ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಗಣಿತ ಪರೀಕ್ಷೆ : ಶೇ 97.93 ಹಾಜರಾತಿ

ಅರಕಲಗೂಡಿನಲ್ಲಿ ಪರೀಕ್ಷೆ ಬರೆಯುತ್ತಿದ್ದಾಗಲೇ ವಿದ್ಯಾರ್ಥಿಯ ಕೋವಿಡ್ ಪರೀಕ್ಷಾ ವರದಿ ಪ್ರಕಟ
Last Updated 27 ಜೂನ್ 2020, 19:31 IST
ಅಕ್ಷರ ಗಾತ್ರ

ಬೆಂಗಳೂರು: ಎಸ್ಸೆಸ್ಸೆಲ್ಸಿ ಗಣಿತ ಪರೀಕ್ಷೆ ಶನಿವಾರ ಸುಗಮವಾಗಿ ಜರುಗಿದ್ದು, ಶೇ 97.93ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರು. ಗದಗದಮುನಿಸಿಪಲ್ ಪ್ರೌಢಶಾಲೆಯಲ್ಲಿ 6 ಮಂದಿ ಖಾಸಗಿ ಅಭ್ಯರ್ಥಿಗಳನ್ನು ಪರೀಕ್ಷಾ ಅಕ್ರಮ ಆರೋಪದ ಮೇರೆಗೆ ಡಿಬಾರ್‌ ಮಾಡಲಾಗಿದೆ.

‘8,08,650 ವಿದ್ಯಾರ್ಥಿಗಳ ಪೈಕಿ 7,91,987 ಮಂದಿ ಪರೀಕ್ಷೆ ಬರೆದಿದ್ದಾರೆ.16,663 ಮಂದಿ ಗೈರಾಗಿದ್ದಾರೆ. ಕಳೆದ ವರ್ಷ ಇದೇ ಪರೀಕ್ಷೆಗೆ ಶೇ 98.68ರಷ್ಟು ಹಾಜರಾತಿ ಇತ್ತು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‌ ಕುಮಾರ್ ಪರೀಕ್ಷೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘7,44,901 ಶಾಲಾ ವಿದ್ಯಾರ್ಥಿಗಳು ಹಾಗೂ 20,923 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ಕಂಟೈನ್‍ಮೆಂಟ್ ಪ್ರದೇಶಗಳ 2,048 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕೋವಿಡೇತರ ಅನಾರೋಗ್ಯ ಕಾರಣಗಳಿಂದ ವಿಶೇಷ ಕೊಠಡಿಗಳಲ್ಲಿ 292 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಸರ್ಕಾರಿ/ಖಾಸಗಿ ವಸತಿ ನಿಲಯಗಳಲ್ಲಿ ಇದ್ದು, 1,442 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ನೆರೆ ರಾಜ್ಯಗಳಿಂದ 659 ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿದ್ದು, 600 ಮಂದಿ ಪರೀಕ್ಷೆ ಬರೆದಿದ್ದಾರೆ. 12,644 ವಲಸೆ ವಿದ್ಯಾರ್ಥಿಗಳ ಪೈಕಿ 12,539 ಮಂದಿ ಹಾಜರಾಗಿದ್ದಾರೆ’ ಎಂದು ಸಚಿವರು ಮಾಹಿತಿ ನೀಡಿದರು.

‘ಧಾರವಾಡ ತಾಲ್ಲೂಕಿನ ಕಾಶಿನಹಟ್ಟಿ ಗ್ರಾಮದ ವಿದ್ಯಾರ್ಥಿನಿಯೊಬ್ಬಳನ್ನು ಪೋಷಕರು ಇಂಗ್ಲಿಷ್‌ ಪರೀಕ್ಷೆಗೆ ಕಳುಹಿಸಿರಲಿಲ್ಲ. ಈಕೆ ಗಣಿತ ಪರೀಕ್ಷೆ ಬರೆದಿದ್ದಾಳೆ. ಮಂಗಳೂರಿನ ಬಳಿಯ ಕಸಬಾ ಬೇಂಗ್ರೆಯಲ್ಲಿ ಬೋಟ್‌ ಚಾಲಕ ಬಶೀರ್‌ ಉಚಿತವಾಗಿ ವಿದ್ಯಾರ್ಥಿಗಳನ್ನು ದಡಕ್ಕೆ ಬಿಟ್ಟು ಉತ್ತಮ ಸಂದೇಶ ರವಾನಿಸಿದ್ದಾರೆ. ಅಪಘಾತದಲ್ಲಿ ಕಾಲು ಮುರಿದಿದ್ದ ವಿದ್ಯಾರ್ಥಿ ಅರ್ಷದ್ ಪಾಷಾ ಬೆಂಗಳೂರು ವರ್ತೂರಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗಿದ್ದಾನೆ’ ಎಂದು ಹೇಳಿದರು.‌

ಪರೀಕ್ಷೆ ವೇಳೆ ಏನೇನಾಯ್ತು?

* ವಿಜಯಪುರ ಜಿಲ್ಲೆಯ ಹೂವಿನ ಹಿಪ್ಪರಗಿಯಲ್ಲಿ ನಕಲು ಚೀಟಿ ಕೊಡಲು ಹೋಗಿದ್ದ ಯುವಕ ಅನುಮಾನಾಸ್ಪದ ಸಾವು.

* ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನಲ್ಲಿ ವಿದ್ಯಾರ್ಥಿ ಪರೀಕ್ಷೆ ಬರೆಯುತ್ತಿದ್ದಾಗಲೇ ಕೋವಿಡ್‌ ಪರೀಕ್ಷಾ ವರದಿ ಪ್ರಕಟ–ಕೊಠಡಿಯಲ್ಲಿದ್ದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವ ಕುರಿತು ತಜ್ಞರ ಸಲಹೆ ಯಾಚನೆ. ‌

* ಕಲಬುರ್ಗಿ ಜಿಲ್ಲೆಯ ತಾಂಡಾವೊಂದರಲ್ಲಿ ಇದೇ 24ರ ರಾತ್ರಿ ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆದರೂ ದಿಟ್ಟತನದಿಂದ ಪರೀಕ್ಷೆ ಎದುರಿಸಿದ ಬಾಲಕಿ.

*ಗದಗ ಜಿಲ್ಲೆಯ ಲಕ್ಷ್ಮೇಶ್ವರದ ‘ಬಿ.ಡಿ.ತಟ್ಟಿ ಕಿವುಡ ಮತ್ತು ಮೂಗ ಮಕ್ಕಳ ವಸತಿಶಾಲೆ’ ಯಲ್ಲಿ ಒಬ್ಬ ವಿದ್ಯಾರ್ಥಿಗೆ ಕೋವಿಡ್‌. ಸಂಪರ್ಕವಿದ್ದ 19 ವಿದ್ಯಾರ್ಥಿಗಳಿಗೆ ಕ್ವಾರಂಟೈನ್‍.

* ಬೆಂಗಳೂರಿನ ಮೂಡಲಪಾಳ್ಯದಲ್ಲಿ ಸೇಂಟ್ ಕ್ಸೇವಿಯರ್ ಪ್ರೌಢಶಾಲೆ ಪರೀಕ್ಷಾ ಕೇಂದ್ರದ ಬಳಿಯೇ ಸೀಲ್‌ಡೌನ್‌. ಆದರೂ ಪರೀಕ್ಷೆ ಬರೆದ 289 ಮಂದಿ. ಮುಂದಿನ ಪರೀಕ್ಷೆ ಬೇರೆ ಕೇಂದ್ರದಲ್ಲಿ

* ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಪೇಟೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯೊಬ್ಬಳ ಅಜ್ಜಿಗೆ ಕೋವಿಡ್‌ ದೃಢ

* ಪಾವಗಡ ತಾಲ್ಲೂಕಿನ ಅರಸೀಕೆರೆ ಸರ್ಕಾರಿ ಪ್ರೌಢಶಾಲೆಗೆ ಮೊದಲ ಪರೀಕ್ಷೆಯ ದಿನ ವೀಕ್ಷಕರಾಗಿ ಬಂದಿದ್ದ ಹಿಂದುಳಿದ ವರ್ಗಗಳ ಇಲಾಖಾ ವಿಸ್ತರಣಾಧಿಕಾರಿಗೆ ಸೋಂಕು ದೃಢ. ಕೇಂದ್ರದ ಎಲ್ಲ ಸಿಬ್ಬಂದಿ ಬದಲಾವಣೆ.

* ಬಾಗಲಕೋಟೆ ತಾಲ್ಲೂಕಿನ ಕಲಾದಗಿಯಲ್ಲಿ ಇಬ್ಬರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕೋವಿಡ್-19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತೆ ಕ್ರಮಗಳೊಂದಿಗೆ ಗಣಿತ ಪರೀಕ್ಷೆ ನಡೆಸಲಾಯಿತು.

* ತಂದೆಯ ಸಾವಿನ ದುಃಖದಲ್ಲೂ ಹೊಸದುರ್ಗ ಪಟ್ಟಣದ ಗವಿರಂಗನಾಥಸ್ವಾಮಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಮಹಮ್ಮದ್‌ ಖಲಂದರ್‌ ಎಂಬ ವಿದ್ಯಾರ್ಥಿ ಶನಿವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದಾನೆ.

* ವಿಜಯಪುರ ಜಿಲ್ಲೆಯ ಸಿಂದಗಿಯ ಅಂಜುಮನ್ ಪ್ರೌಢಶಾಲೆ ಪರೀಕ್ಷಾ ಕೇಂದ್ರದಲ್ಲಿ ಗಣಿತ ಪರೀಕ್ಷೆ ನಡೆದ ಸಂದರ್ಭದಲ್ಲಿ ಕೇಂದ್ರದ ಹಿಂದಿನಿಂದ ಕಿಟಕಿಯ ಮೂಲಕ ಕಿಡಿಗೇಡಿಗಳು ಕಲ್ಲು ತೂರಿ ಕೊಠಡಿ ಮೇಲ್ವಿಚಾರಕರಿಗೆ ಬೆದರಿಕೆ ಹಾಕಿದ್ದಾರೆ.

ಪ್ರಶ್ನೆಪತ್ರಿಕೆ ಅದಲು ಬದಲು!

ಸಿಂಧನೂರು (ರಾಯಚೂರು ಜಿಲ್ಲೆ): ನಗರದ ಶ್ರೀಕೃಷ್ಣದೇವರಾಯ ವಿದ್ಯಾಸಂಸ್ಥೆಯ ಪರೀಕ್ಷಾ ಕೇಂದ್ರದಲ್ಲಿ ಶನಿವಾರ ನಡೆದ ಎಸ್ಸೆಸ್ಸೆಲ್ಸಿ ಗಣಿತ ಪರೀಕ್ಷೆಯಲ್ಲಿ 20 ರೆಗ್ಯೂಲರ್ ವಿದ್ಯಾರ್ಥಿಗಳಿಗೆ, ಪುನರಾವರ್ತಿತ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಪ್ರಶ್ನೆಪತ್ರಿಕೆಗಳನ್ನು ಕೊಡಲಾಯಿತು.

ವಿದ್ಯಾರ್ಥಿಗಳು ಗೊಂದಲ ಮಾಡಿಕೊಂಡು ಉತ್ತರಿಸಿದ್ದು, ಪರೀಕ್ಷೆ ಮುಗಿದ ಬಳಿಕ ಅವಾಂತರ ಬಯಲಾಗಿದೆ. ಕೂಡಲೇ ಪಾಲಕರೆಲ್ಲ ಒಟ್ಟಾಗಿ ಪರೀಕ್ಷಾ ಕೇಂದ್ರದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಕ್ಷೇತ್ರ ಶಿಕ್ಷಣಾಧಿಕಾರಿ ಅಮರಪ್ಪ ಭೋವಿ, ಪಾಲಕರಿಗೆ ಸಮಜಾಯಿಷಿ ನೀಡಿದರು.

‘ಕೆಲ ವಿದ್ಯಾರ್ಥಿಗಳು ಅದಲುಬದಲಾದ ಪ್ರಶ್ನೆಪತ್ರಿಕೆಗೆ ಉತ್ತರ ಬರೆದಿದ್ದಾರೆ. ನಡೆದಿರುವ ಅವಾಂತರದ ಬಗ್ಗೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಅವರ ಸೂಚನೆಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದರು.

ಅಂಕಿ ಅಂಶ

57

ಹೋಂ ಕ್ವಾರಂಟೈನ್‌ನಲ್ಲಿರುವ ವಿದ್ಯಾರ್ಥಿಗಳು

25

ಕೋವಿಡ್ ಪಾಸಿಟಿವ್‌ವುಳ್ಳ ವಿದ್ಯಾರ್ಥಿಗಳು

3,212

ಒಪ್ಪಂದದ ಮೇರೆಗೆ ಬಳಸಿಕೊಂಡ ವಾಹನಗಳು

***

ಈಗಿನ ಪರಿಸ್ಥಿತಿಯ ಮಧ್ಯೆಯೂ ಗಣಿತ ವಿಷಯದ ಪರೀಕ್ಷೆಗೆ ಹಾಜರಾತಿ, ಯಶಸ್ಸು ಎಲ್ಲವೂ ಸಹ ನಮ್ಮ ಪೋಷಕರ ಮತ್ತು ಮಕ್ಕಳ ಗಟ್ಟಿತನದ ಪ್ರತೀಕ

-ಎಸ್‌.ಸುರೇಶ್ ಕುಮಾರ್‌,ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT