ಡಿ.ಕೆ.ಶಿವಕುಮಾರ್, ಕುಮಾರಸ್ವಾಮಿ ಮಾಸ್ಟರ್‌ಪಿನ್‌ಗಳಿದ್ದಂತೆ: ರವಿಕುಮಾರ್

7

ಡಿ.ಕೆ.ಶಿವಕುಮಾರ್, ಕುಮಾರಸ್ವಾಮಿ ಮಾಸ್ಟರ್‌ಪಿನ್‌ಗಳಿದ್ದಂತೆ: ರವಿಕುಮಾರ್

Published:
Updated:

ಬೆಂಗಳೂರು: ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ, ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಈ ಮೂವರು ಮಾಸ್ಟರ್‌ಪಿನ್‌ಗಳಿದ್ದಂತೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ತಿರುಗೇಟು ನೀಡಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಸರ್ಕಾರ ಬಿದ್ದು ಹೋದರೆ ನಮ್ಮ 104 ಜನ ಶಾಸಕರು ಬಾಳೆಹಣ್ಣು ತಿಂದುಕೊಂಡಿರಬೇಕಾ? ಮುಖ್ಯಮಂತ್ರಿ ಕುಮಾರಸ್ವಾಮಿ ತೀವ್ರ ಹತಾಶರಾಗಿ ಮಾತನಾಡಿದ್ದಾರೆ. ಸರ್ಕಾರ ಬೀಳಿಸಲು ಬಿಜೆಪಿ ಪ್ರಯತ್ನ ನಡೆಸುತ್ತಿದೆ ಎಂದಿದ್ದಾರೆ. ಲಾಟರಿ ದಂಧೆಯವರಿಂದ ಅಧಿಕಾರದಲ್ಲಿರುವವರು ಹಣ ಸಂಗ್ರಹಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ರಿಯಲ್ ಎಸ್ಟೇಟ್ ದಂಧೆ, ಓಸಿ, ಲಾಟರಿ ದಂಧೆ ನಡೆಯುತ್ತಿದೆ ಎಂದು ಕೇವಲ ಆರೋಪ ಏಕೆ ಮಾಡುತ್ತಿದ್ದೀರಿ. ಸರ್ಕಾರ ನಿಮ್ಮ ಹಿಡಿತದಲ್ಲಿದೆ. ದಂಧೆ ನಡೆಯುತ್ತಿದ್ದರೆ ಕ್ರಮ ತೆಗೆದಕೊಳ್ಳಿ’ ಎಂದರು.

‘ಐಟಿ ಇಲಾಖೆಯನ್ನು ಬಿಜೆಪಿ ಮೋರ್ಚಾ ಕಚೇರಿ ಎನ್ನುತ್ತಿದ್ದವರು ಈಗ ಅಲ್ಲಿಯೇ ದೂರು ಕೊಡುತ್ತಿದ್ದಾರೆ. ಇದೆಲ್ಲ ಹಾಸ್ಯಾಸ್ಪದ ವಿಷಯ. ಕಿಂಗ್‌ಪಿನ್ ಬಗ್ಗೆ ಕ್ರಮ ಜರುಗಿಸಿ. ಇಲ್ಲವೇ ರಾಜೀನಾಮೆ ಕೊಟ್ಟು ಮನೆಗೆ ಹೋಗಿ’ ಎಂದು ಕಿಡಿಕಾರಿದರು.

‘ಹೊಳೆ ನರಸೀಪುರದಿಂದ ರಾಜ್ಯದ ಅಧಿಕಾರ ‌‌ನಡೆಯುತ್ತಿದೆ. ನಿಮಗೆ ಅಧಿಕಾರ ನಡೆಸಲು ಸಾಧ್ಯವಾಗದೇ ಇದ್ದರೆ ಎಚ್‌.ಡಿ. ರೇವಣ್ಣಗೆ ಅಧಿಕಾರ ಬಿಟ್ಟುಕೊಡಿ’ ಎಂದು ರವಿಕುಮಾರ್ ತರಾಟೆಗೆ ತೆಗೆದುಕೊಂಡರು.

ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾರೆ, ಜನಸಾಮಾನ್ಯರಲ್ಲ. ಅಧಿಕಾರಿಗಳು ಅವರ ಮಾತಿಗೆ ಬೆಲೆ ಕೊಡುತ್ತಿಲ್ಲ. ಕ್ರಮ ತೆಗೆದುಕೊಳ್ಳಲು ಆಗದಿದ್ದರೆ ರಾಜೀನಾಮೆ ಕೊಡಿ. ಈ ರೀತಿಯ ಮಾತು ನಿಮಗೆ ಶೋಭೆಯಲ್ಲ. ನಿಮಗೆ ಆಗಿಲ್ಲ ಎಂದರೆ ಅಧಿಕಾರ ಬಿಡಿ. ಈ ರೀತಿ ಆರೋಪಗಳನ್ನು ಮಾಡುವುದು ಗೌರವಕ್ಕೆ ತಕ್ಕದಲ್ಲ. ಸರ್ಕಾರ ಅಸ್ಥಿರವಾಗಿದೆ. ನಿಮ್ಮ ಕೈಯ್ಯಲ್ಲಿ ಆಗಿಲ್ಲ ಅಂದರೆ ಬಿಡಿ. ನಿಮ್ಮ ಸಹೋದರ ರೇವಣ್ಣಗೆ ಅಧಿಕಾರ ಕೊಡಿ ಎಂದು ಸವಾಲು ಹಾಕಿದರು.

‘ಲಕ್ಷ್ಮೀ ಹೆಬ್ಬಾಳಕರ್‌, ಜಾರಕಿಹೊಳಿ ಗಲಾಟೆಗೆ ನಾವು ಕಾರಣವೇ? ನಿಮ್ಮ ಸರ್ಕಾರ ಬಿದ್ದರೆ ಅದಕ್ಕೆ ನೀವೇ ಕಾರಣ. ದೇವರ ಆಶೀರ್ವಾದ 104 ಶಾಸಕರ ಮೇಲಿದೆ’ ಎಂದು ಗುಡುಗಿದರು.

ಬಿಜೆಪಿಯನ್ನು ಕಟ್ಟಿದ ಮಹಾನ್ ನಾಯಕ ಬಿ.‌ಎಸ್‌.ವೈ ರಾಜ್ಯದಲ್ಲಿ ಹೋರಾಟ ಮಾಡಿ, ತ್ಯಾಗದ ಆಧಾರದ ಮೇಲೆ ಪಕ್ಷ ಕಟ್ಟಿದ್ದಾರೆ. ಜೆಡಿಎಸ್ ಸೂಟ್ ಕೇಸ್ ಪಾರ್ಟಿ ಅಂತ ಪ್ರಜ್ವಲ್ ರೇವಣ್ಣನೇ ಹೇಳಿದ್ದಾರೆ. ಇದರ ಬಗ್ಗೆ ಯಾವ ಐಟಿ ಡಿಪಾರ್ಟ್‌ಮೆಂಟ್‌ಗೆ ದೂರು ನೀಡುತ್ತೀರಾ? ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಖಾರವಾಗಿ ಪ್ರಶ್ನಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !