ಗಡಿ ಶಾಲೆಗಳ ಅಭಿವೃದ್ಧಿಗೆ ವಿಶೇಷ ಅನುದಾನ

7
ಮುಖ್ಯಮಂತ್ರಿ ಅಭಯ

ಗಡಿ ಶಾಲೆಗಳ ಅಭಿವೃದ್ಧಿಗೆ ವಿಶೇಷ ಅನುದಾನ

Published:
Updated:
Deccan Herald

ಬೆಳಗಾವಿ: ರಾಜ್ಯದ ಗಡಿಭಾಗದ ಶಾಲೆಗಳ ಅಭಿವೃದ್ಧಿಗೆ ಮುಂದಿನ ಬಜೆಟ್‌ನಲ್ಲಿ ವಿಶೇಷ ಅನುದಾನ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ವಿಧಾನಸಭೆಯಲ್ಲಿ ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಬಿ.ಶ್ರೀರಾಮುಲು ಪ್ರಶ್ನೆಗೆ ಉತ್ತರಿಸಿದ ಅವರು, ’ಈ ವರ್ಷ ಶಾಲೆಗಳ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗೆ ₹1,500 ಕೋಟಿ ಮೀಸಲಿಡಲಾಗಿದೆ‘ ಎಂದರು.

ರಾಜ್ಯದ 5,227 ಗ್ರಾಮಗಳಲ್ಲಿ ಶಾಲೆ ಇಲ್ಲ ಎಂಬ ‘ಪ್ರಜಾವಾಣಿ’ ವರದಿಯನ್ನು ಶ್ರೀರಾಮುಲು ಅವರು ಸದನದಲ್ಲಿ ಉಲ್ಲೇಖಿಸಿದರು.

‘ವಿದ್ಯಾರ್ಥಿಗಳಿಗೆ ಸೈಕಲ್‌ ವಿತರಣೆಯನ್ನು ಸಂಪೂರ್ಣ ರದ್ದು ಮಾಡಿಲ್ಲ. ಸೈಕಲ್‌ಗಳ ಗುಣಮಟ್ಟ ಕಳಪೆ ಗುಣಮಟ್ಟದ್ದು ಎಂಬ ದೂರು ಬಂದಿತ್ತು. ಹಾಗಾಗಿ, ತನಿಖೆಗೆ ಆದೇಶಿಸಿದ್ದೇನೆ’ ಎಂದರು. 

ವಿದ್ಯಾರ್ಥಿಗಳ ಕೊರತೆ ಕಾರಣಕ್ಕೆ ಯಾವುದೇ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಮುಚ್ಚಿಲ್ಲ. ಶೂನ್ಯ ದಾಖಲಾತಿ ಹೊಂದಿರುವ 318 ಶಾಲೆಗಳಲ್ಲಿ ತರಗತಿಗಳಲ್ಲಿ ನಡೆಯುತ್ತಿಲ್ಲ ಎಂದರು.

ನೀಟ್‌’ ಮಾಹಿತಿ ಸೋರಿಕೆ: ಪ್ರಕರಣದ ತನಿಖೆ

ಬೆಳಗಾವಿ: ನೀಟ್‌ ಪರೀಕ್ಷೆ ಬರೆದ ವಿದ್ಯಾರ್ಥಿಗಳ ವೈಯಕ್ತಿಕ ಹಾಗೂ ಶೈಕ್ಷಣಿಕ ವಿವರಗಳ ಮಾಹಿತಿ ಸೋರಿಕೆ ಪ್ರಕರಣದ ತನಿಖೆ ನಡೆಸಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ವಿಧಾನಸಭೆಯಲ್ಲಿ ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ವಿ.ಸೋಮಣ್ಣ ಪ್ರಶ್ನೆಗೆ ಉತ್ತರಿಸಿ, ’ನಮ್ಮ ಆಡಳಿತ ಭಾಷೆಯಲ್ಲೂ ಪರೀಕ್ಷೆ ನಡೆಸುವ ಕುರಿತು ತೀರ್ಮಾನ ತೆಗೆದುಕೊಳ್ಳುತ್ತೇವೆ‘ ಎಂದರು.

ವಿ.ಸೋಮಣ್ಣ, ’ಮಾಹಿತಿ ಸೋರಿಕೆ ಬಗ್ಗೆ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಜುಲೈ 21ರಂದು ವರದಿ ಪ್ರಕಟವಾಗಿದೆ. ಇದೊಂದು ಗಂಭೀರ ಪ್ರಕರಣ. ತನಿಖೆ ನಡೆಸಬೇಕು‘ ಎಂದು ಆಗ್ರಹಿಸಿದರು.

 ಶೆಟ್ಟರ್ ಚಾಟಿ

ಬೆಳಗಾವಿ: ಅಭಿವೃದ್ಧಿಯಲ್ಲಿ ಹಿಂದುಳಿದ ಉತ್ತರ ಕರ್ನಾಟಕ ಭಾಗದ ವಸ್ತುಸ್ಥಿತಿಯನ್ನು ವಿಧಾನಸಭೆಯಲ್ಲಿ  ಬಿಜೆಪಿಯ ಜಗದೀಶ ಶೆಟ್ಟರ್‌ ಎಳೆ ಎಳೆಯಾಗಿ ಬಿಚ್ಚಿಟ್ಟರು.

ಈ ವೇಳೆ ‘ಪ್ರಜಾವಾಣಿ’ಯ ‘ಅನುಸಂಧಾನ’ ಅಂಕಣವನ್ನು ಉಲ್ಲೇಖಿಸಿದ ಅವರು, ರಾಜ್ಯ ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿದರು.

‘ಕುಮಾರಸ್ವಾಮಿ ಅವರದ್ದು ರಾತ್ರಿ ಸರ್ಕಾರ, ಹಗಲೆಲ್ಲ ನಿದ್ದೆ ಮಾಡುತ್ತಿದೆ’ ಎಂದು ರೈತನೊಬ್ಬ ಹೇಳಿದ ಮಾತು ಈ ಅಂಕಣದಲ್ಲಿದೆ. ಸರ್ಕಾರ ಯಾವ ರೀತಿ ಕೆಲಸ ಮಾಡುತ್ತಿದೆ ಎಂದು  ಲೇಖಕರು ಬಣ್ಣಿಸಿದ್ದಾರೆ ಎಂದು ಹೇಳಿದ ಅವರು, ರೈತ –ಲೇಖಕರ ಮಧ್ಯೆ ನಡೆದ ಸಂಭಾಷಣೆಯನ್ನು ಓದಿದರು.

‘ಎಲ್ಲಿಗೆ ಬಂತೋ ಸಂಗಯ್ಯ ಎಂದರೆ, ಇದ್ದಂಗೆ ಇರೋ ಸಿದ್ದಯ್ಯ ಅಂದರಂತೆ ಎಂಬಂತಿದೆ ಸರ್ಕಾರದ ನಡೆ. ಈ ಅಂಕಣ ನೋಡಿಯಾದರೂ ಸಮ್ಮಿಶ್ರ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು’ ಎಂದರು. ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ‘ನಿರ್ಲಕ್ಷ್ಯ ಸೂಚ್ಯಂಕವೇ ಸಾಕ್ಷ್ಯ’ ಎಂಬ ವರದಿಯನ್ನೂ ಉಲ್ಲೇಖಿಸಿದರು. ಬಿಜೆಪಿ ಎ.ಎಸ್‌. ಪಾಟೀಲ ನಡಹಳ್ಳಿ ಕೂಡಾ ಧ್ವನಿಗೂಡಿಸಿದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !