ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೈರ್ಯದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಿ: ಸಚಿವ ಸುರೇಶ್‌ ಕುಮಾರ್

ಕೊರೊನಾ ಸೋಂಕು ಹರಡದಂತೆ ವ್ಯಾಪಕ ಕ್ರಮ
Last Updated 25 ಜೂನ್ 2020, 3:27 IST
ಅಕ್ಷರ ಗಾತ್ರ

ಬೆಂಗಳೂರು: ಗುರುವಾರದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ರಾಜ್ಯದ 8.48 ಲಕ್ಷ ವಿದ್ಯಾರ್ಥಿಗಳು ಸಜ್ಜಾಗಿದ್ದು, 2,879 ಕೇಂದ್ರಗಳ ವಾತಾವರಣ ಸುರಕ್ಷಿತವಾಗಿರುವಂತೆ ನೋಡಿಕೊಳ್ಳಲು ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ.

ಬೆಳಿಗ್ಗೆ 10.30ರಿಂದ 1.45ರವರೆಗೆ ಪರೀಕ್ಷೆ ನಡೆಯಲಿದ್ದು, ಬೆಳಿಗ್ಗೆ 7.30ರಿಂದಲೇ ಕೇಂದ್ರಕ್ಕೆ ಬಂದು ಪರೀಕ್ಷಾ ಕೊಠಡಿಯಲ್ಲಿ ನಿಗದಿಪಡಿಸಿದ ಸ್ಥಳದಲ್ಲಿ ಕುಳಿತು ಕೊನೆಯ ಕ್ಷಣದ ಅಧ್ಯಯನ ನಡೆಸಬಹುದಾಗಿದೆ.

‘ನೋಂದಣಿ ಸಂಖ್ಯೆ, ಕೊಠಡಿ ಸಂಖ್ಯೆ ನೋಡಲು ಸೂಚನಾ ಫಲಕದ ಸಮೀಪ ಜಂಗುಳಿ ಮಾಡಬಾರದು. ಕಂಟೈನ್‌ಮೆಂಟ್ ಪ್ರದೇಶದಿಂದ ಬಂದವರು, ಜ್ವರದ ಲಕ್ಷಣ ಇರುವವರಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಎಲ್ಲರೂ ಕಡ್ಡಾಯವಾಗಿ ಮುಖಗವಸು ಧರಿಸಬೇಕು. ಪ‍ರೀಕ್ಷೆ ಬರೆಯುವಾಗ ಒಂದಿಷ್ಟು ಹೊತ್ತು ತೆಗೆಯಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ. ಕಂಟೈನ್‌ಮೆಂಟ್‌ ಪ್ರದೇಶದ ವಿದ್ಯಾರ್ಥಿಗಳಿಗೆ ಮತ್ತು ಅವರ ಕೊಠಡಿಯಲ್ಲಿ ಕಾರ್ಯನಿರ್ವಹಿಸುವವರಿಗೆ ಎನ್– 95 ಮುಖಗವಸು ನೀಡಲಾಗುವುದು’ ಎಂದು ಸಚಿವರು ಹೇಳಿದರು.

‘ಕೊರೊನಾ ಸೋಂಕಿನ ಕಾರಣ ದಿಂದಾಗಿ ರಾಜ್ಯದ ಇತಿಹಾಸದಲ್ಲೇ ಇದುವರೆಗೆ ಕಂಡಿರದಂತಹ ಸಿದ್ಧತೆಗಳನ್ನು ಈ ಬಾರಿ ಮಾಡಲಾಗಿದ್ದು, ಶಿಕ್ಷಕರ ಜತೆಗೆ ಆರೋಗ್ಯ, ಪೊಲೀಸ್ ಸಿಬ್ಬಂದಿ, ಸಾರಿಗೆ, ಕಂದಾಯ ಹಾಗೂ ಸ್ಕೌಟ್ಸ್ ಸ್ವಯಂಸೇವಕರು ಪರೀಕ್ಷೆ ನಡೆ ಸುವುದಕ್ಕೆ ಸಹಕಾರ ನೀಡಲಿದ್ದಾರೆ. ಹೆಚ್ಚುವರಿಯಾಗಿ 330 ಬ್ಲಾಕ್‌ ಪರೀಕ್ಷಾ ಕೇಂದ್ರಗಳನ್ನು ಸಿದ್ಧಪಡಿಸಲಾಗಿದೆ. ಸದ್ಯ ಕಂಟೈನ್‌ಮೆಂಟ್ ವಲಯದಲ್ಲಿ ಯಾವ ಪರೀಕ್ಷಾ ಕೇಂದ್ರವೂ ಇಲ್ಲ’ ಎಂದರು.

ಕ್ವಾರಂಟೈನ್‌ನಲ್ಲಿರುವರಿಗೆ ಅವಕಾಶ ಇಲ್ಲ

‘ಸದ್ಯ ರಾಜ್ಯದಲ್ಲಿ 9 ಮಂದಿ ಕ್ವಾರಂಟೈನ್‌ನಲ್ಲಿದ್ದು, 10 ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಅವರಿಗೆ ಈ ಬಾರಿ ಪರೀಕ್ಷೆಗೆ ಬರೆಯುವುದಕ್ಕೆ ಅವಕಾಶ ಇಲ್ಲ. ಆಗಸ್ಟ್‌ನಲ್ಲಿ ನಡೆಯುವ ಪೂರಕ ಪರೀಕ್ಷೆಯಲ್ಲಿ ಹೊಸ ಅಭ್ಯರ್ಥಿಗಳ ನೆಲೆಯಲ್ಲಿ ಅವರಿಗೆ ಪರೀಕ್ಷೆ ಬರೆಯುವುದಕ್ಕೆ ಅವಕಾಶ ನೀಡಲಾಗುತ್ತದೆ’ ಎಂದು ಸಚಿವರು ಸ್ಪಷ್ಟಪಡಿಸಿದರು.

‍ತಪಾಸಣಾ ಕೌಂಟರ್‌

200 ವಿದ್ಯಾರ್ಥಿ ಗಳಿಗೆ ಒಂದರಂತೆ ಒಟ್ಟು 5,755 ಆರೋಗ್ಯ ತಪಾಸಣಾ ಕೌಂಟರ್‌ಗಳನ್ನು ಸ್ಥಾಪಿಸಲಾಗಿದೆ. ಪ್ರತಿ ವಿದ್ಯಾರ್ಥಿಗೆ ತಲಾ 2ರಂತೆ 18 ಲಕ್ಷ ಮುಖಗವಸು ವಿತರಿಸಲಾಗಿದೆ. 200 ವಿದ್ಯಾರ್ಥಿ ಗಳಿಗೆ ಒಂದರಂತೆ ಥರ್ಮಲ್ ಸ್ಕ್ಯಾನರ್‌ ಒದಗಿಸಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಇಬ್ಬರಂತೆ ಕಿರಿಯ ಆರೋಗ್ಯ ಸಹಾಯಕರು ಅಥವಾ ಆಶಾ ಕಾರ್ಯಕರ್ತರ ಸೇವೆಯನ್ನು ಆರೋಗ್ಯ ಇಲಾಖೆಯಿಂದ ಒದಗಿಸಲಾಗಿದೆ. ಒಂದು ಕೊಠಡಿಯಲ್ಲಿ 18ರಿಂದ 20 ಮಂದಿಗೆ ಆಸನದ ವ್ಯವಸ್ಥೆ ಮಾ ಡಲಾಗಿದೆ. ಪ್ರತಿ ಡೆಸ್ಕ್‌ ನಡುವೆ 1 ಮೀಟರ್ ಅಂತರ ಕಾಯ್ದುಕೊಳ್ಳಲಾಗಿದೆ’ ಎಂದರು.

‘ಪರೀಕ್ಷಾ ಕಾರ್ಯದಲ್ಲಿ 5,758 ಪೊಲೀಸ್‌ ಸಿಬ್ಬಂದಿ ಹಾಗೂ ಉತ್ತರ ಪತ್ರಿಕೆಗಳ ಸಂರಕ್ಷಣೆ ಕಾರ್ಯದಲ್ಲಿ 1,446 ಮಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಪರೀಕ್ಷಾ ಅಕ್ರಮ ತಡೆಯಲು ಸಹ ಕ್ರಮ ಕೈಗೊಳ್ಳಲಾಗಿದೆ, ಕೇಂದ್ರಗಳ ಸಮೀಪ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಸಿದ್ದರಾಮಯ್ಯ ಟ್ವೀಟ್‌

‘ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಆರೋಗ್ಯದ ಬಗ್ಗೆ ಆತಂಕಕ್ಕೆ ಒಳಗಾಗದೆ ನಿಶ್ಚಿಂತೆಯಿಂದ ಪರೀಕ್ಷೆ ಬರೆಯುವಂತಹ ವಾತಾವರಣ ನಿರ್ಮಿಸುವುದು ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರ ಜವಾಬ್ದಾರಿ. ಪೋಷಕರು ಸರ್ಕಾರದ ಮೇಲೆ ಇಟ್ಟಿರುವ ನಂಬಿ ಕೆಗೆ ಭಂಗ ತರಬೇಡಿ’ ಎಂದು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

ಈ ಬಗ್ಗೆ ಬುಧವಾರ ಟ್ವೀಟ್‌ ಮಾಡಿರುವ ಅವರು, ‘ಒತ್ತಡಕ್ಕೆ ಒಳಗಾಗಬೇಡಿ, ಇದು ಶಾಲೆಯ ಪರೀಕ್ಷೆ. ಜೀವನದ ಪರೀಕ್ಷೆ ಅಲ್ಲ. ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ, ಯಶಸ್ಸು ನಿಮ್ಮದಾಗಲಿ’ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.

***

ಅಂಕಿ ಅಂಶ

8,48,203

ಪರೀಕ್ಷೆಗೆ ಹಾಜರಾಗುವ ಒಟ್ಟು ವಿದ್ಯಾರ್ಥಿಗಳು

7,64,226

ಹೊಸಬರು

54,002
ಪುನರಾವರ್ತಿತ

20,893
ಖಾಸಗಿ

8,605

ಖಾಸಗಿ ಪುನರಾರ್ತಿತ

453

ಇತರ

3,209‌

ಪರೀಕ್ಷಾ ಕೇಂದ್ರಗಳು

4,48,560

ಬಾಲಕರು

3,99,643

ಬಾಲಕಿಯರು

‌3,31,652

ಸರ್ಕಾರಿ ಶಾಲಾ ವಿದ್ಯಾರ್ಥಿಗಳು

2,29,381

ಅನುದಾನಿತ ಶಾಲಾ ವಿದ್ಯಾರ್ಥಿಗಳು

2,87,170

ಅನುದಾನರಹಿತ ಶಾಲಾ ವಿದ್ಯಾರ್ಥಿಗಳು

‌378337

ನಗರ ಪ್ರದೇಶದ ವಿದ್ಯಾರ್ಥಿಗಳು

4,69,866

ಗ್ರಾಮಾಂತರ ವಿದ್ಯಾರ್ಥಿಗಳು

***

ವೈರಲ್ ಆಗಿರುವುದು ನಕಲಿ ಪ್ರಶ್ನೆ ಪತ್ರಿಕೆ

‘ಸಾಮಾಜಿಕ ಜಾಲತಾಣದಲ್ಲಿ ಇಂಗ್ಲಿಷ್ ಪ್ರಶ್ನೆ ಪತ್ರಿಕೆಗಳನ್ನು ಕಿಡಿಗೇಡಿಗಳು ಹರಿಬಿಟ್ಟಿದ್ದು, ಇದು ನಕಲಿ ಪ್ರಶ್ನೆ ಪತ್ರಿಕೆ. ಫೆಬ್ರುವರಿಯಲ್ಲಿ ನಡೆದ ಪೂರಕ ಪರೀಕ್ಷೆಯ ಪ್ರಶ್ನೆಪತ್ರಿಕೆ ಅದಾಗಿತ್ತು. ಇಂತಹ ಕಿಡಿಗೇಡಿಗಳ ವಿರುದ್ಧ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಕಠಿಣ ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳು ಹಾಗೂ ಪೋಷಕರು ಇಂತಹ ಸುದ್ದಿಗಳಿಗೆ ಕಿವಿ ಕೊಡಬಾರದು’ ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT