ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಚಾರಕ್ಕಾಗಿ ಗ್ರಾಮ ವಾಸ್ತವ್ಯ: ಶ್ರೀರಾಮುಲು

Last Updated 9 ಜೂನ್ 2019, 18:30 IST
ಅಕ್ಷರ ಗಾತ್ರ

ದಾವಣಗೆರೆ: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪ್ರಚಾರಕ್ಕಾಗಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ ಎಂದು ಮೊಳಕಾಲ್ಮುರು ಶಾಸಕ ಬಿ. ಶ್ರೀರಾಮುಲು ಆರೋಪಿಸಿದರು.

ರಾಜನಹಳ್ಳಿಯಲ್ಲಿ ನಾಯಕ ಸಮಾಜದಿಂದ ಆರಂಭವಾದ ಪಾದಯಾತ್ರೆಗೆ ಚಾಲನೆ ನೀಡಿ, ‘ಜನರಿಗೆ ಪರಿಹಾರ ಸಿಕ್ಕರೆ ಮಾತ್ರ ಗ್ರಾಮ ವಾಸ್ತವ್ಯಕ್ಕೆ ಅರ್ಥ ಬರುತ್ತದೆ’ ಎಂದು ಹೇಳಿದರು.

‘ಆಪರೇಷನ್ ಕಮಲದಿಂದ ದೂರವಿರುವಂತೆ ಹೈಕಮಾಂಡ್ ಹೇಳಿರುವುದರಿಂದ ಅದಕ್ಕೆ ನಾವು ಕೈ ಹಾಕುವುದಿಲ್ಲ. ಸದ್ಯ ಸಮ್ಮಿಶ್ರ ಸರ್ಕಾರ ಒಡೆದ ಮನೆ ಇದ್ದಂತಿದೆ. ಒಡೆದ ಮನೆಯಲ್ಲಿ ಯಾವ ರೀತಿ ಸಂಸಾರ ಮಾಡಲು ಸಾಧ್ಯವಿಲ್ಲವೋ, ಅದೇ ರೀತಿ ಸರ್ಕಾರ ನಡೆಸಲು ಸಾಧ್ಯವಿಲ್ಲ. ಅದು ಬಹಳ ದಿನ ಇರುವುದಿಲ್ಲ’ ಎಂದು ಹೇಳಿದರು.

‘ರಾಜ್ಯದಲ್ಲಿರುವ ಬಡವರು, ರೈತರು ಹಾಗೂ ಶೋಷಿತರಿಗೆ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಬಿಜೆಪಿ ಬರ ಪ್ರವಾಸ ಮಾಡಿ ಜನರ ಸಮಸ್ಯೆ ಅಲಿಸುತ್ತಿದೆ. ಈ ಕುರಿತು ಸದನದಲ್ಲೂ ಧ್ವನಿ ಎತ್ತುತ್ತೇವೆ. ಸಮ್ಮಿಶ್ರ ಸರ್ಕಾರದಲ್ಲಿ ಅರಾಜಕತೆ ಇದ್ದು, ಇದರಿಂದ ಶಾಸಕರು, ಸಚಿವರು ಕುಣಿದು ಕುಪ್ಪಳಿಸುತ್ತಾರೆ. ಈ ಸರ್ಕಾರ ಬಹಳ ದಿನ ಉಳಿಯುವುದಿಲ್ಲ’ ಎಂದರು.

ಸುಮಲತಾರನ್ನು ಎದುರಿಸುತ್ತೇವೆ: ಜೆಡಿಎಸ್‌

ಬೆಂಗಳೂರು: ‘ಮಂಡ್ಯ ಸಂಸದೆ ಸುಮಲತಾ ಅವರು ಬಿಜೆಪಿ ಅಥವಾ ನೆಲೆ ಇಲ್ಲದ ಕೆಲವು ನಾಯಕರನ್ನು ಮೆಚ್ಚಿಸಲು ನಮ್ಮ ಪಕ್ಷ, ನಾಯಕರನ್ನು ಟೀಕಿಸಿದರೆ, ರಾಜಕೀಯವಾಗಿ ಎದುರಿಸುತ್ತೇವೆ’ ಎಂದು ಜೆಡಿಎಸ್‌ ಎಚ್ಚರಿಕೆ ನೀಡಿದೆ.

‘ಮದ್ದೂರು ಕ್ಷೇತ್ರದ ಜನರ ಕೆಲಸ ಮಾಡಿಕೊಡಲು ಸಾಧ್ಯವಾಗದಿದ್ದರೆ ಸಚಿವ ಡಿ.ಸಿ.ತಮ್ಮಣ್ಣ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಲಿ’ ಎಂಬುದಾಗಿ ಸುಮಲತಾ ನೀಡಿರುವ ಹೇಳಿಕೆಗೆ ಜೆಡಿಎಸ್‌ ಭಾನುವಾರ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದು, ‘ದರ್ಪದ ಟೀಕೆಗಳನ್ನು ನಿಲ್ಲಿಸಲಿ’ ಎಂದು ತಿರುಗೇಟು ನೀಡಿದೆ.

‘ಸುಮಲತಾ ಮಂಡ್ಯ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲಿ. ಅದಕ್ಕೆ ನಮ್ಮ ತಕರಾರಿಲ್ಲ, ಸಹಕಾರವನ್ನೂ ನೀಡುತ್ತೇವೆ. ಬಿಜೆಪಿ ಅಥವಾ ರಾಜಕೀಯ ನೆಲೆಗಾಗಿ ಪರಿತಪಿಸುತ್ತಿರುವ ಕೆಲವು ನಾಯಕರನ್ನು ಮೆಚ್ಚಿಸಲು ನಮ್ಮ ಪಕ್ಷ ಅಥವಾ ನಾಯಕರನ್ನು ಟೀಕಿಸುವ ಪ್ರಯತ್ನ ಮಾಡಿದರೆ ರಾಜಕೀಯವಾಗಿ ಎದುರಿಸುತ್ತೇವೆ’ ಎಂದು ಜೆಡಿಎಸ್‌ ವಕ್ತಾರ ರಮೇಶ್‌ ಬಾಬು ಹೇಳಿದ್ದಾರೆ.

‘ಸುಮಲತಾ ಕಾಂಗ್ರೆಸ್‌ ಪಕ್ಷಕ್ಕೆ ಪುಕ್ಕಟೆ ಸಲಹೆ ನೀಡುವುದರ ಜತೆಗೆ ಜೆಡಿಎಸ್‌ ಟೀಕಿಸಿದ್ದಾರೆ. ಹಿಂದೆ ಅಂಬರೀಷ್ 2 ಬಾರಿ ವಿಧಾನಸಭೆ ಮತ್ತು ಒಮ್ಮೆ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದರು. ಅಂಬರೀಷ್ ಅವರು ಸುಮಲತಾ ಸಲಹೆ ಪಡೆದುಕೊಂಡಿದ್ದರೆ ಸೋಲುತ್ತಲೇ ಇರಲಿಲ್ಲ. ಆಗ ಸಲಹೆ ಕೊಡಲು ಸಮಯ ಇರಲ್ಲಿಲ್ಲವೋ ಅಥವಾ ಅಂಬರೀಷ್‌ಗೆ ಇವರ ಮೇಲೆ ವಿಶ್ವಾಸ ಇರಲಿಲ್ಲವೋ ಎಂಬುದನ್ನು ಹೇಳಬೇಕು’ ಎಂದು ವ್ಯಂಗ್ಯವಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT