ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ಜಿಲ್ಲಾಧಿಕಾರಿ ಎಸ್‌. ರಂಗಪ್ಪ ಅಮಾನತು?

Last Updated 13 ಡಿಸೆಂಬರ್ 2018, 20:31 IST
ಅಕ್ಷರ ಗಾತ್ರ

ಬೆಳಗಾವಿ: ಬೆಂಗಳೂರು ದಕ್ಷಿಣ ತಾಲ್ಲೂಕಿನ ಬಿ.ಎಂ.ಕಾವಲಿನ 288 ಎಕರೆಯನ್ನು ಖಾಸಗಿಯವರಿಗೆ ಪರಭಾರೆ ಮಾಡಿರುವ ವಿಶೇಷ ಜಿಲ್ಲಾಧಿಕಾರಿ ಎಸ್‌.ರಂಗಪ್ಪ ಅವರು ಲೋಪ ಎಸಗಿದ್ದಾರೆ. ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ತಿಳಿಸಿದರು.

ವಿಧಾನಸಭೆಯಲ್ಲಿ ಗುರುವಾರ ಶೂನ್ಯ ವೇಳೆಯಲ್ಲಿ ಜೆಡಿಎಸ್‌ ಸದಸ್ಯ ಎ.ಟಿ.ರಾಮಸ್ವಾಮಿ ಅವರು ಈ ವಿಷಯವನ್ನು ಪ್ರಸ್ತಾಪಿಸಿದರು. ’ಪ್ರಜಾವಾಣಿ‘ಯ ವರದಿಯನ್ನು ಸದನದಲ್ಲಿ ಪ್ರದರ್ಶಿಸಿದರು.

’ಈ ವಿಷಯ ಕೇಳಿ ಬಹಳ ನೋವಾಗಿದೆ. ಇದನ್ನೆಲ್ಲ ನೋಡಿಕೊಂಡು ಸದನದಲ್ಲಿ ಇರಬೇಕೇ ಬೇಡವೇ‘ ಎಂದು ಪ್ರಶ್ನಿಸಿದರು. ‘2006ರಲ್ಲಿ ಸದನ ಸಮಿತಿ ಈ ಪ್ರದೇಶವನ್ನು ಪರಿಶೀಲಿಸಿ ವರದಿ ಸಿದ್ಧಪಡಿಸಿತ್ತು. ನಾವು ನಮ್ಮ ಭವಿಷ್ಯವನ್ನು ಪಣಕ್ಕೆ ಇಟ್ಟು ವರದಿ ಸಿದ್ಧಪಡಿಸಿದ್ದೆವು. 310 ಎಕರೆ ಜಾಗದ ಮೌಲ್ಯ ₹3 ಸಾವಿರ ಕೋಟಿ ಆಗುತ್ತದೆ. ನಕಲಿ ದಾಖಲೆ ಸೃಷ್ಟಿಸಿ ಮಂಜೂರಾತಿ ಮಾಡಲಾಗಿದೆ’ ಎಂದರು.

ಈ ಜಾಗವನ್ನು ಯಾರ ಹೆಸರಿಗೆ ಮಾಡಿಕೊಡಲಾಗಿದೆ ಎಂದು ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಪ್ರಶ್ನಿಸಿದರು. ’ಬಡವರಿಗೆ ಮಾಡಿಕೊಟ್ಟಿದ್ದರೆ ಹೋಗಲಿ ಎಂದು ಸುಮ್ಮನಾಗುತ್ತಿದ್ದೆ. ದುರಾಸೆ ಜನ ಹಾಗೂ ಹಣಕ್ಕೆ ಆಸೆ ಪಡುವವರ ಹೆಸರಿಗೆ ಮಾಡಿಕೊಡಲಾಗಿದೆ‘ ಎಂದು ರಾಮಸ್ವಾಮಿ ಹೇಳಿದರು.

ವಿಶೇಷ ಜಿಲ್ಲಾಧಿಕಾರಿ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತಿದ್ದೇವೆ ಎಂದು ದೇಶಪಾಂಡೆ ತಿಳಿಸಿದರು. ’ಅಧಿಕಾರಿಯನ್ನು ವರ್ಗಾವಣೆ ಮಾಡಿದರೆ ಸಾಲದು. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಂಜೆಯೊಳಗೆ ಆ ಅಧಿಕಾರಿಯನ್ನು ಅಮಾನತು ಮಾಡಿ‘ ಎಂದು ಕೆ.ಆರ್‌.ರಮೇಶ್‌ ಕುಮಾರ್‌ ಹೇಳಿದರು.

‘ಅಧಿಕಾರಿಯ ಅಮಾನತು ಮಾಡಿ ಎಂದು ನೀವು ಆದೇಶ ಹೊರಡಿಸಿರುವುದು ಸರಿಯಲ್ಲ’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಗಾದೆ ಎತ್ತಿದರು. ‘ನಾನು ಆದೇಶ ಮಾಡಿಲ್ಲಪ್ಪ, ವಿನಮ್ರವಾಗಿ ಮನವಿ ಮಾಡಿದ್ದೇನೆ’ ಎಂದು ರಮೇಶ್‌ ಕುಮಾರ್‌ ಸ್ಪ‍ಷ್ಟಪಡಿಸಿದರು. ಈ ವಿಷಯದ ಬಗ್ಗೆ ಸೋಮವಾರ ಚರ್ಚೆಗೆ ಅವಕಾಶ ಮಾಡಿಕೊಡುವುದಾಗಿ ರಾಮಸ್ವಾಮಿ ಅವರಿಗೆ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT