ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯ ಸಂಸ್ಥೆ ಚುನಾವಣೆ: ವರ್ಷವಾದರೂ ಸಿಗಲಿಲ್ಲ ಅಧಿಕಾರ ಭಾಗ್ಯ!

Last Updated 13 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ 14 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು ಒಂದು ವರ್ಷವೇ ಕಳೆದಿದೆ. ಆದರೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಇನ್ನೂ ನಡೆದಿಲ್ಲ. ಪರಿಣಾಮ, ಅಲ್ಲಿ ಅಧಿಕಾರಿಗಳದ್ದೇ ದರ್ಬಾರ್‌ ನಡೆಯುತ್ತಿದೆ. ಜನಪ್ರತಿನಿಧಿಗಳಿಗೆ ಅಧಿಕಾರದ ‘ಭಾಗ್ಯ’ ದೊರೆತಿಲ್ಲ.

ಮೈಸೂರು, ಶಿವಮೊಗ್ಗ ಮತ್ತು ತುಮಕೂರು ಮಹಾನಗರ ಪಾಲಿಕೆ ಸೇರಿದಂತೆ 102 ನಗರ ಸ್ಥಳೀಯ ಸಂಸ್ಥೆಗಳಿಗೆ 2018ರ ಆ.31ರಂದು ಚುನಾವಣೆ ನಡೆದಿತ್ತು. ಸೆ. 3ರಂದು ಫಲಿತಾಂಶ ಪ್ರಕಟಿಸಲಾಗಿತ್ತು. ಇದರಲ್ಲಿ ಜಿಲ್ಲೆಯ ಸಂಸ್ಥೆಗಳೂ ಸೇರಿವೆ. ಜನಪ್ರತಿನಿಧಿಗಳಿದ್ದರೂ ಇಲ್ಲದಂತಹ ಸ್ಥಿತಿ ಅಲ್ಲಿದೆ. ಆಡಳಿತದ ಚುಕ್ಕಾಣಿ ಹಿಡಿಯುವ ಅವಕಾಶ ಅವರಿಗೆ ಸಿಗದಿರುವುದೇ ಇದಕ್ಕೆ ಕಾರಣ.

‘ಅಧ್ಯಕ್ಷ–ಉ‍ಪಾಧ್ಯಕ್ಷ ಸ್ಥಾನಕ್ಕೆ ಮೀಸಲು ನಿಗದಿಪಡಿಸಿ ಸೆ.3ರಂದೇ ಹೊರಡಿಸಿದ್ದ ಪಟ್ಟಿಯಲ್ಲಿ ರೊಟೇಷನ್ ಪಾಲಿಸಿಲ್ಲ. ಹೀಗಾಗಿ, ಬಹುತೇಕ ಕಡೆ ಮೀಸಲು ಪುನರಾವರ್ತನೆ ಆಗಿದೆ. ಆದ್ದರಿಂದ ವೇಳಾಪಟ್ಟಿ ಪ್ರಕಟಿಸದಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ ಹಲವು ಮಂದಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಇದನ್ನು ಆಧರಿಸಿ, ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸದಂತೆ ಹೈಕೋರ್ಟ್‌ ಈ ವರ್ಷದ ಜನವರಿಯಲ್ಲಿ ಮಧ್ಯಂತರ ತಡೆ ನೀಡಿದೆ. ಅದಿನ್ನೂ ತೆರವಾಗಿಲ್ಲ. ಇದರಿಂದಾಗಿ ಸ್ಥಳೀಯ ಆಡಳಿತಕ್ಕೆ ‘ಗ್ರಹಣ’ ಹಿಡಿದಿದೆ. ಈ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ಆಡಳಿತಾಧಿಕಾರಿಗಳನ್ನು ನೇಮಿಸಿದೆ.

ಸದಸ್ಯರ ಕೊರಗು:

‘ತಮ್ಮ ನಗರ, ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯ ಮಾಡಬೇಕು, ಜನರಿಗೆ ನೆರವಾಗಬೇಕೆಂದು ಸ್ಪರ್ಧಿಸಿದ್ದೆವು. ಜನರು ಆಯ್ಕೆಯನ್ನೂ ಮಾಡಿದ್ದಾರೆ. ಆದರೆ, ಪ್ರಯೋಜನವೇನು? ಅವರ ಸಮಸ್ಯೆಗಳಿಗೆ ಸ್ಪಂದಿಸುವ ವಿಚಾರದಲ್ಲಿ ನಮಗೆ ಉತ್ತರದಾಯಿತ್ವ ಇಲ್ಲವಾಗಿದೆ. ಅಧ್ಯಕ್ಷರು–ಉಪಾಧ್ಯಕ್ಷರು ಇಲ್ಲದಿರುವುದರಿಂದ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು? ಅಧಿಕಾರಿಗಳು ಮಾತು ಕೇಳುವುದಿಲ್ಲ. ಜನಪ್ರತಿನಿಧಿಗಳಾದರೂ ಗೌರವ ಇಲ್ಲದಂತಾಗಿದೆ. ನಾವು ಹೆಸರಿಗಷ್ಟೇ ಎನ್ನುವಂತಾಗಿದೆ’ ಎಂಬ ಕೊರಗು ಸದಸ್ಯರದು.

‘ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಯದೇ ಇರುವುದರಿಂದ ಜನಪ್ರತಿನಿಧಿಗಳ ಹಕ್ಕು ಕಸಿದುಕೊಂಡಂತಾಗಿದೆ’ ಎಂದು ಚಿಕ್ಕೋಡಿ ನಗರಸಭೆ ಸದಸ್ಯ ಜಗದೀಶ ಕವಟಗಿಮಠ ಬೇಸರ ವ್ಯಕ್ತಪಡಿಸಿದರು.

‘ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೇವೆ. ನಾವು ಆಯ್ಕೆಯಾಗಿದ್ದರೂ ಒಂದು ವರ್ಷ ವ್ಯರ್ಥವಾದಂತಾಗಿದೆ’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಹಿಂದಿನ ಚುನಾವಣೆಯಲ್ಲಿ ಏನಾಗಿತ್ತು?:

2 ನಗರಸಭೆ, 2 ಪಟ್ಟಣ ಪಂಚಾಯ್ತಿ ಹಾಗೂ 10 ಪುರಸಭೆಗಳಿಗೆ ಚುನಾವಣೆ ನಡೆದಿತ್ತು. ಒಟ್ಟು 343 ವಾರ್ಡ್‌ಗಳಲ್ಲಿ ಕಾಂಗ್ರೆಸ್‌ 3ನೇ ಸ್ಥಾನಕ್ಕೆ ಸರಿದಿತ್ತು. ಬಿಜೆಪಿ 104, ಪಕ್ಷೇತರರು 144, ಕಾಂಗ್ರೆಸ್‌ 85 ಹಾಗೂ ಜೆಡಿಎಸ್ 10 ವಾರ್ಡ್‌ಗಳಲ್ಲಿ ಗೆದ್ದಿದೆ.

ಈ 14 ಸ್ಥಳೀಯ ಸಂಸ್ಥೆಗಳಲ್ಲಿ ಹಿಂದೆ, ಕಾಂಗ್ರೆಸ್‌–6, ಕಾಂಗ್ರೆಸ್‌–ಎಂಇಎಸ್‌ ಬೆಂಬಲಿತರು–1, ಬಿಜೆಪಿ–5, ಪಕ್ಷೇತರರು–2 ಸಂಸ್ಥೆಗಳಲ್ಲಿ ಅಧಿಕಾರ ನಡೆಸಿದ್ದರು. ಗೋಕಾಕ ಮತ್ತು ನಿಪ್ಪಾಣಿ ನಗರಸಭೆಯಲ್ಲಿ ಪಕ್ಷಗಳ ಆಧಾರದ ಮೇಲೆ ಚುನಾವಣೆ ನಡೆದಿರಲಿಲ್ಲ. ಗೋಕಾಕದಲ್ಲಿ ರಮೇಶ ಜಾರಕಿಹೊಳಿ ಬೆಂಬಲಿಗರು ಅಧಿಕಾರದಲ್ಲಿದ್ದರು. ನಿಪ್ಪಾಣಿಯಲ್ಲಿ ಪಕ್ಷೇತರರು, ಖಾನಾಪುರ ಪಟ್ಟಣ ಪಂಚಾಯ್ತಿಯಲ್ಲಿ ಕಾಂಗ್ರೆಸ್‌ ಪಕ್ಷವು, ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಬೆಂಬಲಿತ ಸದಸ್ಯರ ನೆರವಿನೊಂದಿಗೆ ಅಧಿಕಾರ ಅನುಭವಿಸಿತ್ತು.

ಈಗ, ಸೆ.3ರಂದು ಪ್ರಕಟಿಸಲಾಗಿದ್ದ ಮೀಸಲಾತಿ ಪ್ರಕಾರವೇ ಚುನಾವಣೆ ನಡೆಯುತ್ತದೆಯೋ, ಇಲ್ಲವೋ ಎನ್ನುವುದು ಸ್ಪಷ್ಟವಾಗಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT