ಭಾನುವಾರ, ಜುಲೈ 25, 2021
22 °C

ಎಸ್ಸೆಸ್ಸೆಲ್ಸಿ ಸಮಾಜ ವಿಜ್ಞಾನ ಪರೀಕ್ಷೆಗೆ ಶೇ 98 ಹಾಜರಾತಿ: ಸುರೇಶ್ ಕುಮಾರ್ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಐದನೇ ದಿನವಾದ ಬುಧವಾರ ನಡೆದ ಎಸ್ಸೆಸ್ಸೆಲ್ಸಿ ಸಮಾಜ ವಿಜ್ಞಾನ ಪರೀಕ್ಷೆ ಸಾಮಾಜಿಕ ಸುರಕ್ಷಿತ ವಾತಾವರಣದಲ್ಲಿ ಉತ್ತಮವಾಗಿ ನಡೆದಿವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಬುಧವಾರದ ಪರೀಕ್ಷೆ ನಂತರ ಸುದ್ದಿಗೋಷ್ಠಿಯಲ್ಲಿ ಇಂದಿನ ಪರೀಕ್ಷೆಗಳ ಕುರಿತು ಮಾಹಿತಿ ನೀಡಿದ ಅವರು, ಐದನೇ ದಿನವಾದ ಬುಧವಾರ ನಡೆದ ಸಮಾಜವಿಜ್ಞಾನ ಪರೀಕ್ಷೆಗೆ ನೊಂದಾಯಿತ 7,84,287 ವಿದ್ಯಾರ್ಥಿಗಳ ಪೈಕಿ 7,68,341 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಒಟ್ಟಾರೆ ಶೇ. 97.96ರಷ್ಟು ಇಂದು ಹಾಜರಾತಿ ಇದೆ. 15,946 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಹೇಳಿದರು.

ಈ ವಿಷಯದ ಪರೀಕ್ಷೆಗೆ ಕಳೆದ 2018-19ನೇ ಸಾಲಿಗೆ 7,77858 ವಿದ್ಯಾರ್ಥಿಗಳ ಪೈಕಿ 7,68,374 ವಿದ್ಯಾರ್ಥಿಗಳು ಹಾಜರಾಗಿದ್ದು, 9484 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಶೇ. 98.78 ಹಾಜರಾತಿ ಇತ್ತು ಎಂದು ಅವರು ಹೇಳಿದರು. 
ಮೊದಲ ಬಾರಿಗೆ 7,45,070 ಶಾಲಾ ವಿದ್ಯಾರ್ಥಿಗಳು ಹಾಗೂ 20, 991 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ಕಂಟೈನ್ಮೆಂಟ್ ಪ್ರದೇಶಗಳ 3363 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕೋವಿಡೇತರ ಅನಾರೋಗ್ಯ ಕಾರಣಗಳಿಂದ ವಿಶೇಷ ಕೊಠಡಿಗಳಲ್ಲಿ 613 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದ ಯಾವುದೇ ಪ್ರಕರಣಗಳು ನಡೆದಿಲ್ಲ ಎಂದು ತಿಳಿಸಿದರು.

ಸರ್ಕಾರಿ/ಖಾಸಗಿ ವಸತಿ ನಿಲಯಗಳಲ್ಲಿ ಇದ್ದು 1442 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ನೆರೆ ರಾಜ್ಯಗಳಿಂದ 645ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿದ್ದು, 52 ವಿದ್ಯಾರ್ಥಿಗಳು ಗೈರು ಹಾಜರಿಯಾಗಿ 593ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 12644 ವಲಸೆ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾಯಿಸಿದ್ದು, 12541 ವಿದ್ಯಾರ್ಥಿಗಳು ಹಾಜರಾಗಿದ್ದರೆ, 103 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಸುರೇಶ್ ಕುಮಾರ್ ಹೇಳಿದರು.

ಹೋಂ ಕ್ವಾರಂಟೈನ್‌ನಲ್ಲಿರುವ ಹಾಗೂ ಕೋವಿಡ್ ಪಾಸಿಟೀವ್ ಎಂದು ಗುರುತಿಸಲಾದ ವಿದ್ಯಾರ್ಥಿಗಳಿಗೆ ಈಗಿನ ಪರೀಕ್ಷೆಯನ್ನು ಬರೆಯುವುದರಿಂದ ವಿನಾಯ್ತಿ ನೀಡಲಾಗಿದೆ. ಈ ಎಲ್ಲರಿಗೂ ಸಕಾರಣದ ಆಧಾರದ ಮೇಲೆ ಮುಂದಿನ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡುವ ವ್ಯವಸ್ಥೆ ಮಾಡಲಾಗುವುದು. ಪರೀಕ್ಷಾ ಕೇಂದ್ರಕ್ಕೆ 3212 ಬಸ್ ಹಾಗೂ ಇತರೆ ವಾಹನಗಳನ್ನು ಒಪ್ಪಂದದ ಮೇರೆಗೆ ಪಡೆದು ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಸಾರಿಗೆ ಸೌಲಭ್ಯ ಒದಗಿಸಲಾಗಿದೆ ಎಂದು ಅವರು ವಿವರಿಸಿದರು.

ಪರೀಕ್ಷಾ ಕೇಂದ್ರಗಳಿಗೆ ಭೇಟಿ

ಬುಧವಾರ ರಾಮನಗರ ಜಿಲ್ಲೆಯ ಕನಕಪುರ, ಚನ್ನಪಟ್ಟಣ ಮತ್ತು ರಾಮನಗರ ತಾಲೂಕುಗಳ 13 ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಎಲ್ಲ ವ್ಯವಸ್ಥೆಗಳನ್ನು ಗಮನಿಸಿದ್ದೇನೆ. ಅಚ್ಚುಕಟ್ಟಾದ ವ್ಯವಸ್ಥೆಗಳನ್ನು ಮಾಡಲಾಗಿದೆ. ಮಕ್ಕಳು ನೆಮ್ಮದಿ ಮತ್ತು ಆಹ್ಲಾದಕರ ವಾತಾವರಣದಲ್ಲಿ ಪರೀಕ್ಷೆ ಬರೆಯುತ್ತಿದ್ದುದು ಕಂಡುಬಂದಿದೆ ಎಂದರು. 

ಪರೀಕ್ಷೆಯ ಪ್ರಮುಖ ಸಂಗತಿಗಳು

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮೆಣಸಿನಹಾಡ್ಯ ಗ್ರಾಮದ ವಿದ್ಯಾರ್ಥಿನಿ ಕಲ್ಪನಾ ಮನೆಯಲ್ಲಿ ಅಡುಗೆ ಮಾಡುತ್ತಿದ್ದಾಗ ಕಾಲಿಗೆ ಸುಟ್ಟಗಾಯಗಳಾಗಿರುವುದನ್ನು ಲೆಕ್ಕಿಸದೆ ಪರೀಕ್ಷೆಗೆ ಹಾಜರಾಗಿದ್ದಾಳೆ. ಈಕೆಯನ್ನು ನಮ್ಮ ಇಲಾಖೆ ಅಧಿಕಾರಿಗಳು ತಮ್ಮ ವಾಹನದಲ್ಲಿ 22 ಕಿ.ಮೀ. ದೂರದಿಂದ ಕರೆತಂದು ಶೃಂಗೇರಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪರೀಕ್ಷೆ ಬರೆಸಿದ್ದಾರೆ. ಆ ವಿದ್ಯಾರ್ಥಿನಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುವೆ ಎಂದು ಅವರು ತಿಳಿಸಿದರು. 

ಶಿರಸಿ ಶೈಕ್ಷಣಿಕ ಜಿಲ್ಲೆಯ ಬಂಕೇಶ್ವರ ಗ್ರಾಮದ ಪ್ರೌಢಶಾಲೆಯ ತಾರಾ ಎಂಬ ವಿದ್ಯಾರ್ಥಿನಿಯ ತಂದೆ ಆಕೆಯನ್ನು ಪರೀಕ್ಷಾ ಕೇಂದ್ರಕ್ಕೆ ಕರೆತರುತ್ತಿರುವ ಸಂದರ್ಭದಲ್ಲಿ ಅಪಘಾತಕ್ಕೀಡಾಗಿದ್ದರಿಂದ ವಾಹನವಿಲ್ಲದೇ ಪರಿತಪಿಸುತ್ತಿದ್ದ ಸಂದರ್ಭದಲ್ಲಿ ನಮ್ಮ ಶಿಕ್ಷಕರು ಅವರ ಸ್ವಂತ ವಾಹನದಲ್ಲಿ ಆಕೆಯನ್ನು ಪರೀಕ್ಷಾ ಕೇಂದ್ರಕ್ಕೆ ಸಕಾಲದಲ್ಲಿ ಕರೆತಂದು ಪರೀಕ್ಷೆ ಬರೆಯುವಂತೆ ಮಾಡಿದ್ದಾರೆ. ಆಕೆಯ ತಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದರು.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಮೂಡಲಗಿ ತಾಲೂಕಿನ ಘಟಪ್ರಭಾದ ಕೆ.ಆರ್. ಹುಕ್ಕೇರಿ ಪ್ರೌಢಶಾಲೆಯ ಕುಲಗೋಡು ಎಂಬ ವಿದ್ಯಾರ್ಥಿ ಪರೀಕ್ಷೆಗೆಂದು ಸಂಬಂಧಿಕರ ವಾಹನದಲ್ಲಿ ಬರುತ್ತಿದ್ದಾಗ ಅಪಘಾತವಾಗಿ ಸಣ್ಣಪುಟ್ಟ ಗಾಯಗಳಾಗಿದ್ದು, ಮಾನಸಿಕ ಆಘಾತಕ್ಕೊಳಗಾಗಿದ್ದರಿಂದ ಇಂದಿನ ಪರೀಕ್ಷೆಗೆ ವಿನಾಯ್ತಿ ಕಲ್ಪಿಸಿ ವೈದ್ಯಕೀಯ ಶುಶ್ರೂಷೆ ನೀಡಲಾಗಿದೆ. ಮುಂದಿನ ಪರೀಕ್ಷೆಗಳಿಗೆ ಈತ ಹಾಜರಾಗಲಿದ್ದಾನೆ. ಇಂದಿನ ವಿಷಯಕ್ಕೆ ಸಂಬಂಧಿಸಿದಂತೆ ಆತನಿಗೆ ಪೂರಕ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.

ಸಮಾಜ ವಿಜ್ಞಾನ ವಿಷಯದ ಪರೀಕ್ಷೆಗೆ ಶಿರಸಿ ಶೈಕ್ಷಣಿಕ ಜಿಲ್ಲೆಯ ಯಲ್ಲಾಪುರದ ಸೀಲ್ ಡೌನ್ ಪ್ರದೇಶದಿಂದ ಇಬ್ಬರು ವಿದ್ಯಾರ್ಥಿಗಳನ್ನು ವಿಶೇಷ ವಾಹನದ ಮೂಲಕ ಕರೆತಂದು ಯಲ್ಲಾಪುರದ ವಿಶ್ವದರ್ಶನ ಪ್ರೌಢಶಾಲೆಯಲ್ಲಿ ಪರೀಕ್ಷೆ ಬರೆಸುವ ವ್ಯವಸ್ಥೆ ಮಾಡಲಾಗಿದೆ. 

ಸಿಸಿಟಿವಿ ಫೂಟೇಜ್

ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಯ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿಗಳನ್ನು ನಿರ್ಬಂಧಿಸಿ ಪರೀಕ್ಷಾ ಅಕ್ರಮಗಳನ್ನು ಪ್ರೋತ್ಸಾಹಿಸುವ ಪ್ರಕರಣಗಳು ವರದಿಯಾಗಿವೆ. ಮುಖ್ಯಸ್ಥರು, ಪ್ರತಿದಿನದ ಪರೀಕ್ಷೆ ಮುಗಿದ ಬಳಿಕ ಸಿಸಿಟಿವಿ ಫುಟೇಜ್‌ಗಳನ್ನು ಮೇಲಧಿಕಾರಿಗಳಿಗೆ ಕಡ್ಡಾಯವಾಗಿ ಸಲ್ಲಿಸತಕ್ಕದ್ದು ಹಾಗೂ ಅದನ್ನು ಪರಾಮರ್ಶಿಸುವುದನ್ನು ಕಡ್ಡಾಯವಾಗಿ ನಿರ್ವಹಿಸತಕ್ಕದ್ದೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾವುದೇ ಪರೀಕ್ಷಾ ಕೇಂದ್ರದ ಸಿಸಿಟಿವಿ ಫೂಟೇಜ್ ದಾಖಲೆಗಳು ಸಂಪೂರ್ಣ ಲಭ್ಯವಾಗದಿದ್ದಲ್ಲಿ ಅಥವಾ ತಿರುಚಿರುವುದು ಕಂಡು ಬಂದಲ್ಲಿ ಸಂಬಂಧಿಸಿದ ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಹಾಗೂ ಸಂಬಂಧಿಸಿದ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದೆಂದು ಈಗಾಗಲೇ ಎಚ್ಚರಿಕೆ ನೀಡಿದ್ದೇನೆ ಎಂದು ಸಚಿವರು ತಿಳಿಸಿದ್ದಾರೆ. 

ಯಾದಗಿರಿ ಜಿಲ್ಲೆಯ ಕೆಂಭಾವಿ ಪಟ್ಟಣದಲ್ಲಿ ಜೂನ್ 27ರ ಗಣಿತ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದ ನಾಲ್ವರು ವಿದ್ಯಾರ್ಥಿನಿಯರು ಮತ್ತು ಒಬ್ಬ ವಿದ್ಯಾರ್ಥಿಗೆ ಹಳೆ ಪಠ್ಯಕ್ರಮದ ಪ್ರಶ್ನೆ ಪತ್ರಿಕೆ ವಿತರಿಸಲಾಗಿದೆ ಎಂಬ ವರದಿಯನ್ನು ಇಂದು ಪತ್ರಿಕೆಗಳಲ್ಲಿ ಗಮನಿಸಲಾಗಿದ್ದು, ಈ ಪ್ರಕರಣದ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಸಲುವಾಗಿ ಅಂತಹ ಐದು ಪರಿಕ್ಷಾರ್ಥಿಗಳ ಉತ್ತರ ಪತ್ರಿಕೆಗಳನ್ನು ಪ್ರತ್ಯೇಕವಾಗಿ ಪರಿಶೀಲನೆ ನಡೆಸಿ ಅಚಾತುರ್ಯವಾಗಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ , ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಮತ್ತು ಕೊಠಡಿ ಮೇಲ್ವಿಚಾರಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಆದೇಶ ನೀಡಲಾಗಿದೆ ಎಂದು ಹೇಳಿದರು.

ಐದು ದಿನಗಳ ಪರೀಕ್ಷಾ ಪ್ರಕ್ರಿಯೆಗಳು ಮುಕ್ತಾಯಗೊಂಡಿದ್ದು, ಪ್ರಥಮ ಮತ್ತು ತೃತೀಯ ಭಾಷೆಗಳು ಮಾತ್ರವೇ ಬಾಕಿಯಿರುತ್ತವೆ. ಮಕ್ಕಳು ಯಾವುದೇ ಆತಂಕವಿಟ್ಟುಕೊಳ್ಳದೇ ಮುಂದಿನ ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದಲೇ ಬರೆಯಲೆಂದು ಸಚಿವರು ಆಶಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು