ಶನಿವಾರ, ಜೂನ್ 6, 2020
27 °C
6,000 ಹೆಕ್ಟೇರ್‌ನಲ್ಲಿ ಬೆಳೆ; ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ

ರೈತ–ಚಿಂತಾಕ್ರಾಂತ | ಗೋವಿನಜೋಳ ಬೆಳೆದವರಿಗೆ ಸಂಕಷ್ಟ

ಬಸವರಾಜ ಹಲಕುರ್ಕಿ Updated:

ಅಕ್ಷರ ಗಾತ್ರ : | |

Prajavani

ನರಗುಂದ (ಗದಗ): ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾದ ಗೋವಿನಜೋಳವನ್ನು ಸುಮಾರು 6,000 ಹೆಕ್ಟೇರ್‌ನಲ್ಲಿ ಬೆಳೆದಿದ್ದು, ದರ ಕುಸಿತದಿಂದ ರೈತರು ಕಂಗೆಟ್ಟಿದ್ದಾರೆ.

ಲಾಕ್‌ಡೌನ್‍ಗಿಂತ ಮೊದಲು ಗೋವಿನಜೋಳ ಪ್ರತಿ ಕ್ವಿಂಟಲ್‍ಗೆ ₹1,800 ರಿಂದ ₹2 ಸಾವಿರ ದರ ಇತ್ತು. ಈಗ ₹1 ಸಾವಿರದಿಂದ ₹1,100ಕ್ಕೆ ಕುಸಿದಿದೆ. ಮಾಡಿದ ವೆಚ್ಚವೂ ಕೈಸೇರದ ಸ್ಥಿತಿ ಇದೆ. 

‘ಗೋವಿನಜೋಳ ಕಟಾವು ಮಾಡಿ, ಉತ್ತಮ ಬೆಲೆ ಬರುವವರೆಗೆ ರಾಶಿ ಮಾಡಲಾಗುತ್ತಿದೆ. ಈ ಬಾರಿ ಲಾಕ್‌ಡೌನ್‌ ಮತ್ತು ಅಕಾಲಿಕ ಮಳೆಯಿಂದ ರಾಶಿ ಮಾಡಲೂ ಸಾಧ್ಯವಾಗಲಿಲ್ಲ. ಈಗ ರಾಶಿ ಮಾಡಲು ಮುಂದಾದರೆ ಆಳಿನ ಕೂಲಿಗೆ ಮಾಡಿದ ವೆಚ್ಚವೂ ಬರೂದಿಲ್ಲ. ಅದಕ್ಕೆ ಅಲ್ಲಿಯೇ ಬಿಟ್ಟೇವಿ’ ಎಂದು ರೈತರು ಅಳಲು ತೋಡಿಕೊಳ್ಳುತ್ತಾರೆ.

‘ಗೋವಿನಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿಸುವ ಭರವಸೆ ಸಿಕ್ಕಿದ್ದರೂ ಇದುವರೆಗೂ ಖರೀದಿ ಕೇಂದ್ರ ಆರಂಭವಾಗಿಲ್ಲ’ ಎಂದು ರೈತ ಯಲ್ಲಪ್ಪ ಚಲುವಣ್ಣವರ ಹೇಳಿದರು.

**
ಗೋವಿನಜೋಳಕ್ಕೆ ಬೆಂಬಲ ಬೆಲೆಯಡಿ ಖರೀದಿ ಕೇಂದ್ರ ಸ್ಥಾಪಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.
-ಗುರುನಾಥಗೌಡ ಹುಡೇದಮನಿ, ಎಪಿಎಂಸಿ ಅಧ್ಯಕ್ಷ

**

ಗೋವಿನ ಜೋಳಕ್ಕೆ ಆರಂಭದಲ್ಲಿ ಉತ್ತಮ ಬೆಲೆ ಇತ್ತು. ಈಗ ಬೆಂಬಲ ಬೆಲೆ ಕೇಂದ್ರದ ಸಲುವಾಗಿ ಎಪಿಎಂಸಿ ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ.
-ಚನ್ನಪ್ಪ ಅಂಗಡಿ, ಸಹಾಯಕ ನಿರ್ದೇಶಕ, ಕೃಷಿ ಇಲಾಖೆ

‘ಸರ್ಕಾರವೇ ಈರುಳ್ಳಿ ಖರೀದಿಸಲಿ’
ಹಟ್ಟಿ ಚಿನ್ನದ ಗಣಿ (ರಾಯಚೂರು ಜಿಲ್ಲೆ): ಸಮೀಪದ ಆನ್ವರಿ ಗ್ರಾಮದ ರೈತ ಬಸವರಾಜು ಮಾಳಗಿ ಅವರು ಬೆಳೆದ ಈರುಳ್ಳಿ ಮಾರಾಟವಾಗದೆ ಹೊಲದಲ್ಲೇ ಕೊಳೆಯುತ್ತಿದೆ.

‘ಎರಡು ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದು, ₹ 80 ಸಾವಿರ ವೆಚ್ಚವಾಗಿದೆ. ಪ್ರಸ್ತುತ ₹ 200 ರಿಂದ ₹300ಕ್ಕೆ ಚೀಲ ಈರುಳ್ಳಿ ಕೇಳುತ್ತಿದ್ದಾರೆ. ಕನಿಷ್ಠ ₹700 ದರ ಸಿಕ್ಕರೆ ಕೊಂಚ ಲಾಭ ಸಿಗುತ್ತದೆ’ ಎಂದು ಬಸವರಾಜು ಅಳಲು ತೋಡಿಕೊಂಡರು.

‘ಅನ್ವರಿ, ಹೀರೆನಗನೂರು, ಗುರುಗುಂಟಾ, ಗೆಜ್ಜಲಗಟ್ಟಾ, ವೀರಾಪುರ ಗ್ರಾಮಗಳಲ್ಲಿ ಬೆಳೆದ ಈರುಳ್ಳಿ ಮಾರಾಟವಾಗದೇ ಹೊಲದಲ್ಲೇ ಉಳಿದಿದೆ. ಈರುಳ್ಳಿ ಖರೀದಿಗೆ ಸರ್ಕಾರವೇ ಮುಂದಾಗಬೇಕು’ ಎಂದು ರೈತರಾದ ಗಂಗಣ್ಣ, ವೆಂಕಟೇಶ, ಮೌನೇಶ ಮಾಳಗಿ ಒತ್ತಾಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು