣೆಯಲ್ಲಿ ಮೇ 2018ರಂದು ಎಫ್‌ಐಆರ್ ದಾಖಲಾದ ನಂತರ ಹೊಸನಗರ ಸಿಪಿಐ ಮಂಜುನಾಥ ಗೌಡ ಅವರನ್ನು ದಂತ ಕಳವು ಪ್ರಕರಣ ಭೇದಿಸಲು ತನಿಖಾಧಿಕಾರಿಯಾಗಿ ನೇಮಿಸಲಾಗಿತ್ತು.

ಹಲವು ಆಯಾಮಗಳಲ್ಲಿ ಪ್ರಕರಣದ ತನಿಖೆ ನಡೆಸಿದರೂ ಆನೆ ದಂತ ಹಾಗೂ ಆರೋಪಿಗಳು ಪತ್ತೆಯಾಗಿಲ್ಲ. ಹಾಗಾಗಿ, ಕಳುವಾಗಿರುವ ಅವಧಿಯಲ್ಲಿ ಎಸ್‌ಪಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಡ್‌ ಕಾನ್‌ಸ್ಟೆಬಲ್‌ಗಳಾದ ವಿನೋದ್ ಸೂರ್ಯವಂಶಿ, ಮಂಜುನಾಥ್ ಅವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗುತ್ತಿದೆ.

ಎಸ್‌ಪಿ ಕಚೇರಿ ಆವರಣದಲ್ಲಿದ್ದ ಶಿಲ್ಪಕಲಾಕೃತಿಗಳನ್ನು ಕುವೆಂಪು ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸುವಾಗ ಆನೆ ದಂತದ ವಿಚಾರ ಬೆಳಿಕಿಗೆ ಬಂದಿತ್ತು. 2017 ಅಕ್ಟೋಬರ್‌ನಲ್ಲಿ ಕಳುವಾಗಿರುವ ವಿಷಯ ಖಚಿತವಾಗಿತ್ತು. ತನಿಖೆ ನಡೆಸಿ ವರದಿ ನೀಡಲು ಹೆಚ್ಚುವರಿ ಎಸ್‌ಪಿ ಮುತ್ತುರಾಜ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ನೇಮಿಸಿದ್ದರು.

ದಂತಗಳು 2012–14 ಮಧ್ಯೆ ಕಳವುವಾಗಿವೆ. ಆದರೆ, ಅವುಗಳು ಹೇಗೆ ನಾಮತ್ತೆಯಾದವು. ಎಲ್ಲಿವೆ ಎಂಬ ಯಾವ ಸುಳಿವೂ ದೊರೆತಿಲ್ಲ ಎಂದು ಮುತ್ತುರಾಜ್ ವರದಿ ನೀಡಿದ್ದರು. ನಂತರ ಎಸ್‌ಪಿ ಕಚೇರಿ ಆಪ್ತ ಸಹಾಯಕ ಶ್ರೀನಾಥ್ ಎಫ್‌ಐಆರ್ ದಾಖಲಿಸಿದ್ದರು.

ಹಿಂದೆ ಎಸ್‌ಪಿ ಕಚೇರಿ ಆಪ್ತ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಿನೋದ್ ಸೂರ್ಯವಂಶಿ, ಎಚ್.ಸಿ. ಮಂಜುನಾಥ್, ಶಿವಪ್ರಕಾಶ್, ಬೀರಾನಾಯಕ್, ಮಹೇಶ್ ಹಾಗೂ ನಂದೀಶ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿತ್ತು. ಕೆಲವರ ಮನೆಗಳ ಮೇಲೆ ದಿಢೀರ್ ದಾಳಿ ನಡೆಸಿ, ತಪಾಸಣೆ ನಡೆಸಲಾಗಿತ್ತು. ಈಗ ಅಂತಿಮವಾಗಿ ಇಬ್ಬರ ವಿರುದ್ಧ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !