ಗುರುವಾರ , ನವೆಂಬರ್ 21, 2019
22 °C

ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಂದೂಡುವುದಿಲ್ಲ: ಸಚಿವ ಎಸ್.‌ ಸುರೇಶ್ ಕುಮಾರ್

Published:
Updated:

ಬೆಳಗಾವಿ: ಈ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಮುಂದೂಡುವುದಿಲ್ಲ ಎಂದು ಶಿಕ್ಷಣ ಸಚಿವ ಎಸ್.‌ ಸುರೇಶ್ ಕುಮಾರ್ ತಿಳಿಸಿದರು.

ಮೂಡಲಗಿ ತಾಲ್ಲೂಕಿನ ಅಡಿಬಟ್ಟಿ ಗ್ರಾಮದಲ್ಲಿ ಘಟಪ್ರಭಾ ನದಿ ಪ್ರವಾಹದಿಂದ ಹಾಳಾಗಿರುವ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ವೀಕ್ಷಿಸಿದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

'ರಾಜ್ಯದ ಬಹುತೇಕ ಕಡೆಗಳಲ್ಲಿ ಪ್ರವಾಹ, ಅತಿವೃಷ್ಟಿ ಆಗಿದೆ. ಹಲವು ದಿನಗಳವರೆಗೆ ರಜೆ ನೀಡಲಾಗಿತ್ತು. ಶಾಲಾ ಕೊಠಡಿಗಳು ಹಾಳಾಗಿ ಪರ್ಯಾಯ ಜಾಗಗಳಲ್ಲಿ ತರಗತಿ ನಡೆಸಲಾಗುತ್ತಿದೆ. ಹೀಗಾಗಿ ಪರೀಕ್ಷೆ ಮುಂದೂಡಬೇಕೇ ಎಂದು ಶಿಕ್ಷಕರು ಹಾಗೂ ಅಧಿಕಾರಿಗಳನ್ನು ಕೇಳಿದೆ. ಪಠ್ಯ ಬೋಧನೆಯನ್ನು ಮುಗಿಸುತ್ತೇವೆ; ಪರೀಕ್ಷೆ ಮುಂದೂಡುವ ಅಗತ್ಯ ಇಲ್ಲ ಎಂದು ಅವರು ತಿಳಿಸಿದರು. ಹೀಗಾಗಿ ಪರೀಕ್ಷೆ ಮುಂದೂಡುವುದಿಲ್ಲ' ಎಂದು ಸ್ಪಷ್ಟಪಡಿಸಿದರು.

'ಮಳೆ ಮತ್ತು ನೆರೆಯಿಂದ ಹಾಳಾಗಿರುವ ಶಾಲೆಗಳ ದುರಸ್ತಿ ಹಾಗೂ ಕೊಠಡಿಗಳ ನಿರ್ಮಾಣಕ್ಕೆ ₹ 534 ಕೋಟಿ ಬೇಕಾಗಿದೆ. ತಕ್ಷಣದ ದುರಸ್ತಿಗೆ ₹ 164 ಕೋಟಿ ಬೇಕು. ₹ 500 ಕೋಟಿ ಬಿಡುಗಡೆ ಮಾಡಿದ್ದು, ಅದರಲ್ಲಿ ಶಾಲೆ, ಅಂಗನವಾಡಿಗಳು ಹಾಗೂ ಆಸ್ಪತ್ರೆಗಳ ನಿರ್ಮಾಣಕ್ಕೆ ಆದ್ಯತೆ ನೀಡುವಂತೆ ನಮ್ಮ ಸರ್ಕಾರ ಸೂಚಿಸಿದೆ' ಎಂದು ತಿಳಿಸಿದರು.

ನೆರೆಬಾಧಿತ ಶಾಲೆಗಳ ಬಹುತೇಕ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ತಲುಪಿಸಲಾಗಿದೆ ಎಂದರು.

'ಈ ಬಾರಿ 7ನೇ ತರಗತಿಯ ಮಕ್ಕಳಿಗೆ ಪ್ರಾಯೋಗಿಕವಾಗಿ ಪಬ್ಲಿಕ್ ಪರೀಕ್ಷೆ ನಡೆಸಲಾಗುವುದು.  ಪಬ್ಲಿಕ್ ಪರೀಕ್ಷೆ ಎಂದರೆ ಹೇಗಿರುತ್ತದೆ? ಹೇಗೆ ನಡೆಸುತ್ತಾರೆ ಎಂಬ ಅನುಭವ ಮಕ್ಕಳಿಗೆ ಆಗಲೆಂದು ನಡೆಸುತ್ತಿದ್ದೇವೆ. ಯಾವ ಮಕ್ಕಳನ್ನೂ ಫೇಲ್ ಮಾಡುವುದಿಲ್ಲ. ಅವರಿಗೆ ಆತ್ಮವಿಶ್ವಾಸ ತುಂಬುವ ಕ್ರಮವಾಗಿ ಇದನ್ನು ಮಾಡುತ್ತಿದ್ದೇವೆ' ಎಂದು ಸ್ಪಷ್ಟಪಡಿಸಿದರು.

'ಅತಿಥಿ ಶಿಕ್ಷಕರಿಗೆ ಕನಿಷ್ಠ ವೇತನ ಕೊಡಬೇಕಿರುವುದು ನಮ್ಮ ಧರ್ಮ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು' ಎಂದು ಪ್ರತಿಕ್ರಿಯಿಸಿದರು.

ಪ್ರತಿಕ್ರಿಯಿಸಿ (+)