ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮೊದಲ ವಿಷಯ ಬರೆದು ನಗುಮೊಗದಿಂದ ಹೊರಬಂದ ವಿದ್ಯಾರ್ಥಿಗಳು

’ಮೊದಲು ಭಯವಾಯ್ತು; ಪರೀಕ್ಷೆ ಬರೆದು ಧೈರ್ಯ ಬಂತು’
Last Updated 25 ಜೂನ್ 2020, 10:33 IST
ಅಕ್ಷರ ಗಾತ್ರ

ಹುಬ್ಬಳ್ಳಿ: ’ಕೊರೊನಾ ಸೋಂಕಿನ ಕಾರಣಕ್ಕೆ ಪರೀಕ್ಷಾ ಕೊಠಡಿಗೆ ಒಳಹೋಗುವ ಮೊದಲು ಸಾಕಷ್ಟು ಭಯವಾಗಿತ್ತು. ಪರೀಕ್ಷಾ ಕೇಂದ್ರದವರೇ ಸ್ಯಾನಿಟೈಸರ್‌, ಮಾಸ್ಕ್‌ ಕೊಟ್ಟು ಸುರಕ್ಷತೆಗೆ ಒತ್ತು ಕೊಟ್ಟಿದ್ದರಿಂದ ಪರೀಕ್ಷೆ ಮುಗಿಯುವಷ್ಟರಲ್ಲಿ ಭಯ ಹೋಗಿ ಧೈರ್ಯ ಬಂತು...’

ನಗರದ ಲ್ಯಾಮಿಂಗ್ಟನ್‌ ಶಾಲೆಯಲ್ಲಿ ಗುರುವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ನಗುಮೊಗದಿಂದ ಹೊರಬಂದ ಜ್ಞಾನಭಾರತಿ ಇಂಗ್ಲಿಷ್‌ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ನೇಹಾ ಸುತಾರ ಹೀಗೆ ಹೇಳಿದರು.

‘ಪರೀಕ್ಷೆ ಯಾವಾಗ ಬೇಕಾದರೂ ನಡೆಯಬಹುದೆಂದು ಸಿದ್ಧತೆ ಮಾಡಿಕೊಂಡಿದ್ದೆ. ಪರೀಕ್ಷಾ ಕೇಂದ್ರಗಳಲ್ಲಿ ಸುರಕ್ಷತೆ ಕಾಯ್ದುಕೊಳ್ಳಲು ಹೇಗಿರಬೇಕು ಎಂದು ಪೋಷಕರು ಹಾಗೂ ಶಿಕ್ಷಕರು ಹೇಳಿಕೊಟ್ಟಿದ್ದರು. ಮನೆಯಿಂದಲೇ ಮಾಸ್ಕ್‌, ಸ್ಯಾನಿಟೈಸರ್‌, ಕುಡಿಯುವ ನೀರಿನ ಬಾಟಲ್‌ ತೆಗೆದುಕೊಂಡು ಹೋಗಿದ್ದೆ’ ಎಂದು ನೇಹಾ ಹೇಳಿದರು.

‘ಪರೀಕ್ಷಾ ತರಗತಿಯೊಳಗೆ ಹೋದ ಮೊದಲು ಸುರಕ್ಷತೆಗೆ ಒತ್ತುಕೊಡಬೇಕು. ನಿಗದಿ ಪಡಿಸಿದ ಜಾಗದಲ್ಲೇ ಕುಳಿತುಕೊಳ್ಳಬೇಕು ಎಂದು ಶಿಕ್ಷಕರು ಹೇಳಿದ್ದರು. ಅದರಂತೆ ನಡೆದುಕೊಂಡೆ. ಪರೀಕ್ಷೆ ಹೇಗೆ ನಡೆಯುತ್ತದೆ ಎನ್ನುವ ಆತಂಕ ಈಗ ದೂರವಾಗಿದೆ. ಉಳಿದ ವಿಷಯಗಳ ಪರೀಕ್ಷೆಯನ್ನು ಅರಾಮವಾಗಿ ಬರೆಯಬಹುದು’ ಎಂದರು.

ಗೋಪನಕೊಪ್ಪದಿಂದ ಬಂದಿದ್ದ ಲ್ಯಾಮಿಂಗ್ಟನ್ ಶಾಲೆಯ ವಿದ್ಯಾರ್ಥಿ ಅನೂಪ್‌ ಬಂಡಿವಡ್ಡರ ‘ಪರೀಕ್ಷೆ ನಡೆಯುವುದೇ ಖಚಿತವಿರಲಿಲ್ಲ. ಆದ್ದರಿಂದ ಪರೀಕ್ಷೆ ಸಮೀಪಿಸಿದಂತೆ ಹೆಚ್ಚು ಓದಿದೆ. ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದರಿಂದ ಯಾವುದೇ ಆತಂಕವಾಗಲಿಲ್ಲ. ಉಳಿದ ವಿಷಯಗಳ ಪರೀಕ್ಷೆಗಳನ್ನು ನಿರಾಂತಕವಾಗಿ ಬರೆಯಲು ಧೈರ್ಯ ಬಂತು’ ಎಂದರು. ಇದಕ್ಕೆ ಲ್ಯಾಮಿಂಗ್ಟನ್‌ ಶಾಲೆಯ ಇನ್ನೊಬ್ಬ ವಿದ್ಯಾರ್ಥಿ ಅಜಯ್‌ ಶಿಂಧೆ ದನಿಗೂಡಿಸಿದರು.

ಲ್ಯಾಮಿಂಗ್ಟನ್‌ ಶಾಲೆಯಲ್ಲಿ ಪರೀಕ್ಷೆ ಬರೆದ ಮಕ್ಕಳಿಗೆ ಕ್ಷಮತಾ ಸೇವಾ ಸಂಸ್ಥೆಯಿಂದ ಹಾಲು ಹಾಗೂ ಬಿಸ್ಕಟ್‌ನ ವ್ಯವಸ್ಥೆ ಮಾಡಲಾಗಿತ್ತು. ದಾಜೀಬಾನ ಪೇಟೆಯಲ್ಲಿರುವ ದುರ್ಗಾದೇವಿ ಕನ್ನಡ ಮಾಧ್ಯಮ ಪ್ರೌಢಶಾಲೆ ಮತ್ತು ಮೂರು ಸಾವಿರ ಮಠದ ಶಾಲೆಯಲ್ಲಿಯೂ ವಿದ್ಯಾರ್ಥಿಗಳು ನಿರಾತಂಕವಾಗಿ ಪರೀಕ್ಷೆ ಬರೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT