ಬಸ್ತವಾಡ: ಕಲ್ಲುತೂರಾಟ, ಲಘು ಲಾರಿಪ‍್ರಹಾರ

ಶುಕ್ರವಾರ, ಮೇ 24, 2019
29 °C
ಭಗವಾಧ್ವಜ ಕಟ್ಟುವ ವಿಚಾರಕ್ಕೆ ಘರ್ಷಣೆ

ಬಸ್ತವಾಡ: ಕಲ್ಲುತೂರಾಟ, ಲಘು ಲಾರಿಪ‍್ರಹಾರ

Published:
Updated:
Prajavani

ಬೆಳಗಾವಿ: ತಾಲ್ಲೂಕಿನ ಹಲಗಾ ಸಮೀಪದ ಬಸ್ತವಾಡ ಗ್ರಾಮದಲ್ಲಿ ಬುಧವಾರ ಸಂಜೆ ಶ್ರೀಲಕ್ಷ್ಮೀದೇವಿ ಜಾತ್ರೆಯ ರಥೋತ್ಸವ ವೇಳೆ ಧ್ವಜ ಕಟ್ಟುವ ವಿಷಯಕ್ಕೆ ಸಂಬಂಧಿಸಿದಂತೆ ಮರಾಠಾ ಹಾಗೂ ಜೈನ (ಕನ್ನಡ ಭಾಷಿಕರು) ಸಮುದಾಯದ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿ ಕಲ್ಲು ತೂರಾಟ ನಡೆದಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿಪ್ರಹಾರ ನಡೆಸಿದ್ದಾರೆ.

‘ಜಾತ್ರೆ ಅಂಗವಾಗಿ ಗ್ರಾಮದ ಬಸ್ ನಿಲ್ದಾಣದ ಗದ್ದುಗೆ ಬಳಿ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಕೆಲವರು ಧ್ವಜ ಹಾಕಲು ಬಂದಿದ್ದಾರೆ. ಇದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಗ ಅವರ ನಡುವೆ ಮಾತಿನ ಚಕಮಕಿ ನಡೆದಿದೆ. ಯುವಕರಿಂದ ಕೆಲವರು ಧ್ವಜ ಕಸಿದುಕೊಂಡಿದ್ದಾರೆ. ಆಗ ಎರಡೂ ಗುಂಪಿನವರು ಕೈ–ಕೈ ಮಿಲಾಯಿಸಿದ್ದಾರೆ. ಈ ಘರ್ಷಣೆ ವೇಳೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು’ ಎಂದು ತಿಳಿದುಬಂದಿದೆ.

‘ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ರಥೋತ್ಸವ ಸಂದರ್ಭದಲ್ಲೇ ಗಲಾಟೆ ನಡೆದಿದ್ದರಿಂದ, ಅವರೆಲ್ಲರೂ ದಿಕ್ಕಾಪಾಲಾಗಿ ಓಡಿದ್ದಾರೆ. ಕೆಲವರಿಗೆ ಕಲ್ಲೇಟು ಬಿದ್ದಿದ್ದು, ಪೊಲೀಸ್ ಕಾನ್‌ಸ್ಟೆಬಲ್‌ ಸೇರಿದಂತೆ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ’ ಎಂದು ಗೊತ್ತಾಗಿದೆ. ಪೊಲೀಸರು ಲಘು ಲಾಠಿಪ್ರಹಾರ ನಡೆಸಿ ಗುಂಪು ಚದುರಿಸಿದರು.

ಬೆಳಿಗ್ಗೆ, ಸಾರ್ವಜನಿಕ ಸ್ಥಳದಲ್ಲಿ ಪ್ರಾಣಿ ಬಲಿ ನೀಡುವುದಕ್ಕೆ ಸಂಬಂಧಿಸಿದಂತೆ ಎರಡೂ ಸಮುದಾಯದ ಮುಖಂಡರ ನಡುವೆ ‌ಪರ–ವಿರೋಧ ಚರ್ಚೆಗಳು ನಡೆದಿದ್ದವು. ‘ಮೊದಲಿನಿಂದಲೂ ಈ ಸಂಪ್ರದಾಯ ಮುಂದುವರಿಸಿಕೊಂಡು ಬರಲಾಗುತ್ತಿದೆ. ಈಗ ತಕರಾರು ಮಾಡುವುದು ಸರಿಯಲ್ಲ’ ಎಂದು ಮರಾಠಾ ಸಮುದಾಯದವರು ವಾದ ಮಂಡಿಸಿದ್ದಾರೆ. ಆಗಲೂ ಮಾತಿನ ಚಕಮಕಿ ನಡೆದಿತ್ತು. ಸಂಜೆ ಧ್ವಜ ಕಟ್ಟುವ ವಿಚಾರವಾಗಿ ಘರ್ಷಣೆ ನಡೆದಿದೆ’ ಎಂದು ಸ್ಥಳೀಯರು ಮಾಹಿತಿ ನೀಡಿದರು.

ಪೊಲೀಸ್ ಅಧಿಕಾರಿಗಳು ಎರಡೂ ಸಮುದಾಯದ ಹಿರಿಯರೊಂದಿಗೆ ಮಾತುಕತೆ ನಡೆಸಿ, ಜಾತ್ರೆ ಮುಂದುವರಿಸಲು ಅನುವು ಮಾಡಿಕೊಟ್ಟರು.

‘ಗ್ರಾಮದಲ್ಲಿ ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಡಿಸಿಪಿ, ಎಸಿಪಿ ಕೂಡ ನಿಗಾ ವಹಿಸಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್‌ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !