ರಾಜಕೀಯದಲ್ಲಿ ಕ್ರೀಡಾತಾರೆಯರು...

ಬುಧವಾರ, ಮೇ 22, 2019
32 °C

ರಾಜಕೀಯದಲ್ಲಿ ಕ್ರೀಡಾತಾರೆಯರು...

Published:
Updated:
Prajavani

ಈಗ ರಾಜಕೀಯ, ಕ್ರೀಡೆ ಮತ್ತು ಸಿನಿಮಾ ರಂಗಗಳ ನಡುವೆ ಹೆಚ್ಚು ಅಂತರವೇನೂ ಉಳಿದಿಲ್ಲ. ಕ್ರೀಡೆಯಲ್ಲಿ ಹೆಸರು ಮಾಡಿದವರು ರಾಜಕಾರಣದಲ್ಲಿಯೂ ಛಾಪು ಮೂಡಿಸುತ್ತಿದ್ದಾರೆ. ಇದು ಭಾರತದ ರಾಜಕೀಯದಲ್ಲಿ ಮಾತ್ರವಲ್ಲ. ಬಹುತೇಕ ದೇಶಗಳಲ್ಲಿ ಮೈದಾನದಲ್ಲಿ ಅಬ್ಬರಿಸಿದ್ದ ಕ್ರೀಡಾಪಟುಗಳು ರಾಜಕೀಯ ರಂಗದಲ್ಲಿ ‘ಬ್ಯಾಟಿಂಗ್‌’ ಮಾಡಿದ್ದಾರೆ. ನರೇಂದ್ರ ಮೋದಿ ಅವರ ಸರ್ಕಾರದಲ್ಲಿ 2004ರ ಒಲಿಂಪಿಕ್ಸ್‌ನ  ಶೂಟಿಂಗ್‌ನ ಬೆಳ್ಳಿ ಪದಕ ಜಯಿಸಿದ್ದ ರಾಜ್ಯವರ್ಧನ್‌ ಸಿಂಗ್‌ ರಾಠೋಡ್ ಕ್ರೀಡಾ ಸಚಿವರಾಗಿದ್ದರು. ಕ್ರಿಕೆಟ್‌ನಿಂದ ನಿವೃತ್ತರಾದ ಬಳಿಕ ಮೊಹಮ್ಮದ್‌ ಅಜರುದ್ದೀನ್‌, ಕೀರ್ತಿ ಆಜಾದ್ ಹೀಗೆ ಅನೇಕರು ಸಕ್ರಿಯ ರಾಜಕಾರಣದಲ್ಲಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಥ್ಲೀಟ್ ಕೃಷ್ಣಾ ಪೂನಿಯಾ ಕೂಡ ತಮ್ಮ ಅದೃಷ್ಟವನ್ನು ಪಣಕ್ಕೊಡ್ಡಿದ್ದಾರೆ.

1) ಮೊಹಮ್ಮದ್ ಅಜರುದ್ದೀನ್‌ (ಕ್ರಿಕೆಟ್)

ಭಾರತ ಕ್ರಿಕೆಟ್ ತಂಡದ ನಾಯಕರಾಗಿದ್ದ ಮೊಹಮ್ಮದ್‌ ಅಜರುದ್ದೀನ್‌ 2009ರಲ್ಲಿ ಕಾಂಗ್ರೆಸ್ ಸೇರಿ ಉತ್ತರ ಪ್ರದೇಶದ ಮೊರದಾಬಾದ್‌ನಿಂದ ಸಂಸದನ ಸ್ಥಾನಕ್ಕೆ ಸ್ಪರ್ಧಿಸಿ ಜಯಿಸಿದ್ದರು. 1999ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ಸದ್ಯಕ್ಕೆ ಅವರು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ.

2) ನಫಿಸಾ ಅಲಿ (ಈಜು)

ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಎರಡು ಬಾರಿ ಚಿನ್ನದ ಪದಕ ಜಯಿಸಿದ್ದ ನಫಿಸಾ ಅಲಿ ರಾಜಕಾರಣದ ಅನುಭವ ಪಡೆದಿದ್ದು ತೃಣಮೂಲ ಕಾಂಗ್ರೆಸ್‌ ಮೂಲಕ. 2004ರಲ್ಲಿ ಆ ಪಕ್ಷದಿಂದ ದಕ್ಷಿಣ ಕೋಲ್ಕತ್ತದಿಂದ ಸ್ಪರ್ಧಿಸಿ ಸೋತಿದ್ದರು. 2009ರ ಲೋಕಸಭಾ ಚುನಾವಣೆಯಲ್ಲಿ ಲಖನೌ ಕ್ಷೇತ್ರದಿಂದ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದರು. ಕೆಲ ತಿಂಗಳಲ್ಲೇ ಅವರು ಕಾಂಗ್ರೆಸ್‌ಗೆ ಮರಳಿದರು.

3) ಅಸ್ಲಮ್‌ ಶೇರ್ ಖಾನ್‌ (ಹಾಕಿ)

1975ರ ವಿಶ್ವಕಪ್‌ ಹಾಕಿ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಭಾರತ ತಂಡದಲ್ಲಿದ್ದ ಅಸ್ಲಮ್‌ ಶೇರ್‌ ಖಾನ್‌ ಹಲವಾರು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. 1972ರ ಮ್ಯೂನಿಚ್‌ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದರು. ಹಾಕಿಯಿಂದ ನಿವೃತ್ತರಾದ ಬಳಿಕ 1984ರಲ್ಲಿ ಕಾಂಗ್ರೆಸ್‌ ಮೂಲಕ ರಾಜಕೀಯ ಬದುಕು ಆರಂಭಿಸಿದರು. ಮಧ್ಯಪ್ರದೇಶದ ಬೆತೂಲ್‌ ಕ್ಷೇತ್ರದಿಂದ ಗೆದ್ದಿದ್ದರು. ನಂತರದ ಎರಡೂ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡರು. 2004ರಲ್ಲಿ ಭೋಪಾಲ್‌ ಮತ್ತು 2009ರಲ್ಲಿ ಮಧ್ಯಪ್ರದೇಶದ ಸಾಗರ ಲೋಕಸಭಾ ಕ್ಷೇತ್ರದಿಂದಲೂ ಸೋಲು ಅನುಭವಿಸಿದರು.

4) ಜ್ಯೋತಿರ್ಮಯಿ ಸಿಕ್ದರ್‌ (ಅಥ್ಲೀಟ್‌)

ಪಶ್ಚಿಮ ಬಂಗಾಳದ ಮಧ್ಯಮ ದೂರದ ಅಥ್ಲೀಟ್‌ ಜ್ಯೋತಿರ್ಮಯಿ ಸಿಕ್ದಾರ್‌ 1998ರ ಏಷ್ಯನ್‌ ಕ್ರೀಡಾಕೂಟದ 800 ಮತ್ತು 1500 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕಗಳನ್ನು ಜಯಿಸಿದ್ದರು. 2004ರಲ್ಲಿ ಸಿಪಿಎಂ ಪಕ್ಷದಿಂದ ಪಶ್ಚಿಮ ಬಂಗಾಳದ ಕೃಷ್ಣನಗರದಿಂದ ಸ್ಪರ್ಧಿಸಿ ಸಂಸದರೂ ಆಗಿದ್ದರು. 2009ರ ಚುನಾವಣೆಯಲ್ಲಿ ಸೋಲು ಕಂಡರು.

5) ರಾಜ್ಯವರ್ಧನ್ ಸಿಂಗ್‌ ರಾಠೋಡ್‌ (ಶೂಟಿಂಗ್‌)

ಭಾರತದ ಯಶಸ್ವಿ ರಾಜಕಾರಣಿಯಾದ ಕ್ರೀಡಾಪಟುಗಳಲ್ಲಿ ರಾಜ್ಯವರ್ಧನ್ ಕೂಡ ಒಬ್ಬರು. 2004ರ ಅಥೆನ್ಸ್‌ ಒಲಿಂಪಿಕ್ಸ್‌ನ ಡಬಲ್‌ ಟ್ರ್ಯಾಪ್‌ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಸೇನೆಯಲ್ಲಿದ್ದ ರಾಜ್ಯವರ್ಧನ್ ಸ್ವಯಂ ನಿವೃತ್ತಿ ಪಡೆದು ಬಿಜೆಪಿ ಮೂಲಕ ರಾಜಕಾರಣದಲ್ಲಿ ‘ಶೂಟಿಂಗ್‌’ ಆರಂಭಿಸಿದರು. ಜೈಪುರ ಗ್ರಾಮೀಣ ಪ್ರದೇಶದಿಂದ ಸ್ಪರ್ಧಿಸಿ ಗೆಲುವು ಪಡೆದು ಮಂತ್ರಿಯೂ ಆದರು.

 6) ನವಜ್ಯೋತ್‌ ಸಿಂಗ್‌ ಸಿಧು (ಕ್ರಿಕೆಟ್‌)

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ನವಜೋತ್‌ ಸಿಂಗ್‌ ಸಿಧು ಆಟದ ಜೊತೆಗೆ ವೀಕ್ಷಕ ವಿವರಣೆ ಮೂಲಕ ಮಾತಿನಲ್ಲಿಯೂ ಬೌಂಡರಿ, ಸಿಕ್ಸರ್‌ಗಳ ಮಳೆ ಸುರಿಸಿದವರು. ರಾಜಕಾರಣದಲ್ಲಿಯೂ ‘ಬ್ಯಾಟಿಂಗ್‌’ ಮಾಡಿದವರು. 1983ರಲ್ಲಿ ಕ್ರಿಕೆಟ್‌ ಜೀವನಕ್ಕೆ ಪದಾರ್ಪಣೆ ಮಾಡಿದ ನವಜ್ಯೋತ್ 51 ಟೆಸ್ಟ್‌, 136 ಏಕದಿನ ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ.

ಸಿದು 2004ರಲ್ಲಿ ಬಿಜೆಪಿಯಿಂದ ಅಮೃತಸರ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದರಾಗಿದ್ದರು. 2009ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಓಂ ಪ್ರಕಾಶ ಸೋನಿ ಎದುರು ಸೋಲು ಕಂಡರು. ಬಳಿಕ ಪಕ್ಷ ಅವರನ್ನು 2016ರಲ್ಲಿ ಪಂಜಾಬ್‌ನಿಂದ ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನ ಮಾಡಿತು. ಬಿಜೆಪಿ ತೊರೆದು 2017ರಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಅಮೃತಸರ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸಿ ಪಂಜಾಬ್‌ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರು.  ‘ಅವಾಜ್‌–ಇ–ಪಂಜಾಬಿ’ ಎನ್ನುವ ಪಕ್ಷ ಕೂಡ ಕಟ್ಟಿದರು. ಈಗ ಪಂಜಾಬ್‌ ಸರ್ಕಾರದಲ್ಲಿ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಸಚಿವರಾಗಿದ್ದಾರೆ.

7) ಕೀರ್ತಿ ಆಜಾದ್‌ (ಕ್ರಿಕೆಟ್‌)

ಕುಟುಂಬ ರಾಜಕೀಯ ಹಿನ್ನೆಲೆ ಹೊಂದಿರುವ ಕೀರ್ತಿ ಆಜಾದ್‌ 1983ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಭಾರತ ತಂಡದಲ್ಲಿದ್ದರು. ಕೀರ್ತಿ ಏಳು ಟೆಸ್ಟ್‌ ಮತ್ತು 25 ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಕೀರ್ತಿ ತಂದೆ ಭಾಗವತ್‌ ಜಾ ಆಜಾದ್‌ ಬಿಹಾರದ ಮುಖ್ಯಮಂತ್ರಿಯಾಗಿದ್ದರು. ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕ ವೀಕ್ಷಕ ವಿವರಣೆ, ಕ್ರಿಕೆಟ್‌ಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ದೆಹಲಿಯ ಗೋಯಲ್‌ ಮಾರ್ಕೆಟ್‌ ವಿಧಾನಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ದರ್ಬಾಂಗ್ ಕ್ಷೇತ್ರದಿಂದ ಗೆಲುವು ಪಡೆದಿದ್ದರು. ದೆಹಲಿ ಕ್ರಿಕೆಟ್‌ ಆಡಳಿತ ಮತ್ತು ದೆಹಲಿ ಜಿಲ್ಲಾ ಸಂಸ್ಥೆಯ ಭ್ರಷ್ಟಾಚಾರದಲ್ಲಿ ಅರ್ಜುನ ಜೇಟ್ಲಿ ಭಾಗಿಯಾಗಿದ್ದಾರೆ ಎಂದು ಗಂಭೀರ ಆರೋಪಿಸಿದ್ದರು. ಆದ್ದರಿಂದ ಅವರನ್ನು ಬಿಜೆಪಿ, ಪಕ್ಷದಿಂದ ಅಮಾನತು ಮಾಡಿದೆ. ಕೀರ್ತಿ ಆಜಾದ್‌ ಎರಡು ತಿಂಗಳ ಹಿಂದೆ ಕಾಂಗ್ರೆಸ್‌ ಸೇರಿದರು.

8) ಪ್ರಸನ್ನ ಬ್ಯಾನರ್ಜಿ (ಫುಟ್‌ಬಾಲ್‌)

ಭಾರತದ ಫುಟ್‌ಬಾಲ್‌ ತಂಡದ ನಾಯಕರಾಗಿದ್ದ ಪ್ರಸನ್ನ ಬ್ಯಾನರ್ಜಿ ಪಶ್ಚಿಮ ಬಂಗಾಳದವರು. ಮೋಹನ್‌ ಬಾಗನ್‌ ಕ್ಲಬ್‌ ತಂಡದಲ್ಲಿದ್ದರು. ಏಷ್ಯನ್‌ ಆಲ್‌ಸ್ಟಾರ್‌ ಇಲೆವನ್‌ ತಂಡದಲ್ಲಿ ಆಡಿದ ಎರಡನೇ ಭಾರತೀಯ ಎನ್ನುವ ಕೀರ್ತಿ ಹೊಂದಿದ್ದಾರೆ. 1972ರಿಂದ ಸತತ ಮೂರು ಏಷ್ಯಾ ಕಪ್‌ ಟೂರ್ನಿಯಲ್ಲಿ ದೇಶವನ್ನು ಪ್ರತಿನಿಧಿಸಿದ್ದರು. ಸಂತೋಷ ಟ್ರೋಫಿ ಟೂರ್ನಿಯಲ್ಲಿಯೂ ಪಾಲ್ಗೊಂಡಿದ್ದರು. 2013ರಲ್ಲಿ ನಡೆದ ಹೌರಾ ಸಾದರ್‌ ಕ್ಷೇತ್ರದ ಲೋಕಸಭಾ ಉಪಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ನಿಂದ ಗೆದ್ದು ಸಂಸದರಾಗಿದ್ದರು. ಸಂಸತ್‌ ಪ್ರವೇಶಿಸಿದ ಭಾರತದ ಮೊಟ್ಟಮೊದಲ ವೃತ್ತಿಪರ ಫುಟ್‌ಬಾಲ್‌ ಆಟಗಾರ ಎನ್ನುವ ಹೆಗ್ಗಳಿಕೆ ಅವರದ್ದು. 2014ರ ಚುನಾವಣೆಯಲ್ಲಿಯೂ ಮರು ಆಯ್ಕೆಯಾದರು.

 9) ಲಕ್ಷ್ಮಿ ರತನ್‌ ಶುಕ್ಲಾ

ಭಾರತ ತಂಡದಲ್ಲಿ ಮೂರು ಏಕದಿನ ಕ್ರಿಕೆಟ್‌ ಪಂದ್ಯಗಳನ್ನಾಡಿರುವ ಪಶ್ಚಿಮಬಂಗಾಳದ ಲಕ್ಷ್ಮಿರತನ್‌ ಶುಕ್ಲಾ ದೇಶಿ ಕ್ರಿಕೆಟ್‌ನಲ್ಲಿಯೂ ಸಾಕಷ್ಟು ಹೆಸರು ಮಾಡಿದವರು. 137 ಪ್ರಥಮ ದರ್ಜೆ ಪಂದ್ಯಗಳಿಂದ 6,217 ರನ್ ಗಳಿಸಿ, 172 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ವಿಜಯ ಹಜಾರೆ ಟೂರ್ನಿಯಲ್ಲಿ 2013ರಲ್ಲಿ ಬಂಗಾಳ ತಂಡಕ್ಕೆ ನಾಯಕರಾಗಿದ್ದರು. 2016ರಲ್ಲಿ ತೃಣಮೂಲ ಕಾಂಗ್ರೆಸ್‌ ಸೇರಿದರು. ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಹೌರಾ ಕ್ಷೇತ್ರದಿಂದ ಸ್ಪರ್ಧಿಸಿ ರೂಪಾ ಗಂಗೂಲಿ ಎದುರು ಗೆದ್ದರು. ಈಗ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಕ್ರೀಡಾ ಸಚಿವರಾಗಿದ್ದಾರೆ.

ಹೀಗೆ ಅನೇಕ ಕ್ರೀಡಾಪಟುಗಳು ರಾಜಕಾರಣದಲ್ಲಿದ್ದಾರೆ. ಮಾಜಿ ಕ್ರಿಕೆಟಿಗ ಚೇತನ್‌ ಚವ್ಹಾಣ್, ಶೂಟರ್‌ ಹಾಗೂ ಬ್ಯಾಸ್ಕೆಟ್‌ಬಾಲ್‌ ಆಟಗಾರನಾಗಿದ್ದ ಕೈಲಿಕೇಶ್‌ ನಾರಾಯಣ ಸಿಂಗ್‌, ವೃತ್ತಿಪರ ಫುಟ್‌ಬಾಲ್‌ ಆಟಗಾರನಾಗಿದ್ದ ವಾಗ್ನಿಯಾ ಪೋಂಗ್ಟೆ (ಅರುಣಾಚಲ ಪ್ರದೇಶದ ಶಾಸಕ), ಭಾರತ ಹಾಕಿ ತಂಡದ ಮಾಜಿ ನಾಯಕ ಪರ್ಗತ್‌ ಸಿಂಗ್‌ ರಾಜಕೀಯದ ರಂಗದಲ್ಲಿ ಅನುಭವ ಪಡೆದಿದ್ದಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !