ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷಯ ಶಿಕ್ಷಕರಲ್ಲದವರಿಗೆ ಪರೀಕ್ಷಾ ಮೇಲ್ವಿಚಾರಣೆ ಹೊಣೆ

ಎಸ್ಸೆಸ್ಸೆಲ್ಸಿ: ಪ್ರಶ್ನೆ ಪತ್ರಿಕೆ ರಚನೆ, ಸಾಗಣೆ ಮತ್ತು ಪರೀಕ್ಷೆಗೆ ಬಿಗಿ ಭದ್ರತಾ ವ್ಯವಸ್ಥೆ
Last Updated 11 ಮಾರ್ಚ್ 2019, 19:39 IST
ಅಕ್ಷರ ಗಾತ್ರ

ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆಯ ಮಾದರಿಯಲ್ಲೇ ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆ ರಚನೆ, ಸಾಗಣೆ ಮತ್ತು ಪರೀಕ್ಷೆಗೆ ಬಿಗಿ ಭದ್ರತೆ ಮತ್ತು ವಿಶೇಷ ನಿಗಾ ವ್ಯವಸ್ಥೆ ಮಾಡಲಾಗಿದೆ.

ಪರೀಕ್ಷೆಗೆ ಇನ್ನು 10 ದಿನಗಳು ಬಾಕಿ ಇರುವಾಗಲೇ ರಾಜ್ಯದ 2,847 ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮಗಳು ನಡೆಯದಂತೆ ಕಟ್ಟುನಿಟ್ಟಿನ ವ್ಯವಸ್ಥೆಗೆ ಸಿದ್ಧತೆ ನಡೆಸಲಾಗಿದೆ.ಬಹುತೇಕ ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಈಗಾಗಲೇ ಸಿ.ಸಿ ಟಿ.ವಿ ಕ್ಯಾಮೆರಾಗಳ ಅಳವಡಿಕೆಯಾಗಿದೆ ಎಂದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ವಿ.ಸುಮಂಗಲಾ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಶ್ನೆ ಪತ್ರಿಕೆ ತಯಾರಿಕೆಯಿಂದ ಹಿಡಿದು, ಪರೀಕ್ಷೆ ದಿನ ಅದನ್ನು ವಿತರಿಸುವ ಹಂತದವರೆಗೆ ಸೋರಿಕೆ ಆಗದಂತೆ ಬಿಗಿ ಕ್ರಮ ತೆಗೆದುಕೊಳ್ಳಲಾಗಿದೆ. ತಾಲ್ಲೂಕು ಮತ್ತು ಜಿಲ್ಲಾ ಖಜಾನೆಗಳಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಇರಿಸಲಾಗುವುದು. ಪ್ರಶ್ನೆಪತ್ರಿಕೆಗಳ ಸಾಗಣೆ ಸಂದರ್ಭದಲ್ಲೂ ರಹಸ್ಯ ಕಾಪಾಡಲಾಗುವುದು ಎಂದರು.

ಪರೀಕ್ಷೆ ಆರಂಭಕ್ಕೆ ಮೂರು ಗಂಟೆಗೂ ಮೊದಲು ಗೊತ್ತು ಮಾಡಿದ ರೂಟ್‌ ಆಫೀಸರ್‌ಗಳು ಖಜಾನೆಯಿಂದ ಪರೀಕ್ಷಾ ಕೇಂದ್ರಗಳಿಗೆ ತರುತ್ತಾರೆ. ಈ ಎಲ್ಲ ಹಂತಗಳಲ್ಲೂ ಸಿ.ಸಿ ಟಿ.ವಿ ಕ್ಯಾಮೆರಾಗಳ ಕಣ್ಗಾವಲು ಇಡಲಾಗುತ್ತದೆ. ಪರೀಕ್ಷಾ ಕೇಂದ್ರದೊಳಗೆ ಮತ್ತು ಆವರಣದ ಸುತ್ತ ಕ್ಯಾಮೆರಾ ಕಣ್ಣುಗಳು ಎಲ್ಲ ಚಟುವಟಿಕೆಗಳನ್ನೂ ಸೆರೆ ಹಿಡಿಯುತ್ತವೆ ಎಂದು ಅವರು ವಿವರಿಸಿದರು.

ವಿಷಯ ಶಿಕ್ಷಕರಲ್ಲದವರು ಮೇಲ್ವಿಚಾರಕರು: ಯಾವುದೇ ಒಂದು ಶಾಲೆ ಪರೀಕ್ಷಾ ಕೇಂದ್ರ ಆಗಿದ್ದರೆ, ಅಲ್ಲಿ ಆ ಶಾಲೆಯ ಶಿಕ್ಷಕರನ್ನು ಪರೀಕ್ಷಾ ಮೇಲ್ವಿಚಾರಕರನ್ನಾಗಿ ನೇಮಿಸುವುದಿಲ್ಲ. ಬೇರೆ ಶಾಲೆಗಳ ಶಿಕ್ಷಕರನ್ನೇ ಮೇಲ್ವಿಚಾರಕರನ್ನಾಗಿ ನೇಮಿಸಲಾಗುತ್ತದೆ. ನಿರ್ದಿಷ್ಟ ವಿಷಯದ ಪರೀಕ್ಷೆಯ ದಿನ ಅದೇ ವಿಷಯದ ಶಿಕ್ಷಕರು ಮೇಲ್ವಿಚಾರಕರಾಗಿರುವುದಿಲ್ಲ. ಬೇರೆ ವಿಷಯಗಳ ಶಿಕ್ಷಕರನ್ನು ನೇಮಿಸಲಾಗುತ್ತದೆ. ಇದರಿಂದ ಅಕ್ರಮ ನಡೆಯುವುದನ್ನು ತಡೆಯಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ದ್ವಿತೀಯ ಪಿಯು ಪರೀಕ್ಷೆ: 26 ಸಾವಿರ ವಿದ್ಯಾರ್ಥಿಗಳು ಗೈರು
ಸೋಮವಾರ ನಡೆದ ದ್ವಿತೀಯ ಪಿಯು ಸಮಾಜಶಾಸ್ತ್ರ, ರಸಾಯನಶಾಸ್ತ್ರ ಮತ್ತು ಬಿಜಿನೆಸ್‌ ಸ್ಟಡೀಸ್‌ ವಿಷಯಗಳ ಪರೀಕ್ಷೆಗೆ ಒಟ್ಟು 26,080 ವಿದ್ಯಾರ್ಥಿಗಳು ಗೈರಾಗಿದ್ದರು.

ಮೂರು ವಿದ್ಯಾರ್ಥಿಗಳು ಅಕ್ರಮ ನಡೆಸಿದ ಕಾರಣ ಡಿಬಾರ್‌ ಮಾಡಲಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಪಿ.ಸಿ.ಜಾಫರ್‌ ತಿಳಿಸಿದ್ದಾರೆ. ಮೂರೂ ವಿಷಯಗಳ ಪ್ರಶ್ನೆ ಪತ್ರಿಕೆಗಳೂ ಸುಲಭವಾಗಿದ್ದವು ಎಂದು ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ಪರೀಕ್ಷೆಯಲ್ಲಿ ಗೈರಾದವರು; ಸಮಾಜಶಾಸ್ತ್ರ 12,583, ರಸಾಯನ ಶಾಸ್ತ್ರ 4688, ಬಿಜಿನೆಸ್‌ ಸ್ಟಡೀಸ್‌ 8,809 ವಿದ್ಯಾರ್ಥಿಗಳು.

ಅಧಿಕಾರಿ, ಸಿಬ್ಬಂದಿಗೆ ವಿಶೇಷ ಬಣ್ಣದ ಐಡಿ
* ಪರೀಕ್ಷಾ ಕಾರ್ಯದಲ್ಲಿ ತೊಡಗುವ ಅಧಿಕಾರಿಗಳು, ಮೇಲ್ವಿಚಾರಕರು, ಪೊಲೀಸರು ಮತ್ತು ಇತರ ಸಿಬ್ಬಂದಿಗೆ ವಿವಿಧ ಬಣ್ಣಗಳ ಟ್ಯಾಗ್‌ ಹೊಂದಿರುವ ಗುರುತಿನ ಚೀಟಿಗಳನ್ನು ನೀಡಲಾಗುವುದು.

* ಪರೀಕ್ಷಾ ಕೇಂದ್ರಗಳಿಗೆ ಗುರುತಿನ ಚೀಟಿ ಇಲ್ಲದ, ಅನಧಿಕೃತ ವ್ಯಕ್ತಿಗಳನ್ನು ಒಳಗೆ ಬಿಡುವುದಿಲ್ಲ.ಅಲ್ಲದೆ, ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ‘ಮಾಡಬೇಕಾದ್ದು, ಮಾಡಬಾರದ್ದು’ (Do's-Dont's) ಪಟ್ಟಿಯನ್ನು ಅಂಟಿಸಲಾಗುವುದು. ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಮಾತ್ರ ಮೊಬೈಲ್‌ ಬಳಸಬಹುದು. ವಿದ್ಯಾರ್ಥಿಗಳು ಮತ್ತು ಪರೀಕ್ಷಾ ಮೇಲ್ವಿಚಾರಕರು ಪರೀಕ್ಷಾ ಹಾಲ್‌ನೊಳಗೆ ಮೊಬೈಲ್‌ ಒಯ್ಯುವಂತಿಲ್ಲ.

* ಸ್ಮಾರ್ಟ್‌ ಅಥವಾ ಡಿಜಿಟಲ್‌ ವಾಚ್‌ಗಳನ್ನು ಒಯ್ಯುವಂತಿಲ್ಲ. ಆನಲಾಗ್‌ ವಾಚ್‌ಗಳನ್ನು ಕಟ್ಟಿಕೊಂಡು ಹೋಗಬಹುದು.ಮೊಬೈಲ್‌ ಸ್ಕ್ವಾಡ್‌ಗಳು, ಸಿಟ್ಟಿಂಗ್‌ ಸ್ಕ್ವಾಡ್‌ಗಳು, ತಹಶೀಲ್ದಾರ್‌ ಮತ್ತು ಜಿಲ್ಲಾಧಿಕಾರಿಗಳ ಮಟ್ಟದ ಸ್ಕ್ವಾಡ್‌ಗಳೂ ಇರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT