ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಂಚಾಯಿತಿ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ಬೇಕು’

ಗ್ರಾಮ ಪಂಚಾಯಿತಿ ಸಬಲೀಕರಣ: ಮೂರು ನಿರ್ಣಯ
Last Updated 24 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಉಡುಪಿ: ಪಂಚಾಯತ್ ರಾಜ್ ವ್ಯವಸ್ಥೆ ಬಲಪಡಿಸಲು ಹಕ್ಕೊತ್ತಾಯ ಮಂಡಿಸುವ ಮೂಲಕ ಇಲ್ಲಿ ಎರಡು ದಿನ ನಡೆದ  ಸಂವಿಧಾನದ 73ನೇ ತಿದ್ದುಪಡಿ 25ನೇ ವರ್ಷಾಚರಣೆ ಕಾರ್ಯಕ್ರಮ ‘ಪಂಚಾಯತ್ ರಾಜ್ ಚಿಂತನ– ಮಂಥನ’ ಕಾರ್ಯಕ್ರಮ ತಾರ್ಕಿಕ ಮುಕ್ತಾಯ ಕಂಡಿತು.

ಗ್ರಾಮ ಸರ್ಕಾರ ಚಿಂತನೆ ವಾಸ್ತವದಲ್ಲಿ ಕಾರ್ಯರೂಪಕ್ಕೆ ಬರಬೇಕಾದರೆ ಈ ಕ್ಷಣದಲ್ಲಿ ಆಗಬೇಕಾದ ಬದಲಾವಣೆಗಳ ಬಗ್ಗೆ ಪಂಚಾಯತ್‌ ರಾಜ್ ವಿಷಯ ಪರಿಣಿತರು, ನಿವೃತ್ತ ಅಧಿಕಾರಿಗಳು ಮಂಡಿಸಿದ ವಿಷಯಗಳ ಸಾರ ಹಾಗೂ ನಿರ್ಣಯಗಳನ್ನು ಸರ್ಕಾರದ ಮುಂದಿಡಲು ತೀರ್ಮಾನಿಸಲಾಯಿತು.

ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿರುವ ವಿಧಾನ ಪರಿಷತ್ ಸದಸ್ಯರ ಒಕ್ಕೂಟದ ಅಧ್ಯಕ್ಷ ಕೆ.ಸಿ. ಕೊಂಡಯ್ಯ ಮಾತನಾಡಿ, ‘ಗ್ರಾಮ ಪಂಚಾಯಿತಿ ಸಬಲೀಕರಣಕ್ಕೆ ಪಕ್ಷಾತೀತವಾಗಿ ಹೋರಾಟ ಮಾಡಿ ಅವರ ಹಕ್ಕನ್ನು ಕೊಡಿಸುವ ಕೆಲಸ ನಡೆದಿದೆ. ಸಚಿವ ರಮೇಶ್ ಕುಮಾರ್ ಸಮಿತಿಯ ಶಿಫಾರಸಿನಂತೆ ಕಾಯ್ದೆಗೆ 82 ತಿದ್ದುಪಡಿಗಳನ್ನು ತಂದರೂ ಈ ವರೆಗೂ ಅವುಗಳಿಗೆ ನಿಯಮ ರೂಪಿಸುವ ಕೆಲಸ ಆಗಿಲ್ಲ. ಈ ಕೂಡಲೇ ಆ ಕೆಲಸ ಮಾಡಿ ತಿದ್ದುಪಡಿಯ ಪ್ರಯೋಜನ ಲಭಿಸುವಂತೆ ಮಾಡಬೇಕು. ಗ್ರಾಮ ಪಂಚಾಯಿತಿಗಳು ಸ್ಥಳೀಯ ಸರ್ಕಾರವಾಗಿ ಪರಿವರ್ತನೆಯಾಗಬೇಕು’ ಎಂದು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಕಾರ್ಯನಿರ್ವಾಹಕ ಅಧಿಕಾರವೇ ಇಲ್ಲದಂತಾಗಿದ್ದು, ನಿರ್ಣಯಗಳಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ (ಪಿಡಿಒ) ಸಹಿ ಮಾಡುವುದು ಅನಿವಾರ್ಯವಾಗಿದೆ. ಅಲ್ಲದೆ, ಪಿಡಿಒ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ವರದಿ ಮಾಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಬದಲಾವಣೆ ನಿರೀಕ್ಷಿಸಲು ಸಾಧ್ಯವಾಗದು. ಅಧಿಕಾರವನ್ನು ಗ್ರಾ.ಪಂ. ಅಧ್ಯಕ್ಷರಿಗೆ ನೀಡಬೇಕು ಎಂದರು.

ಶಾಸಕ ಕೆ.ಗೋಪಾಲ ಪೂಜಾರಿ, ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಪ್ರತಾಪಚಂದ್ರ ಶೆಟ್ಟಿ ಇದ್ದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಉಡುಪಿ, ಕಾರ್ಕಳ, ಕುಂದಾಪುರ ತಾಲ್ಲೂಕು ಪಂಚಾಯಿತಿ, ಕುಂದಾಪುರ ತಾಲ್ಲೂಕು ಪಂಚಾಯತ್ ರಾಜ್ ಒಕ್ಕೂಟ ಹಾಗೂ ಗ್ರಾಮ ಪಂಚಾಯತ್‌ ಹಕ್ಕೊತ್ತಾಯ ಆಂದೋಲನ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

***

ನಿರ್ಣಯಗಳು

* ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ

* ತಿದ್ದುಪಡಿ ಕಾಯ್ದೆಯಲ್ಲಿ ಕೈಬಿಟ್ಟು ಹೋಗಿರುವ ರಮೇಶ್ ಕುಮಾರ್ ಸಮಿತಿ ಶಿಫಾರಸುಗಳ ಪುನರ್‌ ಸೇರ್ಪಡೆ

* 73ನೇ ಸಂವಿಧಾನ ತಿದ್ದುಪಡಿ ಕಾಯ್ದೆಯನ್ನು ಇನ್ನಷ್ಟು ಬಲಗೊಳಿಸುವ ಬಗ್ಗೆ ಗಂಭೀರ ಚರ್ಚೆಯಾಗಬೇಕು

***

ಗ್ರಾಮಸಭೆಗಳಿಗೂ ಎಲ್ಲ ಇಲಾಖೆಗಳ ಸ್ಥಳೀಯ ಮಟ್ಟದ ಅಧಿಕಾರಿಗಳು ಬರಬೇಕು. ಆಗ ಮಾತ್ರ ಸಮಸ್ಯೆಗಳ ಬಗ್ಗೆ ಪರಿಣಾಮಕಾರಿ ಚರ್ಚೆ ಸಾಧ್ಯ
– ಕೆ.ಸಿ. ಕೊಂಡಯ್ಯ, ವಿಧಾನ ಪರಿಷತ್ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT