ಮಂಗಳವಾರ, ನವೆಂಬರ್ 19, 2019
26 °C
ಚಿಕ್ಕಬಳ್ಳಾಪುರದಲ್ಲಿ ನಡೆದ ಭೋವಿ (ವಡ್ಡರ) ಸಮಾಜದ ರಾಜ್ಯಮಟ್ಟದ ಸಮಾವೇಶದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ

ಭೋವಿಗಳಿಗೆ ಕಲ್ಲು ಪ್ರದೇಶ ಮೀಸಲು

Published:
Updated:
Prajavani

ಚಿಕ್ಕಬಳ್ಳಾಪುರ: ಕಲ್ಲು ಒಡೆಯುವಲ್ಲಿ ಆಗುತ್ತಿರುವ ಗಣಿ ಮತ್ತು ಅರಣ್ಯ ಇಲಾಖೆಯವರ ಕಿರುಕುಳ ತಪ್ಪಿಸಬೇಕು, ಸರ್ಕಾರದಲ್ಲಿ ಸಚಿವ ಸ್ಥಾನ ನೀಡುವ ಮೂಲಕ ತಮಗೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂಬುದು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ನಗರದಲ್ಲಿ ಭಾನುವಾರ ಭೋವಿ (ವಡ್ಡರ) ಸಮಾಜದವರು ರಾಜ್ಯಮಟ್ಟದ ಸಮಾವೇಶ ನಡೆಸಿದರು.

ಸಮಾವೇಶದಲ್ಲಿಯೇ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕೂಡ ಆಚರಿಸಲಾಯಿತು. ಸಮಾವೇಶವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ‘ಭೋವಿ ಸಮುದಾಯದ ಬೇಡಿಕೆಗಳನ್ನು ಕಾರ್ಯರೂಪಕ್ಕೆ ತರಲು ನನ್ನ ಶಕ್ತಿಮೀರಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ಸಮಾವೇಶದಲ್ಲಿ ಮಾತನಾಡಿದ ಯಡಿಯೂರಪ್ಪ, ‘ಭೋವಿ ಸಮಾಜದವರು ಶ್ರಮಜೀವಿಗಳು. ಅವರಲ್ಲಿ ಶೇ 80ರಷ್ಟು ರಷ್ಟು ಜನರು ಕಲ್ಲು ಒಡೆದು ಜೀವನ ಮಾಡುತ್ತಿದ್ದಾರೆ. ಆದರೆ, ಕಲ್ಲು ಒಡೆಯಲು ಇರುವ ಅಡ್ಡಿ ಆತಂಕಗಳ ಬಗ್ಗೆ ಅನೇಕ ಬಾರಿ ನಾವು ಚರ್ಚೆ ಮಾಡಿದ್ದೇವೆ. ಅರಣ್ಯ ಇಲಾಖೆ ಅಧಿಕಾರಿಗಳ ಕಿರುಕುಳ ತಪ್ಪಿಸಿ, ಕಲ್ಲು ಒಡೆದು ಬದುಕಲು ಬೇಕಾದ ಕೆಲ ಪ್ರದೇಶಗಳನ್ನು ಭೋವಿ ಸಮಾಜಕ್ಕೇ ಮೀಸಲಿಡುವ ವ್ಯವಸ್ಥೆ ಮಾಡುತ್ತೇನೆ’ ಎಂದು ಹೇಳಿದರು.

‘ಭೋವಿ ಗುರುಪೀಠದ ಅಭಿವೃದ್ಧಿಗಾಗಿ ಈಗ ತಾತ್ಕಾಲಿಕವಾಗಿ ₹5 ಕೋಟಿ ಬಿಡುಗಡೆ ಮಾಡುತ್ತೇನೆ. ಈ ಸಮಾಜಕ್ಕೆ ಯಾವುದೇ ರೀತಿಯಲ್ಲಿ ಮೀಸಲಾತಿಯಲ್ಲಿ ಅನ್ಯಾಯವಾದ ರೀತಿ ನೋಡಿಕೊಳ್ಳುವುದು ನನ್ನ ಜವಾಬ್ದಾರಿ’ ಎಂದು ಭರವಸೆ ನೀಡಿದರು.

ಚಿತ್ರದುರ್ಗದ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ‘ನಮಗೆ ಯಾವುದೇ ಭಾಗ್ಯ ಬೇಡ. ಕಲ್ಲು ಒಡೆಯುವ ಸ್ವಾಭಿಮಾನದ ಉದ್ಯೋಗ ಭಾಗ್ಯ ಕೊಡಿ. ನಾವು ಸರ್ಕಾರದ ಬೊಕ್ಕಸ ತುಂಬಿಸುತ್ತೇವೆ. ಕಲ್ಲು ಕ್ವಾರಿಗಳನ್ನು ಕೋಟಿಗಟ್ಟಲೇ ಠೇವಣಿ ಇಟ್ಟು ಇ–ಟೆಂಡರ್‌ನಲ್ಲಿ ಪಡೆಯಲು ಭೋವಿ ಸಮಾಜದವರ ಬಳಿ ಹಣವಿಲ್ಲ. ಆದ್ದರಿಂದ ಸರ್ಕಾರ ನಮ್ಮ ಸಮುದಾಯದವರಿಗೆ ಕಲ್ಲು ಒಡೆಯಲು ಜಾಗ ಮೀಸಲಿಡಬೇಕು’ ಎಂದು ಒತ್ತಾಯಿಸಿದರು.

‘ಭೋವಿ ಅಭಿವೃದ್ಧಿ ನಿಗಮಕ್ಕೆ ವೈಜ್ಞಾನಿಕ ತಳಹದಿ ಮೇಲೆ ಅನುದಾನ ನೀಡಬೇಕು. ಭೋವಿಗಳಿಗೆ ಮರಣ ಶಾಸನವಾದ ಸದಾಶಿವ ಆಯೋಗದ ವರದಿ ಜಾರಿಗೆ ತರಬಾರದು. ಸಿದ್ದರಾಮೇಶ್ವರ ಪ್ರಶಸ್ತಿ ಸ್ಥಾಪಿಸುವ ಮೂಲಕ ನಮ್ಮ ಕುಲ ಗುರುಗಳಿಗೆ ಗೌರವ ತರುವ ಕೆಲಸ ಮಾಡಬೇಕು’ ಎಂದು ಹೇಳಿದರು.

ಶಾಸಕ ಎಂ.ಚಂದ್ರಪ್ಪ ಮಾತನಾಡಿ, ‘ರಾಜಕೀಯವಾಗಿ ನಾನು ಏನೂ ಬೇಡುತ್ತಿಲ್ಲ. ನಿಮ್ಮ ಇಚ್ಛೆಗೆ ಬಿಟ್ಟದ್ದು. ಯಾವುದೇ ಫಲಾಪೇಕ್ಷೆ ಇಲ್ಲದೆ ಬೆಂಬಲ ಕೊಟ್ಟಿದ್ದೇವೆ. ಏನೇ ಮಾಡುವುದಿದ್ದರೂ ನಿಮ್ಮ ವಿವೇಚನೆಗೆ ಬಿಟ್ಟಿರುವೆ. ಮುಂದೆಯೂ ನಮ್ಮ ಸಮಾಜ ತಮಗೆ ಹೆಗಲು ಕೊಟ್ಟು ಗಟ್ಟಿಯಾಗಿ ನಿಂತು ನೀವು ಹೇಳಿದ ಕೆಲಸ ಮಾಡಿ ಕೊಡುತ್ತೇವೆ. ನೀವು ಕಾಲಲ್ಲಿ ತೋರಿಸಿದ್ದು, ತಲೆ ಮೇಲೆ ಹೊತ್ತು ಕೆಲಸ ಮಾಡುವ ಭರವಸೆ ನೀಡುತ್ತೇನೆ’ ಎಂದರು.

**

ಸದ್ಯ ಅತಿವೃಷ್ಟಿಯ ಸಂಕಷ್ಟದಲ್ಲಿ ಸಿಲುಕಿ ಒದ್ದಾಡುತ್ತಿರುವೆ. ಮುಂದಿನ ಬಜೆಟ್‌ನಲ್ಲಿ ಡಿಸೆಂಬರ್ ನಂತರ ಭೋವಿ ಅಭಿವೃದ್ಧಿ ನಿಗಮಕ್ಕೆ ಹೆಚ್ಚು ಅನುದಾನ ತೆಗೆದಿಡುತ್ತೇನೆ.
-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

ಪ್ರತಿಕ್ರಿಯಿಸಿ (+)