ಭಾನುವಾರ, ಜುಲೈ 3, 2022
27 °C
ನವೋದ್ಯಮ ಸಮಾವೇಶ: ಆಸಕ್ತರಿಗೆ ಮಾಹಿತಿ, ಮಾರ್ಗದರ್ಶನ

ದೇಶದಲ್ಲಿ ಉದ್ಯೋಗ ಕಡಿತಗೊಳ್ಳುತ್ತಿವೆ: ಬಿಎಸ್‌ವೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ‘ಜಾಗತೀಕರಣ, ಬೃಹತ್‌ ಉದ್ಯಮಗಳಿಂದ ದೇಶದಲ್ಲಿ ಉದ್ಯೋಗ ಅವಕಾಶಗಳು ಕಡಿಮೆ(ಶ್ರಿಂಕ್‌) ಆಗುತ್ತಿವೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಭಾರತ್‌ ನೀತಿ ಸಂಸ್ಥೆ ಮತ್ತು ಜೈನ್‌ ವಿಶ್ವವಿದ್ಯಾಲಯವು ನಗರದಲ್ಲಿ ಗುರುವಾರ ಆಯೋಜಿಸಿದ್ದ ‘ನವೋದ್ಯಮ ಸಮಾವೇಶ’ದಲ್ಲಿ ಇಂಗ್ಲಿಷ್‌ನಲ್ಲಿ ಭಾಷಣ ಓದುವಾಗ ಈ ಸಾಲನ್ನು ಉಲ್ಲೇಖಿಸಿದರು. 

‘ಕೇಂದ್ರ ಸರ್ಕಾರ ನವೋದ್ಯಮಗಳಿಗೆ ಅನುವು ಮಾಡಿಕೊಡುವ ಮೂಲಕ ಉದ್ಯೋಗ ಸೃಷ್ಟಿ ಮಾಡುತ್ತಿದೆ. ಜತೆಗೆ ರಾಜ್ಯದಲ್ಲಿನ ಐಐಎಸ್ಸಿ, ಐಐಟಿ, ಎಂಜಿನಿಯರಿಂಗ್‌ ಕಾಲೇಜುಗಳು ನವೋದ್ಯಮಕ್ಕೆ ಬೆಂಬಲ ನೀಡುತ್ತಿವೆ. ಇದರಿಂದ ದೇಶದ ಆರ್ಥಿಕತೆ ಸಬಲವಾಗಲಿದೆ’ ಎಂದು ಆಶಯ ವ್ಯಕ್ತಪಡಿಸಿದರು. 

ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಶಿವ ಪ್ರತಾಪ್‌ ಶುಕ್ಲ ಮಾತನಾಡುತ್ತ, ‘ನರೇಂದ್ರ ಮೋದಿ ನೇತೃತ್ವದ ಸರ್ಕಾರ 2014ರಲ್ಲಿ ಅಧಿಕಾರಕ್ಕೆ ಬಂದಾಗ ಬ್ಯಾಂಕ್‌ಗಳ ವಸೂಲಾಗದ ಸಾಲ(ಎನ್‌ಪಿಎ) ಎರಡುವರೆ ಲಕ್ಷ ಕೋಟಿ ಇತ್ತು. ಅದೀಗ ಒಂಬತ್ತು ಲಕ್ಷಕ್ಕೆ ಏರಿಕೆಯಾಗಿದೆ. ಎನ್‌ಪಿಎ ಕಡಿತಗೊಳಿಸಲು ನಾವು ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ’ ಎಂದರು.

‘ನವೋದ್ಯಮಗಳನ್ನು ಸ್ಥಾಪಿಸಲು ಕರ್ನಾಟಕದಿಂದ 12,111 ತಂಡಗಳು ಮುಂದೆ ಬಂದಿವೆ. ಅವರಲ್ಲಿನ ಅರ್ಹರಿಗೆ ಬೇಕಾದ ಸಹಕಾರವನ್ನು ಕೇಂದ್ರ ನೀಡಲಿದೆ. ನವೋದ್ಯಮಗಳಿಗೆಂದೇ ನಾವು ₹10,000 ಕೋಟಿ ಮೀಸಲಿಟ್ಟಿದ್ದೇವೆ’ ಎಂದು ಮಾಹಿತಿ ನೀಡಿದರು. 

‘ಈ ಹಿಂದಿನ ಯುಪಿಎ ಸರ್ಕಾರ ಹೊಸ ಉದ್ಯಮಗಳ ಬಗ್ಗೆ ತಲೆನೇ ಕೆಡಿಸಿಕೊಂಡಿರಲಿಲ್ಲ. ನಾವು ಇವುಗಳಿಗೆ ಬೆಂಬಲ ನೀಡುವ ಮೂಲಕ ಪರೋಕ್ಷ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುತ್ತಿದ್ದೇವೆ’ ಎಂದು ತಿಳಿಸಿದರು. 

ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುರಳಿಧರ್‌, ‘ತಂತ್ರಜ್ಞಾನ ಮತ್ತು ಉದ್ಯಮಿಗಳನ್ನು ಹೊರಗಿಟ್ಟು ಅಭಿವೃದ್ಧಿ ಮತ್ತು ಉದ್ಯೋಗವನ್ನು ಊಹಿಸಲು ಆಗದು. ಯುವ ಜನರು ಮಾತ್ರವಲ್ಲದೆ, ಡೈನಾಮಿಕ್‌ ಆಗಿರುವ ಹಿರಿಯರು ನವೋದ್ಯಮ ಆರಂಭಿಸಲು ಮುಂದೆ ಬಂದರೆ, ಅವರಿಗೂ ನಾವು ಬೆಂಬಲ ನೀಡುತ್ತೇವೆ’ ಎಂದು ಭರವಸೆ ನೀಡಿದರು.

ಉದ್ಯಮ ಸ್ಥಾಪನೆಯ ಇಂಗಿತ ಹೊಂದಿರುವ 400 ಹೆಚ್ಚು ಯುವ ಜನರು ಸಮಾವೇಶದಲ್ಲಿ ಭಾಗವಹಿಸಿದ್ದರು. ಬಂಡವಾಳ ಕ್ರೋಢಿಕರಣ, ಉದ್ಯಮ ಸ್ಥಾಪನೆ, ತಂತ್ರಜ್ಞಾನ ಬಳಕೆ, ಮಾರುಕಟ್ಟೆ ಸ್ಥಿತಿಗತಿ, ಸರ್ಕಾರದ ನೆರವಿನ ಕುರಿತು ತಜ್ಞರಿಂದ ಮಾರ್ಗದರ್ಶನ ಪಡೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು