ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಧಾನದ ಯತ್ನ –ಕೈಜಾರಿದ ಡಾ.ಸುಧಾಕರ್: ರಾಮಲಿಂಗಾ ರೆಡ್ಡಿ ಸೆಳೆಯಲು ಭಾರಿ ಪ್ರಯತ್ನ

ಕಾಂಗ್ರೆಸ್‌ ಪಾಳೆಯದಲ್ಲಿ ತೀವ್ರಗೊಂಡ ತಳಮಳ, ರೆಡ್ಡಿ ಸೆಳೆಯಲು ಭಾರಿ ಪ್ರಯತ್ನ
Last Updated 13 ಜುಲೈ 2019, 20:04 IST
ಅಕ್ಷರ ಗಾತ್ರ

ಬೆಂಗಳೂರು:ಅತೃಪ್ತ ಕಾಂಗ್ರೆಸ್‌ಶಾಸಕರನ್ನು ಎರಡು ದಿನದೊಳಗೆ ಹೇಗಾದರೂ ಮಾಡಿ ವಾಪಸ್‌ ಕರೆತರಬೇಕು ಎಂಬ ಸಂಕಲ್ಪದೊಂದಿಗೆ ಭಾರಿ ಕಾರ್ಯಾಚರಣೆಗೆ ನಾಯಕರು ಇಳಿದಿರುವಂತೆಯೇ ಶಾಸಕ ಡಾ.ಸುಧಾಕರ್‌ ಶನಿವಾರ ಸಂಜೆ ಮುಂಬೈಗೆ ವಿಶೇಷ ವಿಮಾನದಲ್ಲಿ ತೆರಳಿದ್ದಾರೆ.

ಸಚಿವ ಎಂ.ಟಿ.ಬಿ.ನಾಗರಾಜ್‌ ಅವರ ಮನವೊಲಿಸಲು ದಿನವಿಡೀ ಸಂಧಾನ ನಡೆದಿರುವಂತೆಯೇ, ನಗರದಲ್ಲೇ ಇದ್ದ ಇನ್ನೊಬ್ಬ ಶಾಸಕಮುನಿರತ್ನ ಮುಂಬೈಗೆ ತೆರಳಿಬಿಟ್ಟಿದ್ದರು.

ಸೋಮವಾರದವರೆಗೆ ರಾಜಕೀಯ ಮಾತನಾಡುವುದಿಲ್ಲ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದರೂ, ‘ಪಕ್ಷ ಬಿಡುತ್ತೇನೆ ಎಂದು ಎಲ್ಲೂ ಹೇಳಿಲ್ಲ ಎಂದರು. ಸೋಮವಾರ ಸ್ಪೀಕರ್‌ ಕಚೇರಿಗೆ ಹೋಗುತ್ತೇನೆ, ಅಧಿವೇಶನಕ್ಕೂ ಹೋಗುತ್ತೇನೆ’ ಎಂದೂ ಹೇಳಿದರು.

ಶಾಸಕಿ ಸೌಮ್ಯಾ ರೆಡ್ಡಿ ಅವರು ತಾವು ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿ ನಾಯಕರಿಗೆ ಒಂದಿಷ್ಟು ಸಮಾಧಾನ ತಂದಿದ್ದಾರೆ. 45 ವರ್ಷಗಳಿಂದ ಪಕ್ಷ ಕಟ್ಟಿದ ತಮ್ಮ ತಂದೆಯನ್ನು ಮೂಲೆಗುಂಪು ಮಾಡಲು ಕೆಲವು ನಾಯಕರು ಯತ್ನಿಸಿದ್ದಾರೆ ಎಂದು ಅವರು ಬಹಿರಂಗವಾಗಿಯೇ ಆರೋಪಿಸಿದ್ದಾರೆ.

ಅತೃಪ್ತ ಶಾಸಕ ಎಂ.ಟಿ.ಬಿ. ನಾಗರಾಜ್ ಅವರನ್ನು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಶನಿವಾರ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಸಚಿವ ಜಮೀರ್‌ ಅಹಮದ್‌ ಇದ್ದರು.
ಅತೃಪ್ತ ಶಾಸಕ ಎಂ.ಟಿ.ಬಿ. ನಾಗರಾಜ್ ಅವರನ್ನು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಶನಿವಾರ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಸಚಿವ ಜಮೀರ್‌ ಅಹಮದ್‌ ಇದ್ದರು.

ಕಾಂಗ್ರೆಸ್‌ನ ‘ಟ್ರಬಲ್‌ ಶೂಟರ್’ ಸಚಿವ ಡಿ.ಕೆ.ಶಿವಕುಮಾರ್ ಶನಿವಾರ ಬೆಳಿಗ್ಗೆ 5 ಗಂಟೆಗೇ ಗರುಡಾಚಾರ್‌ ಪಾಳ್ಯ ಸಮೀಪದ ಎಂ.ಟಿ.ಬಿ.ನಾಗರಾಜ್‌ ಮನೆಗೆ ತೆರಳಿದ್ದರು. ಜತೆಗೆ ಕುಣಿಗಲ್‌ ಶಾಸಕ ಡಾ.ರಂಗನಾಥ್‌, ವಿಧಾನ ಪರಿಷತ್ ಸದಸ್ಯ ಎಸ್‌.ರವಿ ಇದ್ದರು. ಬಳಿಕ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಸಚಿವ ಕೃಷ್ಣ ಬೈರೇಗೌಡ, ರಿಜ್ವಾನ್ ಅರ್ಷದ್‌ ಅವರು ಸಹ ಮನೆಗೆ ತೆರಳಿ ನಾಗರಾಜ್‌ ಅವರ ಮನವೊಲಿಕೆಗೆ ಪ್ರಯತ್ನ ಆರಂಭಿಸಿದರು.

ಬೆಳಿಗ್ಗೆ ಸುಮಾರು 11 ಗಂಟೆಯವರೆಗೂ ಮನವೊಲಿಸುವ ಕೆಲಸ ನಡೆಯಿತು. ಬಳಿಕ ಅವರನ್ನು ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ನಿವಾಸಕ್ಕೆ ಕರೆತರಲಾಯಿತು. ಅಲ್ಲೂ ನಾಲ್ಕು ಗಂಟೆ ಕಾಲ ನಿರಂತರ ಮನವೊಲಿಕೆ ಕಾರ್ಯ ನಡೆಯಿತು.

‘ನಾಗರಾಜ್‌ ಅವರು ತಮ್ಮ ಬೇಸರ ತೋಡಿಕೊಂಡಿದ್ದಾರೆ. ಇನ್ನು ಮುಂದೆ ಇಂತಹ ತಪ್ಪು ಆಗುವುದಿಲ್ಲ ಎಂದು ಅವರಿಗೆ ಭರವಸೆ ನೀಡಿದ್ದೇವೆ’ ಎಂದು ಡಾ.ಜಿ.ಪರಮೇಶ್ವರ್‌ ಹೇಳಿದರು.

‘ನಾಗರಾಜ್‌ ಮತ್ತು ನಾನು ಪಕ್ಷಕ್ಕಾಗಿ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಒಟ್ಟಿಗೆ ಶ್ರಮಿಸಿದವರು. ಅವರು ಮನಸ್ಸು ಬದಲಿಸುವ ವಿಶ್ವಾಸ ಇದೆ’ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

‘ನಾನು ಈಗಲೂ ಕಾಂಗ್ರೆಸ್‌ನಲ್ಲೇ ಇದ್ದೇನೆ. ಸಂಧಾನ ಸಭೆ ಚೆನ್ನಾಗಿ ನಡೆದಿದೆ. ಪ್ರಯತ್ನ ಸಾಗಿದೆ’ ಎಂದಷ್ಟೇ ಎಂ.ಟಿ.ಬಿ.ನಾಗರಾಜ್‌ ಬಳಿಕ ಹೇಳಿದರು.

ಹೋಟೆಲ್‌ಗೆ ಬರಲು ಮನಸ್ಸಿಲ್ಲ:ಯಶವಂತಪುರದ ತಾಜ್‌ವಿವಾಂತ ಹೋಟೆಲ್‌ನಲ್ಲಿ ಕಾಂಗ್ರೆಸ್‌ ಶಾಸಕರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದರೂ, ಅಲ್ಲಿಗೆ ಬಂದಿರುವ ಶಾಸಕರ ಸಂಖ್ಯೆ ಸುಮಾರು 40 ಮಾತ್ರ.

‘ನಾವು ಪಕ್ಷಕ್ಕೆ ನಿಷ್ಠರಾಗಿರುತ್ತೇವೆ. ನಮ್ಮ ಪಾಡಿಗೆ ನಮ್ಮನ್ನು ಇರಲು ಬಿಡಿ. ಹೋಟೆಲ್‍ನಲ್ಲಿ ಬಂಧಿಸಿಡುವ ಅಗತ್ಯವಿಲ್ಲ. ನೀವು ಯಾವಾಗ ಸಭೆ ಕರೆದರೂ ನಾವು ಬರಲು ಸಿದ್ಧ’ ಎಂದು ಹೋಟೆಲ್‌ ಬಾರದೆ ಉಳಿದ ಶಾಸಕರು ಪಕ್ಷದ ಪ್ರಮುಖರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ, ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಲ್ಲಿಗೆ ತೆರಳಿ ಸಮಾಲೋಚನೆ ನಡೆಸಿದರು.

ಪ್ರತ್ಯೇಕ ಆಸನಕ್ಕೆ ಪಕ್ಷೇತರರ ಮನವಿ:‘ಮೈತ್ರಿ’ ಸರ್ಕಾರದಿಂದ ಬೆಂಬಲ ವಾಪಸ್‌ ಪಡೆದಿರುವ ಪಕ್ಷೇತರ ಶಾಸಕರಾದ ಆರ್‌.ಶಂಕರ್‌ ಮತ್ತು ಎಚ್‌.ನಾಗೇಶ್‌ ವಿಧಾನಸಭೆಯಲ್ಲಿ ಪ್ರತ್ಯೇಕ ಆಸನ ವ್ಯವಸ್ಥೆ ಮಾಡುವಂತೆ ಮನವಿ ಪತ್ರವನ್ನು ಸಭಾಧ್ಯಕ್ಷರಿಗೆ ಸಲ್ಲಿಸಿದ್ದಾರೆ.

ಇದೇ 8 ರಂದು ಶಂಕರ್‌ ಮತ್ತು ನಾಗೇಶ್‌ ಅವರು ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್‌ ಪಡೆಯುತ್ತಿರುವುದಾಗಿ ಪತ್ರ ನೀಡಿದ್ದರು. ಶುಕ್ರವಾರ ಪಕ್ಷೇತರರು ಪ್ರತ್ಯೇಕವಾಗಿ ಪತ್ರ ಬರೆದು ತಮ್ಮ ನಿರ್ಧಾರ ತಿಳಿಸಿದ್ದಾರೆ ಹಾಗೂ ತಮಗೆ ವಿರೋಧ ಪಕ್ಷದ ಕಡೆಯಲ್ಲಿ ಆಸನ ವ್ಯವಸ್ಥೆ ಮಾಡಬೇಕು ಎಂದು ಕೋರಿದ್ದಾರೆ.

ರಾಜೀನಾಮೆ ನೀಡಲ್ಲ: ಸೌಮ್ಯಾ ರೆಡ್ಡಿ
‘ನಾನು ಇದುವರೆಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ನಾನು ಸಿಎಲ್‌ಪಿ ಸಭೆಗೂ ಹೋಗಿದ್ದೇನೆ.ನಾನು ಜನರಿಗಾಗಿ ಕೆಲಸ ಮಾಡುತ್ತಿದ್ದೇನೆ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿಲ್ಲ ಎಂದು ಯಾರಾದರೂ ಹೇಳಿದರೆ ನಾನು ರಾಜೀನಾಮೆ ನೀಡುತ್ತೇನೆ’ ಎಂದು ಶಾಸಕಿ ಹಾಗೂ ಹಿರಿಯ ಕಾಂಗ್ರೆಸ್‌ ನಾಯಕ ರಾಮಲಿಂಗಾ ರೆಡ್ಡಿ ಅವರ ಪುತ್ರಿ ಸೌಮ್ಯಾ ರೆಡ್ಡಿ ಹೇಳಿದರು.

‘ನನ್ನ ತಂದೆ ಪಕ್ಷಕ್ಕಾಗಿ 45 ವರ್ಷಗಳಿಂದ ದುಡಿದಿದ್ದಾರೆ. ಆದರೆ ಕೆಲವು ನಾಯಕರು ಅವರನ್ನು ಮೂಲೆಗುಂಪು ಮಾಡಲು ಯತ್ನಿಸಿದರು. ಇದರಿಂದ ಅವರಿಗೆ ಬಹಳ ಬೇಸರವಾಗಿದೆ. ಇದನ್ನು ಅವರು ಒಂದು ವರ್ಷದಿಂದಲೂ ಹೇಳುತ್ತಲೇ ಬಂದಿದ್ದಾರೆ. ಇಷ್ಟು ದೀರ್ಘ ಅವಧಿ ಪಕ್ಷಕ್ಕಾಗಿ ದುಡಿದವರು ಯಾರಿದ್ದಾರೆ?’ ಎಂದು ಹೇಳಿ ಕೆಲವುಪ್ರಶ್ನೆಗಳನ್ನು ಹಾಗೆಯೇ ಉಳಿಸಿಕೊಂಡರು.

’ನಾನು ಈಗ ಪಕ್ಷದ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ. ಈಚೆಗೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ ರಾಜ್ಯದಲ್ಲಿ ಪಕ್ಷದ ಸ್ಥಿತಿಗತಿ ತಿಳಿಸಿದ್ದೇನೆ’ ಎಂದರು.

ಮಾಧ್ಯಮದವರ ಬಗ್ಗೆ ಕಿಡಿ:‘ಮಾಧ್ಯಮದವರಿಂದಲೇ ಅರ್ಧಕ್ಕರ್ಧ ಸಮಸ್ಯೆ ಉಂಟಾಗಿರುವುದು.ನೀವು ಮಾಧ್ಯಮದವರು ತಾಯಿ ಮೇಲೆ ಆಣೆ ಮಾಡಿ ಹೇಳಿ, ದುಡ್ಡು ತೆಗೆದುಕೊಳ್ಳುವುದಿಲ್ಲ ಅಂತ. ನೀವು ರಾಜಕಾರಣಿಗಳ ಬಗ್ಗೆ ಸಂದೇಶ ಕೇಳುತ್ತಿದ್ದೀರಲ್ಲ, ನಾನು ಮಾಧ್ಯಮದವರ ಬಗ್ಗೆ ಕೇಳುತ್ತಿದ್ದೇನೆ’ ಎಂದು ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT