ಶುಕ್ರವಾರ, ಸೆಪ್ಟೆಂಬರ್ 20, 2019
21 °C

ಬಳ್ಳಾರಿಯಲ್ಲಿ ಭೂ ಕಬಳಿಕೆ ಆರೋಪ: ಶ್ರೀರಾಮುಲು ವಿರುದ್ಧ ಕ್ರಮಕ್ಕೆ ಹಿಂದೇಟು?

Published:
Updated:

ಬೆಂಗಳೂರು: ‘ಭೂ ಕಬಳಿಕೆ ಆರೋಪ ಎದುರಿಸುತ್ತಿರುವ ಸಚಿವ ಬಿ. ಶ್ರೀರಾಮುಲು ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಪ್ರಕ್ರಿಯೆ ಆರಂಭಿಸಬಹುದು’ ಎಂದು ರಾಜ್ಯದ ಹಿಂದಿನ ಅಡ್ವೊಕೇಟ್‌ ಜನರಲ್‌ ಅಭಿಪ್ರಾಯ ನೀಡಿದ್ದರೂ ಲೋಕಾಯುಕ್ತ ಪೊಲೀಸರು ತನಿಖೆ ಪೂರ್ಣಗೊಳಿಸಿ, ದೋಷಾರೋಪ ಪಟ್ಟಿ ಸಲ್ಲಿಸಲು ಹಿಂದೇಟು ಹಾಕುತ್ತಿರುವುದು ಚರ್ಚೆಗೆ ಕಾರಣವಾಗಿದೆ.

ಬಳ್ಳಾರಿ ತಿಲಕ್‌ನಗರ ನಿವಾಸಿ ಜಿ. ಕೃಷ್ಣಮೂರ್ತಿ ಎಂಬುವರು ಶ್ರೀರಾಮುಲು ವಿರುದ್ಧ ಭೂ ಕಬಳಿಕೆ ಆರೋಪ ಮಾಡಿ 2013ರಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ದೂರಿನ ವಿಚಾರಣೆ ನಡೆಸಿದ್ದ ನ್ಯಾಯಾಧೀಶ ಡಿ. ವಿಶ್ವೇಶ್ವರ ಭಟ್‌ ಅವರು ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಪೊಲೀಸರಿಗೆ ಒಪ್ಪಿಸಿದ್ದರು.

ಕೋರ್ಟ್‌ ಆದೇಶ ಹೊರಬಂದು ಆರು ವರ್ಷ ಕಳೆದರೂ ಲೋಕಾಯುಕ್ತ ಪೊಲೀಸರು ತನಿಖೆ ಪೂರ್ಣಗೊಳಿಸದೆ ತಟಸ್ಥರಾಗಿದ್ದಾರೆ. ಅನುಮತಿ ನೀಡುವಂತೆ ವಿಧಾನಸಭಾಧ್ಯಕ್ಷರ ಕಚೇರಿಗೆ ಅನಗತ್ಯವಾಗಿ ಪತ್ರ ಬರೆದು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.

‘ಶ್ರೀರಾಮುಲು ವಿಧಾನಸಭೆಯ ಸದಸ್ಯರಾಗಿದ್ದರೂ ಕಾನೂನು ಕ್ರಮ ಜರುಗಿಸಲು ಸಭಾಧ್ಯಕ್ಷರ ಅನುಮತಿ ಪಡೆಯುವ ಅಗತ್ಯವಿಲ್ಲ’ ಎಂದು ಜೂನ್‌ 27ರಂದು ಹಿಂದಿನ ಅಡ್ವೊಕೇಟ್‌ ಜನರಲ್‌ ಉದಯ ಹೊಳ್ಳ ಅಭಿಪ್ರಾಯ ನೀಡಿದ್ದಾರೆ. ಸುಪ್ರೀಂ ಕೋರ್ಟ್‌ ಕೆಲವೊಂದು ಪ್ರಕರಣಗಳಲ್ಲಿ ನೀಡಿರುವ ತೀರ್ಪುಗಳನ್ನು ಉದಾಹರಿಸಿ,ಸಭಾಧ್ಯಕ್ಷರ ಅನುಮತಿ ಇಲ್ಲದಿದ್ದರೂ ಕಾನೂನು ಪ್ರಕ್ರಿಯೆ ನಡೆಸಬಹುದು’ ಎಂದಿದ್ದಾರೆ.

2018ರ ಸೆಪ್ಟೆಂಬರ್‌ 26ರಂದೂ ಇದೇ ರೀತಿಯ ಅಭಿಪ್ರಾಯ ಕೊಟ್ಟಿದ್ದರು. ಈ ಅಭಿಪ್ರಾಯವನ್ನು ಸಭಾಧ್ಯಕ್ಷರ ಸಚಿವಾಲಯ ಆಗಸ್ಟ್‌ ಮೊದಲ ವಾರ ಲೋಕಾಯುಕ್ತ ಎಡಿಜಿಪಿಗೆ ಕಳುಹಿಸಿದೆ. ಇಷ್ಟಾದರೂ ಎಡಿಜಿಪಿ ಕಚೇರಿಯು ಶ್ರೀರಾಮುಲು ವಿರುದ್ಧದ ತನಿಖೆ ಪೂರ್ಣಗೊಳಿಸಿ, ದೋಷಾರೋಪ ಪಟ್ಟಿ ಸಲ್ಲಿಸುವ ಕಾಳಜಿ ತೋರಿಲ್ಲ. ತೆರೆಮರೆಯಲ್ಲಿ ಆರೋಪಿಗಳನ್ನು ರ‌ಕ್ಷಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ.

ಈ ಕುರಿತ ಪ್ರತಿಕ್ರಿಯೆಗೆ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಅವರಾಗಲೀ ಅಥವಾ ಲೋಕಾಯುಕ್ತ ಎಡಿಜಿಪಿ ಎ.ಎಸ್‌.ಎನ್‌ ಮೂರ್ತಿ ಅವರಾಗಲೀ ಸಿಗಲಿಲ್ಲ.

ಏನಿದು ಪ್ರಕರಣ?: ಬಳ್ಳಾರಿ–ಹೊಸಪೇಟೆ ಬೈಪಾಸ್‌ ಬಳಿಯ ಕೌಲ್‌ಬಜಾರ್‌ ಪ್ರದೇಶದಲ್ಲಿರುವ ಟಿ.ಬಿ.ಸ್ಯಾನಿಟೋರಿಯಂ ಪಕ್ಕದ ಸರ್ವೆ ನಂಬರ್‌ 601ಎ ರಲ್ಲಿ 57 ಎಕರೆ ಜಮೀನನ್ನು ಸುಳ್ಳು ದಾಖಲೆ ಸೃಷ್ಟಿಸಿ, ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂಡ ಆರೋಪ ಶ್ರೀರಾಮುಲು  ಮೇಲಿದೆ.

ಈ ಕಾರ್ಯಕ್ಕೆ ಅಂದಿನ ಜಿಲ್ಲಾಧಿಕಾರಿ ಶಿವಪ್ಪ, ಉಪ ವಿಭಾಗಾಧಿಕಾರಿ ವೆಂಕಟೇಶ್‌ ಹಾಗೂ ತಹಶೀಲ್ದಾರ್‌ ಶಶಿಧರ್‌ ಬಗಲಿ ಸಾಥ್‌ ನೀಡುವ ಮೂಲಕ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಈ ಜಮೀನನ್ನು ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಮಾವ (ಪತ್ನಿಯ ಅಪ್ಪ) ಪರಮೇಶ್ವರ ರೆಡ್ಡಿ ಖರೀದಿಸಿದ್ದರು. ಬಳಿಕ ಪುತ್ರಿ ಅರುಣಾ ಅವರಿಗೆ ಉಡುಗೊರೆ ನೀಡಿದ್ದರು. ಲಕ್ಷ್ಮಮ್ಮ ಮತ್ತು ಅವರ ಕುಟುಂಬದ ಸದಸ್ಯರು ಇದೇ ಜಾಗವನ್ನು ಶ್ರೀರಾಮುಲು ಅವರಿಗೆ ನೋಂದಣಿ ಮಾಡಿಕೊಟ್ಟರು. ಈ ಜಾಗದಲ್ಲಿ ಕೃಷ್ಣಮೂರ್ತಿ ಮತ್ತಿತರರ ನಿವೇಶನಗಳಿದ್ದವು. ಅವುಗಳನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ದೂರಿದ್ದರು.

Post Comments (+)