ಗುರುವಾರ , ಫೆಬ್ರವರಿ 20, 2020
17 °C

ಪೌರತ್ವ (ತಿದ್ದುಪಡಿ) ಕಾಯ್ದೆ ವಾಪಸ್‌ಗೆ ಎಸ್‌.ಆರ್‌. ಹಿರೇಮಠ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಪೌರತ್ವ (ತಿದ್ದುಪಡಿ) ಕಾಯ್ದೆ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದ್ದು, ದೇಶದಾದ್ಯಂತ ತೀವ್ರ ವಿರೋಧ ವ್ಯಕ್ತವಾಗುತ್ತಿರುವುದರಿಂದ ಕೇಂದ್ರ ಸರ್ಕಾರ ತಕ್ಷಣ ಹಿಂಪಡೆಯಬೇಕು ಎಂದು ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್‌.ಆರ್‌.ಹಿರೇಮಠ ಆಗ್ರಹಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ‘ಸಬ್‌ ಕಾ ಸಾಥ್‌;ಸಬ್‌ ಕಾ ವಿಕಾಸ್‌’ ಘೋಷಣೆಗೆ ಪೌರತ್ವ (ತಿದ್ದುಪಡಿ) ಕಾಯ್ದೆಯು ತದ್ವಿರುದ್ಧವಾಗಿದೆ. ಮುಸ್ಲಿಮರನ್ನು ದೇಶದ ದ್ವಿತೀಯ ದರ್ಜೆ ನಾಗರಿಕರನ್ನಾಗಿ ಮೂಲೆಗೆ ತಳ್ಳುವ ಉದ್ದೇಶ ಇದರಲ್ಲಿ ಅಡಗಿದೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಮಹಾತ್ಮ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್‌ ಹಾಗೂ ಶತಮಾನಗಳಿಂದ ಭಾರತ ಅನುಸರಿಸಿಕೊಂಡು ಬರುತ್ತಿರುವ ಮೌಲ್ಯಗಳಿಗೆ ಈ ಕಾಯ್ದೆ ವಿರೋಧವಾಗಿದೆ. ಈಶಾನ್ಯ ರಾಜ್ಯಗಳಲ್ಲಿ ಈ ಕಾಯ್ದೆ ವಿರೋಧಿಸಿ ಭಾರೀ ಪ್ರಮಾಣದಲ್ಲಿ ಪ್ರತಿಭಟನೆ, ವಿರೋಧ ವ್ಯಕ್ತವಾಗುತ್ತಿದ್ದು, ದೇಶಾದ್ಯಂತ ಈ ಕಾಯ್ದೆ ವಿರೋಧಿಸಿ ಜನಾಂದೋಲನ ನಡೆಯುವ ಅಗತ್ಯವಿದೆ ಎಂದರು.

ಮಹಮ್ಮದ್‌ ಆಲಿ ಜಿನ್ನಾ ಮತ್ತು ವೀರ ಸಾವರ್ಕರ್‌ ಅವರ ಸಿದ್ಧಾಂತಗಳ ಹಾದಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಸಾಗುತ್ತಿದ್ದಾರೆ. ದೇಶದ ಅಭಿವೃದ್ಧಿ ನೀತಿ ಕೈಬಿಟ್ಟಿದ್ದಾರೆ. ಮಾಡಬಾರದ ದುರಾಡಳಿತ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನೇಮಕಕ್ಕೆ ಆಕ್ಷೇಪ: ನಿಯಮಗಳನ್ನು ಗಾಳಿಗೆ ತೂರಿ ರಾಜ್ಯ ಸರ್ಕಾರವು ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ ಅವರನ್ನು ಉಪ ಲೋಕಾಯುಕ್ತರನ್ನಾಗಿ ನೇಮಕ ಮಾಡಿದ್ದು, ಈ ಬಗ್ಗೆ ಹೈಕೋರ್ಟ್‌ನಲ್ಲಿ ಸಮಾಜ ಪರಿವರ್ತನಾ ಸಮುದಾಯದಿಂದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿದ್ದು, ಕೋರ್ಟ್‌ ವಿಚಾರಣೆಗೆ ಕೈಗೆತ್ತಿಕೊಂಡಿದೆ ಎಂದು ಹೇಳಿದರು.

ಉಪ ಲೋಕಾಯುಕ್ತ ನೇಮಕವನ್ನು ರದ್ದುಗೊಳಿಸುವಂತೆ ಸಲ್ಲಿಸಿರುವ ರಿಟ್‌ ಪಿಟಿಷನ್‌ ಮಾನ್ಯ ಮಾಡಿರುವ ಹೈಕೋರ್ಟ್‌, ಈ ಸಂಬಂಧ ಸರ್ಕಾರಕ್ಕೆ ನೋಟಿಸ್‌ ನೀಡಿರುವುದನ್ನು ಸ್ವಾಗತಿಸುವುದಾಗಿ ತಿಳಿಸಿದರು.

ಶರಣ–ಸಂತರ ಸಂದೇಶ ಯಾತ್ರೆ: ನಾಡಿನ ಶರಣರು, ಸೂಫಿ ಸಂತರು ಮತ್ತು ದಾಸರು ಸಾರಿದ ಮೌಲ್ಯಗಳನ್ನು ಎತ್ತಿ ಹಿಡಿಯಲು ಹಾಗೂ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಸರ್ವಜ್ಞನ ಹುಟ್ಟೂರಾದ ಹಾವೇರಿ ಜಿಲ್ಲೆಯ ಅಬಲೂರಿನಿಂದ ಆರಂಭಗೊಂಡು ಕನಕದಾಸರ ಕಾಗಿನೆಲೆ, ಷರೀಫರ ಶಿಶುವಿನಾಳ, ಕಪ್ಪತಗುಡ್ಡ ಮೂಲಕ ಕೂಡಲಸಂಗಮದ ವರೆಗೆ ಜನವರಿಯಲ್ಲಿ ಪ್ರಥಮ ಹಂತದ ಶರಣ–ಸಂತರ ಸಂದೇಶ ಯಾತ್ರೆ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

2020 ಸೆಪ್ಟೆಂಬರ್‌–ಅಕ್ಟೋಬರ್‌ನಲ್ಲಿ ಬವಸಣ್ಣನ ಕರ್ಮಭೂಮಿ ಬಸವಕಲ್ಯಾಣದಿಂದ ಸಂತ ತುಕಾರಾಮನ ನೆಲೆಯಾದ ಮಹಾರಾಷ್ಟ್ರದ ಪುಣೆ ಸಮೀಪದ ದೇಹು ವರೆಗೆ ಎರಡನೇ ಹಂತದ ಶರಣ–ಸಂತರ ಸಂದೇಶ ಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು