ಮನವೊಲಿಕೆ ಕಸರತ್ತು | ದಿನವಿಡೀ ಸಂಧಾನ, ವಾಪಸ್‌ ಬರಲು ಒಪ್ಪಿದ ನಾಗರಾಜ್‌

ಗುರುವಾರ , ಜೂಲೈ 18, 2019
28 °C

ಮನವೊಲಿಕೆ ಕಸರತ್ತು | ದಿನವಿಡೀ ಸಂಧಾನ, ವಾಪಸ್‌ ಬರಲು ಒಪ್ಪಿದ ನಾಗರಾಜ್‌

Published:
Updated:

ಬೆಂಗಳೂರು: ‘ಮೈತ್ರಿ’ ಸರ್ಕಾರವನ್ನು ಶತಾಯಗತಾಯ ಉಳಿಸಿಕೊಳ್ಳಬೇಕೆಂಬ ದೃಢ ಸಂಕಲ್ಪದಿಂದ ಶನಿವಾರ ಮುಂಜಾನೆಯೇ ಕಾರ್ಯಾಚರಣೆಗೆ ಇಳಿದ ‘ಕೈ’ ನಾಯಕರು, ಶಾಸಕ ಎಂ.ಟಿ.ಬಿ.ನಾಗರಾಜ್‌ ಅವರ ಮನವೊಲಿಸಲು ಬರೋಬ್ಬರಿ 11 ತಾಸುಗಳಷ್ಟು ಕಾಲ ಪ್ರಯತ್ನ ನಡೆಸಿ, ಅದರಲ್ಲಿ ಯಶಸ್ವಿಯಾದರು.

ರಾತ್ರಿ 10 ಗಂಟೆ ವೇಳೆಗೆ ನಾಗರಾಜ್‌ ಮಾತನಾಡಿ, ತಾವು ಕಾಂಗ್ರೆಸ್‌ನಲ್ಲೇ ಉಳಿಯುವುದಾಗಿ ಪ್ರಕಟಿಸಿದರು. ಸುಧಾಕರ್‌ ಸೇರಿ ಉಳಿದ ಶಾಸಕರನ್ನು ಕರೆತರಲು ಪ್ರಯತ್ನಿಸುವುದಾಗಿ ತಿಳಿಸಿದರು. ಸುಧಾಕರ್‌ ಅವರನ್ನು ಸಂಪರ್ಕಿಸುವ ಪ್ರಯತ್ನ ರಾತ್ರಿ ಬಹಳ ಹೊತ್ತಿನವರೆಗೆ ನಡೆಯಿತು. 

ಶಾಸಕರಾದ ನಾಗರಾಜ್, ಮುನಿರತ್ನ, ಆನಂದ್‍ಸಿಂಗ್, ರೋಷನ್‍ಬೇಗ್ ಹಾಗೂ ಸುಧಾಕರ್ ಶನಿವಾರ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿರುವುದು ದೋಸ್ತಿ ನಾಯಕರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ. ಶಾಸಕರ ಮನವೊಲಿಸಿ ರಾಜೀನಾಮೆ ಹಿಂದಕ್ಕೆ ಪಡೆಯು
ವಂತೆ ಮಾಡುವುದು ಬಿಟ್ಟರೆ ಬೇರೆ ಮಾರ್ಗ ಅವರಿಗೆ ಉಳಿದಿಲ್ಲ.

ರಾಮಲಿಂಗಾರೆಡ್ಡಿ ಮತ್ತು ನಾಗರಾಜ್‌ ಅವರನ್ನು ಕರೆತಂದರೆ ಉಳಿದವರನ್ನು ಮಣಿಸಬಹುದು ಎಂಬುದು ಕಾಂಗ್ರೆಸ್ ಲೆಕ್ಕಾಚಾರ. ಆದರೆ, ಒಂದು ವೇಳೆ ಈ ಶಾಸಕರು ಕೈಕೊಟ್ಟರೆ, ಬಿಜೆಪಿ ಇನ್ನಷ್ಟು ಶಾಸಕರಿಂದ ರಾಜೀನಾಮೆ ಕೊಡಿಸುವ ಪ್ರತ್ಯಸ್ತ್ರ ಹೂಡಲಿದೆ ಎಂದೂ ಮೂಲಗಳು ಹೇಳಿವೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಸೋಮವಾರವೇ ವಿಶ್ವಾಸ ಮತ ಕೇಳಬೇಕು. ಆ ಬಳಿಕವೇ ಉಳಿದ ಕಲಾಪಗಳನ್ನು ನಡೆಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

ಈ ಮಧ್ಯೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ದೆಹಲಿಗೆ ಬರಲು ಹೇಳಿದ್ದು, ರಾಜ್ಯದ ಬೆಳವಣಿಗೆ ಬಗ್ಗೆ ಮಾಹಿತಿ ಪಡೆದುಕೊಂಡು ಮಾರ್ಗದರ್ಶನ ನೀಡಲಿದ್ದಾರೆ.

ತೀರ್ಪು ಬಳಿಕ ಇನ್ನಷ್ಟು ರಾಜೀನಾಮೆ?

ಕಾಂಗ್ರೆಸ್‌ನ ಇನ್ನೂ ಕೆಲವು ಶಾಸಕರು ಸುಪ್ರೀಂಕೋರ್ಟ್‌ ತೀರ್ಪಿನ ಬಳಿಕ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಸುಮಾರು ಐದರಿಂದ ಆರು ಶಾಸಕರು ರಾಜೀನಾಮೆ ಕೊಡುತ್ತಾರೆ ಇಲ್ಲವೇ, ವಿಶ್ವಾಸ ಮತದ ಸಂದರ್ಭದಲ್ಲಿ ಗೈರಾಗಲಿದ್ದಾರೆ ಎನ್ನಲಾಗಿದೆ. ಈ ಮೂಲಕ ಮೈತ್ರಿ ಸರ್ಕಾರಕ್ಕೆ ಆಘಾತ ನೀಡಲು ಬಿಜೆಪಿ ಸಿದ್ಧತೆ ನಡೆಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಮನವೊಲಿಕೆಗೆ ಕಮಲನಾಥ್‌

ಅತೃಪ್ತ ಕಾಂಗ್ರೆಸ್ ಶಾಸಕರ ಅದರಲ್ಲೂ ಮುಖ್ಯವಾಗಿ ರಾಮಲಿಂಗಾ ರೆಡ್ಡಿ ಅವರ  ಮನವೊಲಿಸಲು ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲನಾಥ್‌ ಮತ್ತು ಪಕ್ಷದ ಹಿರಿಯ ಮುಖಂಡ ಗುಲಾಂ ನಬಿ ಆಜಾದ್ ಅವರು ನಗರಕ್ಕೆ ಬರಲಿದ್ದಾರೆ. ಸೋನಿಯಾ ಗಾಂಧಿ ಅವರ ಸೂಚನೆ ಮೇರೆಗೆ ಈ ಇಬ್ಬರು ನಾಯಕರು ಸರ್ಕಾರವನ್ನು ಉಳಿಸಿಕೊಳ್ಳಲು ಪ್ರಯತ್ನ ನಡೆಸಲಿದ್ದಾರೆ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ನಾಗರಾಜ್‌ ಅವರ ಮನವೊಲಿಕೆಗೆ ಶನಿವಾರ ರಾತ್ರಿ ಸಿದ್ದರಾಮಯ್ಯ ಅವರ ಮನೆಯಲ್ಲಿ ಪ್ರಯತ್ನಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !