ಗುರುವಾರ , ಫೆಬ್ರವರಿ 20, 2020
28 °C
ಮಾರ್ಚ್‌ 27ರಿಂದ ಏಪ್ರಿಲ್‌ 9ರ ವರೆಗೆ ಪರೀಕ್ಷೆ

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 8.48 ಲಕ್ಷ ಮಕ್ಕಳು, ಒಟ್ಟು 2,879 ಕೇಂದ್ರಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ನಿಗದಿಪಡಿಸಿದಂತೆ ಮಾರ್ಚ್‌ 27ರಿಂದ ಏಪ್ರಿಲ್‌ 9ರವರೆಗೆ ನಡೆಯಲಿದ್ದು, 8.48 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಏಪ್ರಿಲ್‌ 19ರಿಂದ ಮೌಲ್ಯಮಾಪನ ಆರಂಭವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್ ಕುಮಾರ್‌ ಹೇಳಿದರು.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಚೇರಿಯಲ್ಲಿ ಸೋಮವಾರ ಪರೀಕ್ಷೆಯ ಸಿದ್ಧತೆ ಕುರಿತು ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರ್ಹ ಅಭ್ಯರ್ಥಿಗಳ ಕರಡು ಪ್ರವೇಶಪತ್ರಗಳನ್ನು ಇದೇ 1ರಿಂದ ಶಾಲಾ ಲಾಗಿನ್‌ನಲ್ಲಿ ನೀಡಲಾಗಿದೆ. ಶಿಕ್ಷಕರ ಮಾಹಿತಿ ನೀಡದ 4 ಶಾಲೆಗಳ ಹೊರತಾಗಿ ಉಳಿದೆಲ್ಲ ಶಾಲೆಗಳಿಗೂ ಇದನ್ನು ಕಳುಹಿಸಲಾಗಿದೆ. ಈ ಶಾಲೆಗಳಿಗೂ ಒಂದೆರಡು ದಿನಗಳಲ್ಲಿ ಸಿಗಲಿದೆ. ಫೆಬ್ರುವರಿ 2ನೇ ವಾರದಲ್ಲಿ ಅಂತಿಮ ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಲಾಗುವುದು ಎಂದರು.

ಆನ್‌ಲೈನ್‌ನಲ್ಲಿ ವಿದ್ಯಾರ್ಥಿಗಳ ಆಂತರಿಕ ಅಂಕಗಳನ್ನು ಮುಖ್ಯ ಶಿಕ್ಷಕರು ನಮೂದು ಮಾಡಲು ಫೆಬ್ರುವರಿ 3ನೇ ವಾರದಲ್ಲಿ ಅವಕಾಶ ನೀಡಲಾಗುವುದು. ಈ ಹಿಂದೆ ಇದ್ದ ಒಎಂಆರ್‌ ಶೀಟ್‌ನಲ್ಲಿ ಶಾಲೆಗಳಿಂದ ಮಾಹಿತಿ ಪಡೆಯುತ್ತಿದ್ದ ವ್ಯವಸ್ಥೆ ಇನ್ನಿಲ್ಲ. ಫಲಿತಾಂಶದ ಪಟ್ಟಿಗಳನ್ನು ಶಾಲಾ ಮುಖ್ಯ ಶಿಕ್ಷಕರ ಲಾಗ್‌ಇನ್‌ನಲ್ಲಿ ದೊರಕುವಂತೆ ಮಾಡಲಾಗಿದೆ. ಜಾಲತಾಣದ ಮೂಲಕವೇ ಉತ್ತರ ಪತ್ರಿಕೆಗಳ ಛಾಯಾ ಪ್ರತಿ ಹಾಗೂ ಮರುಮೌಲ್ಯಮಾಪನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದರು.

ಈ ಬಾರಿ ನಿರೀಕ್ಷೆಗಿಂತ ಅಧಿಕ ಸಂಖ್ಯೆಯಲ್ಲಿ ಶಿಕ್ಷಕರು ಮೌಲ್ಯಮಾಪನಕ್ಕೆ ಹೆಸರು ನೋಂದಾಯಿಸಿದ್ದಾರೆ, ಮೌಲ್ಯಮಾಪನಕ್ಕೆ 65 ಸಾವಿರ ಶಿಕ್ಷಕರ ಅಗತ್ಯ ಇದೆ ಎಂದು ಮಂಡಳಿಯ ನಿರ್ದೇಶಕಿ ವಿ.ಸುಮಂಗಲಾ ಹೇಳಿದರು.

ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗುವುದು, ಎಲೆಕ್ಟ್ರಾನಿಕ್‌ ವಾಚ್‌ ಕಟ್ಟುವುದಕ್ಕೆ ಅವಕಾಶ ಇಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಕೆ.ಜಿ.ಜಗದೀಶ್‌ ಹೇಳಿದರು.

*
ಒಂದು ಪರೀಕ್ಷಾ ಕೊಠಡಿಯಲ್ಲಿ 24 ವಿದ್ಯಾರ್ಥಿಗಳಿಗಷ್ಟೇ ಅವಕಾಶ, ಒಬ್ಬರೇ ಮೇಲ್ವಿಚಾರಕರು, ಸಮಯ ವಿಸ್ತರಣೆಯ ಮಾಹಿತಿ ರವಾನಿಸಲಾಗಿದೆ.
-ವಿ.ಸುಮಂಗಲಾ, ನಿರ್ದೇಶಕರು, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು