ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆ ವಾಟ್ಸ್ ಆ್ಯಪ್‌ನಲ್ಲಿ ಹರಿಬಿಟ್ಟ ಅಧಿಕಾರಿ!

ಗುರುವಾರ , ಏಪ್ರಿಲ್ 25, 2019
29 °C

ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆ ವಾಟ್ಸ್ ಆ್ಯಪ್‌ನಲ್ಲಿ ಹರಿಬಿಟ್ಟ ಅಧಿಕಾರಿ!

Published:
Updated:

ತುಮಕೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರವಾಗಿ ನಡೆಸಲು ನಿಯೋಜಿತರಾದ ಸ್ಥಾನಿಕ ಜಾಗೃತ ದಳದ ಅಧಿಕಾರಿಯೊಬ್ಬ ಕನ್ನಡ ವಿಷಯ ಪ್ರಶ್ನೆ ಪತ್ರಿಕೆ ‘ಮೊದಲ ಪುಟ’ದ ಚಿತ್ರವನ್ನು ಮೊಬೈಲ್‌ನಲ್ಲಿ ತೆಗೆದು ವಾಟ್ಸ್‌ ಆ್ಯಪ್‌ನಲ್ಲಿ ಶಿಕ್ಷಕ ಸ್ನೇಹಿತರ ಗ್ರೂಪ್‌ಗೆ ಕಳುಹಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಅದು ಹರಿದಾಡಿದೆ.

ಹೀಗೆ, ವಾಟ್ಸ್ ಆ್ಯಪ್ ಗ್ರೂಪ್‌ನಲ್ಲಿ ಪ್ರಶ್ನೆ ಪತ್ರಿಕೆ ಪುಟ ಹರಿ ಬಿಟ್ಟವರು ಶಿರಾ ತಾಲ್ಲೂಕು ಬಂದಕುಂಟೆ ಮಣ್ಣಮ್ಮ ಶಾಲೆಯ ಶಿಕ್ಷಕ ಎಸ್.ಕಾಂತರಾಜ್. ಎಸ್ಸೆಸ್ಸೆಲ್ಸಿ ಪರೀಕ್ಷೆಗಾಗಿ ಅವರನ್ನು ಶಿರಾ ತಾಲ್ಲೂಕು ಹೊಸೂರು ಸರ್ಕಾರಿ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಸ್ಥಾನಿಕ ಜಾಗೃತ ದಳ ಅಧಿಕಾರಿಯಾಗಿ ಶಿಕ್ಷಣ ಇಲಾಖೆ ನೇಮಿಸಿತ್ತು. ಪರೀಕ್ಷೆ ಮೊದಲ ದಿನವೇ ಈ ಕೃತ್ಯ ಎಸಗಿದ್ದಾರೆ.

ಡಿಡಿಪಿಐ ಹೇಳಿಕೆ: ‘ಎಸ್ಸೆಸ್ಸೆಲ್ಸಿ ಕನ್ನಡ ವಿಷಯ ಪ್ರಶ್ನೆ ಪತ್ರಿಕೆ ಬಹಿರಂಗ ಆಗಿಲ್ಲ. ಎಸ್.ಕಾಂತರಾಜ್ ಅವರು ವಾಟ್ಸ್ ಆ್ಯಪ್ ಗ್ರೂಪ್‌ಗೆ ಪ್ರಶ್ನೆ ಪತ್ರಿಕೆಯ ಒಂದು ಪುಟ ಹಾಕಿದ್ದಾರೆ. ಈ ಕುರಿತು ಹೇಳಿಕೆ ಪಡೆದಿದ್ದು, ‘ಯಾರೋ ಶಿಕ್ಷಕ ಸ್ನೇಹಿತರು ಪ್ರಶ್ನೆ ಪತ್ರಿಕೆ ಹೇಗಿದೆ ಕಳಿಸಿ ಎಂದು ಕೇಳಿದರು. ಅದಕ್ಕೆ ಚಿತ್ರ ತೆಗೆದು ಹಾಕಿದ್ದೇನೆ’ ಎಂದು ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದಾರೆ’ ಎಂದು ಮಧುಗಿರಿ ಡಿಡಿಪಿಐ ರವಿಶಂಕರ್ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಲಾಖೆ ನಿಯಮಾವಳಿ ಪ್ರಕಾರ ಅವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ. ಈ ರೀತಿ ಅಪರಾಧ ಕೃತ್ಯಕ್ಕೆ 3 ವರ್ಷ ಜೈಲು, ₹ 5 ಲಕ್ಷ ದಂಡ ಸೇರಿದಂತೆ ವಿವಿಧ ರೀತಿಯ ಶಿಕ್ಷೆಗೆ ಗುರಿಯಾಗಲಿದ್ದಾರೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !