ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ನಿಂದ ನಾನು ಹೊರಬಂದಿಲ್ಲ: ದೇವೇಗೌಡರು ಉಚ್ಛಾಟನೆ ಮಾಡಿದರು –ಸಿದ್ದರಾಮಯ್ಯ 

Last Updated 11 ಮೇ 2019, 6:15 IST
ಅಕ್ಷರ ಗಾತ್ರ

ಕಲಬುರ್ಗಿ: ‘ಜೆಡಿಎಸ್‌ನಿಂದ ನಾನು ಹೊರಬಂದಿಲ್ಲ. ಅಹಿಂದ ಸಮಾವೇಶ ಮಾಡಿದ್ದಕ್ಕೆ ಎಚ್.ಡಿ.ದೇವೇಗೌಡ ಅವರು ಪಕ್ಷದಿಂದ ನನ್ನನ್ನು ಉಚ್ಛಾಟನೆ ಮಾಡಿದರು’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆರ್.ಅಶೋಕಗೆ ಈ ವಿಷಯ ಗೊತ್ತಿಲ್ಲ. ಅದಕ್ಕೆ ಸಿದ್ದರಾಮಯ್ಯ ಜೆಡಿಎಸ್ ಬಿಟ್ಟು ಕಾಂಗ್ರೆಸ್‌ಗೆ ಏಕೆ ಸೇರ್ಪಡೆಯಾಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್‌ನ 20 ಶಾಸಕರು ಅತೃಪ್ತಿ ಹೊಂದಿದ್ದು, ಯಾವಾಗ ಏನು ಬೇಕಾದರೂ ಆಗಬಹುದು ಎಂಬ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಯಡಿಯೂರಪ್ಪ ಒಂದು ವರ್ಷದಿಂದ ಹೇಳುತ್ತಲೇ ಇದ್ದಾನೆ. ಶಾಸಕರನ್ನು ಖರೀದಿಸಲು ಇವರ ಬಳಿ ದುಡ್ಡು ಎಲ್ಲಿಂದ ಬರುತ್ತದೆ. ನರೇಂದ್ರ ಮೋದಿ ಕೊಡ್ತಾನಾ, ಅಮಿತ್ ಶಾ ಕೊಡ್ತಾನಾ ಅಥವಾ ಯಡಿಯೂರಪ್ಪ ಕೊಡ್ತಾನಾ’ ಎಂದು ಪ್ರಶ್ನಿಸಿದರು.

ದುಡ್ಡು ಕೊಟ್ಟು ಶಾಸಕರನ್ನು ಖರೀದಿಸಿ, ಸರ್ಕಾರ ಬೀಳಿಸೋದು ವಿರೋಧ ಪಕ್ಷದ ಕೆಲಸವಾ. ಯಡಿಯೂರಪ್ಪಗೆ ಸರ್ಕಾರ ರಚನೆಗೆ ರಾಜ್ಯಪಾಲರು ಅವಕಾಶ ಮಾಡಿಕೊಟ್ಟಿದ್ದರು. ಆದರೆ, ಸಂಖ್ಯಾಬಲ ತೋರಿಸಲು ಯಡಿಯೂರಪ್ಪಗೆ ಆಗಲಿಲ್ಲ. ಆತ ಹತಾಶನಾಗಿ ಏನೇನೋ ಹೇಳುತ್ತಿದ್ದಾನೆ ಎಂದು ಹರಿಹಾಯ್ದರು.

‘ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ. ನರೇಂದ್ರ ಮೋದಿ ಪ್ರಧಾನಿ ಆಗುವುದಿಲ್ಲ. ರಾಹುಲ್ ಗಾಂಧಿಯೇ ಪ್ರಧಾನಿ ಆಗುತ್ತಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೆ.ಆರ್.ಪೇಟೆ ಶಾಸಕ ನಾರಾಯಣಗೌಡ ಅವರು ಮೈತ್ರಿಯಿಂದ ಪಕ್ಷದ ಅಭ್ಯರ್ಥಿಗೆ ಹಿನ್ನಡೆಯಾಗಿದೆ ಎಂದು ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ, ನಾವು ನಾರಾಯಣಗೌಡನ ಜತೆ ಮಾತನಾಡಿಕೊಂಡು ಮೈತ್ರಿ ಮಾಡಿಲ್ಲ. ಎಚ್.ಡಿ.ದೇವೇಗೌಡರ ಜತೆ ಮಾತನಾಡಿ ಮೈತ್ರಿ ಮಾಡಿಕೊಂಡಿದ್ದೇವೆ. ಹೀಗಾಗಿ ನಾರಾಯಣಗೌಡರ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT