ಎಸ್ಸೆಸ್ಸೆಲ್ಸಿ: ಸಾಮೂಹಿಕ ನಕಲು

ಬುಧವಾರ, ಏಪ್ರಿಲ್ 24, 2019
33 °C

ಎಸ್ಸೆಸ್ಸೆಲ್ಸಿ: ಸಾಮೂಹಿಕ ನಕಲು

Published:
Updated:

ಬೆಂಗಳೂರು: ಶೈಕ್ಷಣಿಕವಾಗಿ ಹಿಂದುಳಿದಿರುವ ಜಿಲ್ಲೆಗಳು ಮತ್ತು ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಫಲಿತಾಂಶ ಸಾಧಿಸಬೇಕೆಂಬ ಉದ್ದೇಶದಿಂದ ಗುರುವಾರ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮೇಲ್ವಿಚಾರಕರೇ ಸಾಮೂಹಿಕ ನಕಲು ಮಾಡಲು ಅವಕಾಶ ನೀಡಿರುವುದು ವರದಿಯಾಗಿದೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ ಮೊದಲ ದಿನವಾದ ಗುರುವಾರ ಕನ್ನಡ ಪರೀಕ್ಷೆ ನಡೆದಿತ್ತು. ಮಂಡ್ಯ, ಕೊಪ್ಪಳ, ಬಳ್ಳಾರಿ, ರಾಯಚೂರು, ಗದಗ, ಬೆಳಗಾವಿ, ‌ಚಿತ್ರದುರ್ಗ, ದಾವಣಗೆರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳೂ ಸೇರಿ ಹಲವೆಡೆ ಪರೀಕ್ಷಾ ಕೊಠಡಿಯ ಮೇಲ್ವಿಚಾರಕರೇ ವಿದ್ಯಾರ್ಥಿಗಳಿಗೆ 35 ಅಂಕಗಳು ಪಡೆಯುವಷ್ಟು ಉತ್ತರಗಳನ್ನು ಹೇಳಿಕೊಟ್ಟಿದ್ದಾರೆ ಎಂದು ಮೂಲಗಳು ಹೇಳಿವೆ.

ಪರೀಕ್ಷಾ ಕೊಠಡಿಗಳಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಬಂದ್‌ ಮಾಡಿ ಉತ್ತರವನ್ನು ಹೇಳಿಕೊಟ್ಟಿದ್ದಾರೆ ಎಂದು ಶಿಕ್ಷಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಆಯಾ ಜಿಲ್ಲೆಗಳಲ್ಲಿ ಉತ್ತಮ ಫಲಿತಾಂಶಕ್ಕಾಗಿ ಡಿಡಿಪಿಐ ಹಂತದ ಅಧಿಕಾರಿಗಳಿಂದಲೂ ಒತ್ತಡವಿದೆ. ಜಿಲ್ಲಾ ಮಟ್ಟದಲ್ಲಿ ಡಿಡಿಪಿಐ ಮತ್ತು ಬ್ಲಾಕ್‌ ಮಟ್ಟದಲ್ಲಿ ಬಿಇಒಗಳೂ ಉತ್ತಮ ಫಲಿತಾಂಶ ಬಾರದೇ ಇದ್ದರೆ ಸಮಸ್ಯೆಗೆ ಗುರಿಯಾಗಬೇಕಾಗುತ್ತದೆ ಎಂಬ ಕಾರಣಕ್ಕೆ ಸಾಮೂಹಿಕ ನಕಲು ಮಾಡಲು ಅಥವಾ ವಿದ್ಯಾರ್ಥಿಗಳು ಉತ್ತೀರ್ಣಕ್ಕೆ ಬೇಕಾಗುವಷ್ಟು ಅಂಕಗಳಿಗೆ ಉತ್ತರ ಹೇಳಿಕೊಡುವಂತೆ ಪರೋಕ್ಷ ಸೂಚನೆ ನೀಡುತ್ತಿದ್ದಾರೆ ಎಂದರು.

ಅನುದಾನಿತ ಶಾಲೆಗಳ ಮೇಲೂ ಒತ್ತಡ: ಅನುದಾನಿತ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬಾರದೇ ಇದ್ದರೆ, ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತುಂಬಲು ಅವಕಾಶ ನೀಡುವುದಿಲ್ಲ ಎಂಬುದಾಗಿ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಹೀಗಾಗಿ ಅನುದಾನಿತ ಶಾಲೆ ಉತ್ತಮ ಫಲಿತಾಂಶವನ್ನು ಹೊಂದಬೇಕು ಎಂಬ ಕಾರಣಕ್ಕೆ ಉತ್ತರ ಹೇಳಿಕೊಡುವ ವ್ಯವಸ್ಥೆಯನ್ನೂ ಮಾಡಿಕೊಂಡಿವೆ ಎನ್ನಲಾಗಿದೆ.

ಇಂತಹದ್ದೊಂದು ವ್ಯವಸ್ಥೆ ಇದೆ: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಇಂತಹದ್ದೊಂದು ವ್ಯವಸ್ಥೆ ಕೆಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಏಕಾಏಕಿ ಬದಲಾವಣೆಗಳನ್ನು ತರುವುದು ಕಷ್ಟ. ಸಾಕಷ್ಟು ಬದಲಾವಣೆಗಳನ್ನು ತರುವ ಪ್ರಯತ್ನ ನಡೆದಿದೆ. ಆದರೂ ಕೆಲವು ಶೈಕ್ಷಣಿಕ ಜಿಲ್ಲೆಗಳು ಅಚ್ಚರಿಯ ಫಲಿತಾಂಶ ನೀಡುತ್ತಲೇ ಬಂದಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. 

ನಿರ್ದಿಷ್ಟ ದೂರು ಬಂದರೆ ಕಠಿಣ ಕ್ರಮ

ನಿರ್ದಿಷ್ಟ ಪರೀಕ್ಷಾ ಕೇಂದ್ರಗಳಲ್ಲಿ ನಕಲು ಮಾಡಿಸಿರುವ ಮಾಹಿತಿ ನೀಡಿದರೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ವಿ.ಸುಮಂಗಲಾ ತಿಳಿಸಿದರು.

‘ನನಗೂ ಮಕ್ಕಳಿಂದ ಈ ರೀತಿ ಕರೆ ಬಂದಿತ್ತು. ಆದರೆ, ಆ ಮಕ್ಕಳು ತಪ್ಪು ಮಾಹಿತಿಗಳನ್ನು ನೀಡಿದ್ದರು. ನಿರ್ದಿಷ್ಟ ಮಾಹಿತಿ ನೀಡಿದರೆ ಪರೀಕ್ಷಾ ಕೇಂದ್ರದ ಮುಖ್ಯಸ್ಥರು, ಮುಖ್ಯಸ್ಥರಿಗೆ ನೋಟಿಸ್‌ ಜಾರಿ ಮಾಡಲಾಗುವುದು’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

 

ಬರಹ ಇಷ್ಟವಾಯಿತೆ?

 • 8

  Happy
 • 2

  Amused
 • 2

  Sad
 • 3

  Frustrated
 • 0

  Angry

Comments:

0 comments

Write the first review for this !