ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿತ ಪ್ರಶ್ನೆಪತ್ರಿಕೆ ಸೋರಿಕೆ ವದಂತಿ: ಇಲಾಖೆ ನಿರಾಕರಣೆ

Last Updated 25 ಮಾರ್ಚ್ 2019, 18:30 IST
ಅಕ್ಷರ ಗಾತ್ರ

ಬೆಂಗಳೂರು: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಗಣಿತ ಪ್ರಶ್ನೆಪತ್ರಿಕೆವಿಜಯಪುರದಲ್ಲಿ ಸೋರಿಕೆಯಾಗಿದೆ ಎಂಬ ದಟ್ಟ ವದಂತಿಯ ನಡುವೆ, ಸೋಮವಾರ ಪರೀಕ್ಷೆ ಸುಗಮವಾಗಿ ಜರುಗಿತು.

‘ಎಸ್ಸೆಸ್ಸೆಲ್ಸಿ ಪರೀಕ್ಷೆಯು ಸುಸೂತ್ರವಾಗಿ ನಡೆಯುತ್ತಿದೆ. ಕೆಲವು ಕಿಡಿಗೇಡಿಗಳು ಪರೀಕ್ಷಾ ವ್ಯವಸ್ಥೆಗೆ ಅಡ್ಡಿಪಡಿಸಲು, ಗೊಂದಲ ಉಂಟುಮಾಡಲು ಕೃತ್ಯಗಳನ್ನು ನಡೆಸುತ್ತಿದ್ದಾರೆಯೇ ಹೊರತು, ಎಲ್ಲೂ ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ’ ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.

‘ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಮೊರಟಗಿಯ ಕಲ್ಪವೃಕ್ಷ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಬೆಳಿಗ್ಗೆ 11.45ರ ನಂತರ ಗಣಿತ ಪ್ರಶ್ನೆಪತ್ರಿಕೆ ವಾಟ್ಸ್‌ ಆ್ಯಪ್‌ನಲ್ಲಿ ಹರಿದಾಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದಕ್ಕೆ ಕಾರಣರಾದವರ ವಿರುದ್ಧ ಶಿಕ್ಷಣ ಕಾಯ್ದೆಯ ಪರೀಕ್ಷಾ ನಿಯಮ ಉಲ್ಲಂಘನೆ ಸೆಕ್ಷನ್‌ ಪ್ರಕಾರ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಇಲಾಖೆಯ ಜಿಲ್ಲಾ ಉಪನಿರ್ದೇಶಕರಿಗೆ ಸೂಚಿಸಲಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಹಾರೂಗೇರಿಯ ವಿದ್ಯಾಲಯ ಪಿ.ಯು.ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಗಣಿತ ಶಿಕ್ಷಕರಾದ ಎ.ಬಿ.ಪಾಟೀಲ, ಡಿ.ಪಿ.ಕಾಪ್ಸಿ, ಪಾಲಯ್ಯ ಎಂಬುವರು ವಿದ್ಯಾರ್ಥಿಗಳು ನಕಲು ಮಾಡಲು ಸಹಕಾರ ನೀಡುತ್ತಿದ್ದಾರೆಂದು ಪರೀಕ್ಷಾ ಮಂಡಳಿಗೆ ದೂರು ಬಂದಿತ್ತು. ಪರೀಕ್ಷಾ ನಿಯಮ ಉಲ್ಲಂಘನೆಯ ಸೆಕ್ಷನ್‌ನಡಿಇವರ ಮೇಲೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಡಿಡಿಪಿಐಗೆ ಸೂಚಿಸಲಾಗಿದೆ. ಅಲ್ಲದೇ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಹಾಗೂ ಕಸ್ಟೋಡಿಯನ್‌ ಅವರನ್ನು ಅಮಾನತಿನಲ್ಲಿ ಇರಿಸಲು ಸೂಚಿಸಲಾಗಿದೆ’ ಎಂದು ಆಯುಕ್ತರು ತಿಳಿಸಿದ್ದಾರೆ.

‘ರಾಯಚೂರು ನಗರದ ಸಿಯಾತಲಾಬ್‌ ಬಡಾವಣೆಯ ಪರೀಕ್ಷಾ ಕೇಂದ್ರದಲ್ಲಿನ ವಿದ್ಯಾರ್ಥಿಗಳು ಸಾಮೂಹಿಕ ನಕಲು ಮಾಡಲು ಪ್ರಯತ್ನಿಸಿದ್ದರು. ಹಾಗಾಗಿ ಕೇಂದ್ರದ ಮುಖ್ಯ ಅಧೀಕ್ಷಕರನ್ನು ಅಮಾನತಿನಲ್ಲಿ ಇರಿಸಲಾಗಿದೆ’ ಎಂದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕಿ ವಿ.ಸುಮಂಗಲ ತಿಳಿಸಿದ್ದಾರೆ.

ಮೈಸೂರಿನ ಒಂಟಿಕೊಪ್ಪಲಿನ ಮಾತೃಮಂಡಳಿ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯೊಬ್ಬ ನಕಲು ಮಾಡಲು ಯತ್ನಿಸಿ ಡಿಬಾರ್‌ ಆಗಿದ್ದಾನೆ.

ಗಣಿತ ವಿಷಯದ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 8,17,730 ವಿದ್ಯಾರ್ಥಿಗಳಲ್ಲಿ 7,90,537 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 27,193 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.

ಗೈರು ಹಾಜರಾದವರ ಮೇಲೆ ಶಿಸ್ತುಕ್ರಮಕ್ಕೆ ಸಿದ್ಧತೆ

ದ್ವಿತೀಯ ಪಿ.ಯು. ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಗೈರಾಗಿರುವ6,529 ಉಪನ್ಯಾಸಕರ ವಿರುದ್ಧ ‘ಯಾವ ಕ್ರಮ ಕೈಗೊಳ್ಳಲಾಗಿದೆ’ ಎಂಬ ವರದಿಯನ್ನು ಮಾರ್ಚ್‌ 27 ರೊಳಗೆ ಸಲ್ಲಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಎಲ್ಲ ಡಿಡಿಪಿಐಗಳಿಗೆ ತಿಳಿಸಿದ್ದಾರೆ.

ಮೌಲ್ಯಮಾಪನದ ಡಿಕೋಡಿಂಗ್‌ ಪ್ರಕ್ರಿಯೆ ಮಾರ್ಚ್‌ 23ರಿಂದ ಆರಂಭವಾಗಿತ್ತು. ಸೋಮವಾರದಿಂದ ಮೌಲ್ಯಮಾಪನ ಕಾರ್ಯ ಆರಂಭವಾಗಿದೆ. 18,346 ಮೌಲ್ಯಮಾಪಕರಲ್ಲಿ 11,617 ಮೌಲ್ಯಮಾಪಕರು ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದರು. 6,529ಮೌಲ್ಯಮಾಪಕರು ಸೋಮವಾರದವರೆಗೂ(ಮಾರ್ಚ್‌ 25) ಗೈರುಹಾಜರಾಗಿದ್ದರು.

‘ಗೈರು ಹಾಜರಾಗಿರುವ ಉಪನ್ಯಾಸಕರು, ಪ್ರಾಂಶುಪಾಲರು ಮಾರ್ಚ್‌ 26 ರಿಂದ ಮೌಲ್ಯಮಾಪನ ಕಾರ್ಯಕ್ಕೆ ತಪ್ಪದೇ ಬರಬೇಕು. ಇಲ್ಲದಿದ್ದರೆ ಶಿಸ್ತುಕ್ರಮ ಎದುರಿಸಬೇಕಾಗುತ್ತದೆ’ ಎಂದು ಇಲಾಖೆಯ ನಿರ್ದೇಶಕರು ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT