ಎಸ್ಸೆಸ್ಸೆಲ್ಸಿ ಅಂಕಪಟ್ಟಿ ಪ್ರಮಾಣೀಕರಣ ಆನ್‌ಲೈನ್‌ನಲ್ಲಿ

ಗುರುವಾರ , ಮಾರ್ಚ್ 21, 2019
32 °C
50 ವರ್ಷ ಹಳೆ ಅಂಕಪಟ್ಟಿ ವಿವರಗಳ ಡಿಜಿಟಲೀಕರಣ

ಎಸ್ಸೆಸ್ಸೆಲ್ಸಿ ಅಂಕಪಟ್ಟಿ ಪ್ರಮಾಣೀಕರಣ ಆನ್‌ಲೈನ್‌ನಲ್ಲಿ

Published:
Updated:

ಬೆಂಗಳೂರು: ರಾಜ್ಯ ಮತ್ತು ಕೇಂದ್ರ ಸರ್ಕಾರದ ಉದ್ಯೋಗಗಳಿಗೆ ಸೇರುವ ಅಭ್ಯರ್ಥಿಗಳ ಎಸ್ಸೆಸ್ಸೆಲ್ಸಿ ಅಂಕಪಟ್ಟಿಗಳ ನೈಜತೆ ಪರಿಶೀಲನೆ ಮತ್ತು ಪ್ರಮಾಣಿಕರಣ ಪ್ರಕ್ರಿಯೆ ಇನ್ನು ಮುಂದೆ ಆನ್‌ಲೈನ್‌ ಮೂಲಕವೇ ನಡೆಯಲಿದೆ.

ಇದಕ್ಕಾಗಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಹೊಸ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿದ್ದು, ಶೀಘ್ರವೇ ಹೊಸ ಸೇವೆ ಆರಂಭಿಸಲಾಗುವುದು ಎಂದು ಮಂಡಳಿ ನಿರ್ದೇಶಕಿ ವಿ.ಸುಮಂಗಲಾ ‘ಪ್ರಜಾವಾಣಿ’ಗೆ ತಿಳಿಸಿದರು.

ವಿವಿಧ ಇಲಾಖೆಗಳಲ್ಲಿ ಉದ್ಯೋಗಕ್ಕೆ ಆಯ್ಕೆ ಆದ ಅಭ್ಯರ್ಥಿಗಳ ಎಸ್ಸೆಸ್ಸೆಲ್ಸಿ ಅಂಕಪಟ್ಟಿಯನ್ನು ಆನ್‌ಲೈನ್‌ ಮೂಲಕವೇ ಆಯಾಯ ಇಲಾಖೆಗಳು ಕಳಿಸಿಕೊಟ್ಟರೆ, ನೈಜತೆಯನ್ನು ಪರಿಶೀಲಿಸಿ ಪ್ರಮಾಣ ಪತ್ರ ನೀಡುತ್ತೇವೆ. ಹಿಂದೆಲ್ಲ ಇದಕ್ಕೆ ಸಾಕಷ್ಟು ದಿನಗಳು ಬೇಕಾಗುತ್ತಿತ್ತು. ಇದರಿಂದ ಉದ್ಯೋಗಕ್ಕೆ ಸೇರುವ ಅಭ್ಯರ್ಥಿಗಳಿಗೆ ತೊಂದರೆ ಆಗುತ್ತಿತ್ತು ಎಂದು ಅವರು ಹೇಳಿದರು.

ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ಡಿಜಿಟಲೀಕರಣ ಮಾಡಿರುವುದರಿಂದ ಪರಿಶೀಲನೆಗಾಗಿ ಕಳಿಸುವ ಅಂಕಪಟ್ಟಿಗಳ ನೈಜತೆಯನ್ನು ಬೇಗನೆ ಪತ್ತೆ ಮಾಡಿ ಸಂಬಂಧಪಟ್ಟವರಿಗೆ ಹಿಂದಿರುಗಿಸಲು ಸಾಧ್ಯ. ಹಿಂದೆ ಇದನ್ನು ಮಾಡಲು ಸಾಕಷ್ಟು ಸಿಬ್ಬಂದಿ ಬೇಕಾಗುತ್ತಿತ್ತು ಎಂದು ಅವರು ವಿವರಿಸಿದರು.

ಆನ್‌ಲೈನ್‌ ಮೂಲಕ ತಿದ್ದುಪಡಿ: ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ದೋಷಗಳು ಆಗಿದ್ದರೆ ಅದರ ತಿದ್ದುಪಡಿಯನ್ನು ಆನ್‌ಲೈನ್‌ ಮೂಲಕವೇ ಮಾಡಿಸಬಹುದು. ಇದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಎಸ್ಸೆಸ್ಸೆಲ್ಸಿ ಬೋರ್ಡ್‌ಗೆ ಅಲೆದಾಡುವುದು ತಪ್ಪುತ್ತದೆ ಎಂದು ತಿಳಿಸಿದರು.

ಅಲ್ಲದೆ, ಅಂಕಪಟ್ಟಿ ಕಳೆದುಕೊಂಡವರಿಗೆ ದ್ವಿತೀಯ ಪ್ರತಿಯನ್ನೂ ಆನ್‌ಲೈನ್‌ ಮೂಲಕ ಪಡೆಯಬಹುದು ಎಂದರು.

50 ವರ್ಷ ಹಳೆ ಅಂಕಪಟ್ಟಿಗಳ ಡಿಜಿಟಲೀಕರಣ: ಸುಮಾರು ಅರ್ಧ ಶತಮಾನದಷ್ಟು ಹಳೆಯ ಅಂಕಪಟ್ಟಿಗಳ ಡಿಜಿಟಲೀಕರಣ ಕಾರ್ಯ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಸುಮಂಗಲಾ ತಿಳಿಸಿದರು.

ಪ್ರೌಢ ಶಿಕ್ಷಣ ಮಂಡಳಿ 1964 ರಲ್ಲಿ ಅಸ್ತಿತ್ವಕ್ಕೆ ಬಂದಿತು. ಅಲ್ಲಿಂದ ಹಿಡಿದು ಇಲ್ಲಿಯವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿಗಳ ಅಂಕ ಪಟ್ಟಿಗಳ ವಿವರಗಳ ಸಂಪುಟಗಳನ್ನು ಡಿಜಿಟಲೀಕರಣ ಮಾಡುವ ಯೋಜನೆ ಇದೆ. ಬಹಳ ಹಳೆಯ ಸಂಪುಟಗಳು ಧೂಳು ಹಿಡಿದು ಶಿಥಿಲಾವಸ್ಥೆಯಲ್ಲಿ ಇವೆ. ಇವುಗಳ ದತ್ತಾಂಶವನ್ನು ಡಿಜಿಟಲೀಕರಣ ಮಾಡಲಾಗುತ್ತದೆ. ಇದರಿಂದ ಈಗಿನ ಪೀಳಿಗೆಯವರು ತಮ್ಮ ತಂದೆ, ತಾತಂದಿರ ಅಂಕಗಳ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದರು. 

ಆತಂಕ, ಸಂದೇಹ ಕರೆಗಳ ಮಹಾಪೂರ
ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಮಂಡಳಿ ಆರಂಭಿಸಿರುವ ‘ಸಹಾಯವಾಣಿ’ಗೆ ಪ್ರತಿ ದಿನ 100 ರಿಂದ 150 ಕರೆಗಳು ಬರುತ್ತಿವೆ. ಪರೀಕ್ಷೆಯ ಭಯ ಮತ್ತು ಆತಂಕವನ್ನು ನಿವಾರಿಸಲು ಕೌನ್ಸಿಲಿಂಗ್‌ ತಜ್ಞರು ಮತ್ತು ಪಠ್ಯ ವಿಷಯದ ಗೊಂದಲ ನಿವಾರಿಸಲು ವಿಷಯ ತಜ್ಞರನ್ನು ಮಂಡಳಿ ನಿಯುಕ್ತಿಗೊಳಿಸಿದೆ.

‘ನಮ್ಮ ಈ ಕಾರ್ಯಕ್ಕೆ ಸಹಮುದ್ರ ಎಂಬ ಎನ್‌ಜಿಒ ಸಂಸ್ಥೆ ನೆರವಾಗಿದೆ. ಪರೀಕ್ಷೆಯಲ್ಲಿ ಆತಂಕಕ್ಕೆ ಸಂಬಂಧಿಸಿದಂತೆ ಇವರು ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬುವ ಕೆಲಸ ಮಾಡುತ್ತಾರೆ’ ಎಂದು ಸುಮಂಗಲಾ ವಿವರಿಸಿದರು.

‘ಇದೇ 5 ರಂದು ಸಹಾಯವಾಣಿ ಆರಂಭಿಸಿದ್ದು, 20 ರವರೆಗೆ ಚಾಲ್ತಿಯಲ್ಲಿರುತ್ತದೆ. ಪರೀಕ್ಷೆಗೆ ಹೇಗೆ ತಯಾರಿ ಮಾಡಿಕೊಳ್ಳಬೇಕು. ಮನಸ್ಸನ್ನು ಆತಂಕ ಮುಕ್ತವಾಗಿ ಪರೀಕ್ಷೆ ಹೇಗೆ ಎದುರಿಸಬೇಕು ಎಂಬುನದನ್ನು ಹೇಳಿಕೊಡಲಾಗುತ್ತದೆ. ಕೆಲವೊಂದು ಪ್ರಶ್ನೆಗಳಿಗೆ ಉತ್ತರವನ್ನು ಮಂಡಳಿಯ ವೆಬ್‌ಸೈಟ್‌ನಲ್ಲಿ ಹಾಕುತ್ತೇವೆ.  ವಿಜ್ಞಾನದ ವಿಷಯಗಳಿಗೆ ಉತ್ತರವನ್ನು ಯಾವ ರೀತಿ ಬರೆಯಬೇಕು ಎಂಬದನ್ನೂ ವಿಷಯ ತಜ್ಞರಿಂದ ಬರೆಸಿ ವೆಬ್‌ಸೈಟ್‌ನಲ್ಲಿ ಹಾಕಿದ್ದೇವೆ’ ಎಂದರು.

ಸಂದೇಹ ಮತ್ತು ಪ್ರಶ್ನೆಗಳಿಗೆ ಸಹಾಯವಾಣಿ ಸಂಖ್ಯೆ 23310075/76 ಕರೆ ಮಾಡಬಹುದು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !