ಎಸ್ಸೆಸ್ಸೆಲ್ಸಿ ಫಲಿತಾಂಶ ವಿಳಂಬ?

ಗುರುವಾರ , ಏಪ್ರಿಲ್ 25, 2019
31 °C

ಎಸ್ಸೆಸ್ಸೆಲ್ಸಿ ಫಲಿತಾಂಶ ವಿಳಂಬ?

Published:
Updated:

ಬೆಂಗಳೂರು: ಎಸ್ಸೆಸ್ಸೆಲಿ ಪರೀಕ್ಷೆ ಗುರುವಾರ ಮುಕ್ತಾಯವಾಗಿದ್ದು, ಇದೇ 10ರಿಂದ ಮೌಲ್ಯಮಾಪನ ಆರಂಭಗೊಂಡರೂ ಲೋಕಸಭಾ ಚುನಾವಣೆ ಕಾರಣ ಫಲಿತಾಂಶ ಪ್ರಕಟಣೆ ವಿಳಂಬವಾಗುವ ಸಾಧ್ಯತೆ ಇದೆ.

ಎಸ್ಸೆಸ್ಸೆಲ್ಸಿ ಪರೀಕ್ಷಾ ವ್ಯವಸ್ಥೆಯ ಹಲವು ಹಂತಗಳಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲೀಕರಣ ಮಾಡಲಾಗಿದೆ. ಮೌಲ್ಯಮಾಪನದ ಬಳಿಕ ಅಂಕವನ್ನು ಆನ್‌ಲೈನ್‌ ಮೂಲಕ ಸರ್ವರ್‌ಗೆ ಅಪ್‌ಲೋಡ್‌ ಮಾಡುವ ವ್ಯವಸ್ಥೆಯನ್ನೂ ಮಾಡಿಕೊಂಡಿದೆ.

ಆದರೆ, ರಾಜ್ಯದಲ್ಲಿ ಎರಡು ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಮೊದಲ ಹಂತ ಇದೇ 18ರಂದು ಮತ್ತು ಎರಡನೇ ಹಂತದ ಚುನಾವಣೆ ಇದೇ 23 ರಂದು ನಡೆಯಲಿದೆ. ಪೂರ್ವಭಾವಿಯಾಗಿ ತರಬೇತಿ ಕಾರ್ಯಕ್ರಮದಲ್ಲಿ ಸಾಕಷ್ಟು ಅಧ್ಯಾಪಕರು ಪಾಲ್ಗೊಳ್ಳಬೇಕಾಗಿದೆ. ಬಳಿಕ ಚುನಾವಣೆಯಲ್ಲಿ ತೊಡಗುವುದರಿಂದ ಮೌಲ್ಯಮಾಪನ ವಿಳಂಬವಾಗಲಿದೆ.

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ವಿ.ಸುಮಂಗಲಾ, ಮೌಲ್ಯಮಾಪನ ಕಾರ್ಯವನ್ನು ಈ ಹಿಂದೆ ನಿರ್ಧರಿಸಿದಂತೆ ಇದೇ 10 ರಂದು ಆರಂಭಿಸಲಾಗುತ್ತದೆ. ಆದರೆ, ಚುನಾವಣೆ ತರಬೇತಿಗಾಗಿ ಅಧ್ಯಾಪಕರು ಮೂರು ದಿನಗಳ ಕಾಲ ಹೋಗಬೇಕಾಗುತ್ತದೆ. ಇದರಿಂದ ಮೌಲ್ಯಮಾಪನ ಕಾರ್ಯ ಕುಂಠಿತವಾಗಬಹುದು ಎಂದರು.

ಈ ಕಾರಣದಿಂದ ಹಿಂದೆ ಅಂದುಕೊಂಡಷ್ಟು ತ್ವರಿತವಾಗಿ ಫಲಿತಾಂಶ ನೀಡಲು ಸಾಧ್ಯವಾಗುವುದಿಲ್ಲ.ಯಾವ ದಿನಾಂಕದಂದು ಪ್ರಕಟಿಸಬೇಕು ಎಂಬುದನ್ನು ನಿರ್ಧರಿಸಿಲ್ಲ. ಚುನಾವಣಾ ಕರ್ತವ್ಯವೂ ಅತಿ ಮುಖ್ಯ ಎಂದು ಅವರು ಅಭಿಪ್ರಾಯಪಟ್ಟರು.

ಉತ್ತಮ ಪರೀಕ್ಷೆ: ಈ ಬಾರಿ ಪರೀಕ್ಷೆ ಅತ್ಯುತ್ತಮವಾಗಿತ್ತು. ಪ್ರಶ್ನೆ ಪತ್ರಿಕೆಗಳು ಹೆಚ್ಚು ರಚನಾತ್ಮಕವಾಗಿದ್ದವು. ವಿದ್ಯಾರ್ಥಿಗಳಿಗೂ ಕಷ್ಟ ಎನಿಸಲಿಲ್ಲ. ಪ್ರಶ್ನೆ ಪತ್ರಿಕೆ ಸೋರಿಕೆ ಆಗದಂತೆ ಬಹಳ ಕಟ್ಟುನಿಟ್ಟಿನ ವ್ಯವಸ್ಥೆ ಮಾಡಲಾಗಿತ್ತು ಎಂದೂ ಸುಮಂಗಲಾ ತಿಳಿಸಿದರು.

ನಕಲು ನಿಲ್ಲದ ಪಿಡುಗು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಶಿಕ್ಷಕರೇ ಸಾಮೂಹಿಕ ನಕಲು ಮಾಡಲು ಆಸ್ಪದ ನೀಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ವಿಶೇಷವಾಗಿ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಹಲವೆಡೆ ನಕಲು ಮಾಡಿಸಿರುವುದು ವರದಿಯಾಗಿತ್ತು. ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿದ್ದರೂ ಅವುಗಳನ್ನು ಆಫ್‌ ಮಾಡಿ ನಕಲು ಮಾಡಿಸುವ ಪ್ರಯತ್ನ ನಡೆಯಿತು. ಕೆಲವು ಜಿಲ್ಲೆಗಳಲ್ಲಿ ಜಿಲ್ಲಾ ಫಲಿತಾಂಶ ಹೆಚ್ಚಿಸಬೇಕು ಎಂಬ ಕಾರಣಕ್ಕೆ ಡಿಡಿಪಿಐ ಮತ್ತು ಬಿಇಒಗಳೇ ಪರೀಕ್ಷೆಯಲ್ಲಿ ಕಟ್ಟುನಿಟ್ಟು ಮಾಡುವುದು ಬೇಡ. ತೇರ್ಗಡೆ ಆಗುವಷ್ಟು ಉತ್ತರವನ್ನು ಬರೆಸಿ ಎಂದು ಮೌಖಿಕವಾಗಿ ಮೇಲ್ವಿಚಾರಕರಿಗೆ ಸೂಚನೆ ನೀಡುವುದು ಸಮಸ್ಯೆಗೆ ಕಾರಣ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಆಯುಕ್ತರಿಗೆ ವಿದ್ಯಾರ್ಥಿ ಪತ್ರ
ತಮ್ಮ ಪರೀಕ್ಷಾ ಕೇಂದ್ರದಲ್ಲಿ ಅಧ್ಯಾಪಕರೊಬ್ಬರು ಸಾಮೂಹಿಕ ನಕಲು ಮಾಡಿಸಿದ್ದಾರೆ. ಇದರಿಂದ ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಚಾಮರಾಜನಗರ ಜಿಲ್ಲೆಯ ಕುದೇರು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ಮಹದೇವ ಪ್ರಸಾದ್‌ ಎಂಬ ವಿದ್ಯಾರ್ಥಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ದೂರು ಸಲ್ಲಿಸಿದ್ದಾನೆ.

ಪರೀಕ್ಷಾ ಕೇಂದ್ರ ಸಂಖ್ಯೆ 004ಇಎ, ಶಾಲಾ ಸಂಖ್ಯೆ ಎಇ 007 ರಲ್ಲಿ ಅಧ್ಯಾಪಕರೊಬ್ಬರು ಕನ್ನಡದಲ್ಲಿ 26, ಗಣಿತದಲ್ಲಿ 23 ಅಂಕಗಳಿಗೆ ಕಾಪಿ ಮಾಡಿಸಿದ್ದಾರೆ. ಇದರಿಂದ ಓದುವ ಮಕ್ಕಳಿಗೆ ಅನ್ಯಾಯವಾಗಿದ್ದು, ಪರೀಕ್ಷಾ ಕಾರ್ಯದಲ್ಲಿ ಅವರನ್ನು ಮುಂದುವರಿಸಬಾರದು ಎಂದು ಕನ್ನಡ ಮತ್ತು ಗಣಿತ ಪರೀಕ್ಷೆಗಳು ಮುಗಿದ ಬಳಿಕ ಪತ್ರ ಬರೆದಿರುವುದು ಬೆಳಕಿಗೆ ಬಂದಿದೆ.

ಈ ಬಗ್ಗೆ ಡಿಡಿಪಿಐಯಿಂದ ವರದಿ ತರಿಸಿಕೊಳ್ಳುವುದಾಗಿ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ಸುಮಂಗಲಾ ತಿಳಿಸಿದರು.

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !