ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿಯ ಬಿ. ಶ್ರೀರಾಮುಲು| ನಗರಸಭೆಯಿಂದ ಸಚಿವ ಸ್ಥಾನದವರೆಗೆ

ಮೂರನೇ ಬಾರಿ ಸಚಿವರಾದ ಶ್ರೀರಾಮುಲು
Last Updated 20 ಆಗಸ್ಟ್ 2019, 6:03 IST
ಅಕ್ಷರ ಗಾತ್ರ

ಬಳ್ಳಾರಿ: ’ಬಳ್ಳಾರಿ ನಗರಸಭೆಯ 34ನೇ ವಾರ್ಡಿನ ಸದಸ್ಯ ಸ್ಥಾನದಿಂದ, ರಾಜ್ಯ ಸರ್ಕಾರದಲ್ಲಿ ಮೂರನೇ ಬಾರಿಗೆ ಸಚಿವರಾಗುವವರೆಗೆ...’

–ಈಗಷ್ಟೇ ಸಚಿವರಾಗಿ ಪ್ರಮಾಣ ಸ್ವೀಕರಿಸಿರುವಮೊಳಕಾಲ್ಮೂರು ಶಾಸಕ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ಶ್ರೀರಾಮುಲು ಅವರ ರಾಜಕೀಯ ಪಯಣದ ಹಾದಿಯನ್ನು ಒಂದೇ ಸಾಲಿನಲ್ಲಿ ಸಂಕ್ಷಿಪ್ತವಾಗಿ ಹೀಗೆ ಹೇಳಬಹುದು. ಆದರೆ ಈ ಅವಧಿಯಲ್ಲಿ ಅವರು ಕಂಡ ಏಳುಬೀಳುಗಳು ಹೆಚ್ಚು ವಿವರಣೆಯನ್ನು ಬಯಸುತ್ತವೆ.

1995ರಲ್ಲಿ ಅವರು ಮೊಟ್ಟಮೊದಲ ಬಾರಿಗೆ ನಗರಸಭೆಗೆ ಸ್ಪರ್ಧಿಸಿದಾಗ ಬಳ್ಳಾರಿಯಲ್ಲಿ ಬಿಜೆಪಿ ಗಟ್ಟಿಯಾಗಿ ನೆಲೆಯೂರಿರಲಿಲ್ಲ. ಅಷ್ಟೇ ಏಕೆ ಶ್ರೀರಾಮುಲು ಅವರಿಗೂ ಸ್ವಂತದ್ದೊಂದು ವರ್ಚಸ್ಸು ಇರಲಿಲ್ಲ.

23ವರ್ಷಗಳ ಬಳಿಕ, 2018ರ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬದಾಮಿಯಲ್ಲಿ ಅವರನ್ನು ಪಕ್ಷ ಕಣಕ್ಕೆ ಇಳಿಸುವಷ್ಟರ ಮಟ್ಟಿಗೆ ಶ್ರೀರಾಮುಲು ಪ್ರಭಾವಿಯಾಗಿ ಬೆಳೆದಿದ್ದರು. ಆ ಚುನಾವಣೆಯ ಹೊತ್ತಿನಲ್ಲಿ ಅವರು ಲೋಕಸಭೆ ಸದಸ್ಯರಾಗಿದ್ದರು.

ಪಕ್ಷ ಹೇಳಿದ್ದರಿಂದ ಆ ಸ್ಥಾನಕ್ಕೆ ರಾಜೀನಾಮೆ ನೀಡಿ ಏಕಕಾಲಕ್ಕೆ ಬದಾಮಿ ಮತ್ತು ಮೊಳಕಾಲ್ಮುರು ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದರು.ತಮ್ಮ ರಾಜಕೀಯ ಭವಿಷ್ಯ ಮತ್ತು ಪಕ್ಷದ ಪ್ರತಿಷ್ಠೆ ಎರಡನ್ನೂ ಮೇಲಕ್ಕೆತ್ತಬೇಕಾದ ಸವಾಲು ಅವರ ಮುಂದೆ ಇತ್ತು. ಮೊಳಕಾಲ್ಮುರಿನಲ್ಲಿ ಗೆದ್ದು ಬದಾಮಿಯಲ್ಲಿ ಸೋತರೂ ಅವರು ಪಕ್ಷದ ಶಕ್ತಿಶಾಲಿ ನಾಯಕನಾಗಿಯೇ ಮುಂದುವರಿದಿದ್ದು ಅವರ ಸಾಧನೆ.

1999ರಲ್ಲಿ ಮೊದಲ ಬಾರಿಗೆ ಬಳ್ಳಾರಿ ವಿಧಾನಸಭೆ ಕ್ಷೇತ್ರದಿಂದ ಚುನಾವಣೆಗೆ ನಿಂತು ಸೋತ ಬಳಿಕ, ಸತತ ಮೂರು ಚುನಾವಣೆಗಳಲ್ಲಿ ಅವರು ಗೆದ್ದರು. 2004ರ ಚುನಾವಣೆಯಲ್ಲಿ ಅವರ ಗೆಲುವು ಬಳ್ಳಾರಿ ಕ್ಷೇತ್ರದಲ್ಲಿ ಬಿಜೆಪಿಗೆ ಭದ್ರ ನೆಲೆ ಒದಗಿಸಿತ್ತು. ಕ್ಷೇತ್ರ ಪುನರ್‌ವಿಂಗಡಣೆ ನಂತರ ಅಸ್ತಿತ್ವಕ್ಕೆ ಬಂದ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ 2008ರ ಚುನಾವಣೆ, ತಮ್ಮ ರಾಜೀನಾಮೆಯಿಂದ ತೆರವಾದ ನಂತರ ನಡೆದ 2011ರ ಉಪಚುನಾವಣೆ ಮತ್ತು 2013ರ ಚುನಾವಣೆಯಲ್ಲಿ ಸತತ ಗೆಲುವು ಸಾಧಿಸಿದರು.

2014ರಲ್ಲಿ ಲೋಕಸಭೆ ಚುನಾವಣೆಗೂ ನಿಂತು ಗೆಲ್ಲುವ ವೇಳೆಗೆ ಅವರು ಜಿಲ್ಲಾಮಟ್ಟವನ್ನು ಮೀರಿ ರಾಜ್ಯಮಟ್ಟದ ನಾಯಕರಾಗಿ ಹೊರಹೊಮ್ಮಿದ್ದರು. 2018ರಲ್ಲಿ ಮತ್ತೆ ಆ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಎರಡು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಬಲ್ಲ ಪ್ರಭಾವಿ ಶಾಲಿಯಾಗಿದ್ದರು.

ಸಚಿವ ಸ್ಥಾನ:2006ರಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಶ್ರೀರಾಮುಲು ಪ್ರವಾಸೋದ್ಯಮ ಸಚಿವರಾಗಿದ್ದರು. ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ನಂತರ ಗದಗ ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.
ಎರಡನೇ ಬಾರಿಗೆ, 2008ರಲ್ಲಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ರಚನೆಯಾದ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದರು. ಈಗ ಯಡಿಯೂರಪ್ಪನವರ ನೇತೃತ್ವದ ಸರ್ಕಾರದಲ್ಲೇ ಮತ್ತೆ ಸಚಿವರಾಗುತ್ತಿದ್ದಾರೆ.

ಅಕ್ರಮ ಗಣಿಗಾರಿಕೆಯ ಆರೋಪಿ ಜಿ.ಜನಾರ್ದನರೆಡ್ಡಿ ಅವರೊಂದಿಗಿನ ಆಪ್ತನಂಟಿನ ಕಾರಣಕ್ಕೇ ಪಕ್ಷ ಮತ್ತು ಸರ್ಕಾರದಲ್ಲಿ ಪ್ರಾಮುಖ್ಯ ದೊರಕಲಿಲ್ಲ ಎಂದು ಮುನಿಸಿಕೊಂಡು 2011ರಲ್ಲಿ ಬಿಜೆಪಿ ತೊರೆದಿದ್ದ ಅವರು ಬಿಎಸ್‌ಆರ್‌(ಬಡವರ ಶ್ರಮಿಕರ ರೈತರ) ಕಾಂಗ್ರೆಸ್‌ ಪಕ್ಷವನ್ನು ಸ್ಥಾಪಿಸಿ ಚುನಾವಣೆಗೆ ಸ್ಪರ್ಧಿಸಿ ಬಿಜೆಪಿಯನ್ನೇ ಮಣಿಸಿದ್ದರು. 2014ರಲ್ಲಿ ಮುನಿಸು ಮರೆತು ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿದ್ದರು. ನಂತರ ಬಳ್ಳಾರಿ ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದರು.

ಎರಡು ಕ್ಷೇತ್ರ: ಮೂರನೇ ಬಾರಿಗೆ ಶ್ರೀರಾಮುಲು ಸಚಿವರಾಗುತ್ತಿರುವುದರಿಂದ ಬಳ್ಳಾರಿ ಜಿಲ್ಲೆ ಮತ್ತು ಚಿತ್ರದುರ್ಗದ ಬಿಜೆಪಿ ವಲಯದಲ್ಲಿ ಏಕಕಾಲಕ್ಕೆ ಸಂಭ್ರಮ ಮನೆ ಮಾಡಿದೆ.

ಜನನ: ಆಗಸ್ಟ್‌ 8, 1971, 48ವಯಸ್ಸು, ಪದವೀಧರ, ತಂದೆ: ಬಿ.ತಿಮ್ಮಪ್ಪ, ತಾಯಿ: ಬಿ.ಹೊನ್ನೂರಮ್ಮ, ಪತ್ನಿ ಲಕ್ಷ್ಮಿ, ನಾಲ್ವರು ಸಹೋದರರು ಹಾಗೂ ನಾಲ್ವರು ಸಹೋದರಿಯರ ಪೈಕಿ ಶ್ರೀರಾಮುಲು ಏಳನೆಯವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT