ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಲ್ಲೋ.. ನಿಲ್ಲೋ.. ಮಳೆರಾಯ

ಮನೆ, ಅಪಾರ್ಟ್‌ಮೆಂಟ್‌ಗಳಿಗೆ ನುಗ್ಗಿದ ನೀರು
Last Updated 9 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ರಾತ್ರಿ ಮಲಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೆವು. ಮಳೆ ಜೋರಾಗಿದ್ದರಿಂದ ಮನೆ ಪಕ್ಕದಲ್ಲಿಯೇ ಹರಿಯುವ ಉಣಕಲ್‌ ಕೋಡಿ ನೀರು ಹೆಚ್ಚಾಗಿದೆಯೇ ಹೊರಗೆ ಬಂದು ನೋಡಿದೆ. ಮನೆಯ ಕಾಂಪೌಂಡ್‌ ಸುತ್ತುವರೆದಿತ್ತು. ನೋಡು ನೋಡುತ್ತಿದ್ದೆಯೇ ಮನೆಯೊಳಗೆ ನುಗ್ಗಿತು. ಬೆಳಗಾಗುವವರೆಗೂ ನಿದ್ದೆ ಮಾಡಿಲ್ಲ’ ಎಂದು ದೇವಿನಗರದ ಶ್ರೀಕಾಂತ ನೀರಿನಿಂದಾದ ಸಂಕಷ್ಟ ಬಿಚ್ಚಿಟ್ಟರು.

‘ಎರಡು ದಿನಗಳ ಹಿಂದೆಯೇ ಪಕ್ಕದ ಮನೆಗೆ ನೀರು ಬಂದಿತ್ತು. ನಂತರ ಕಡಿಮೆಯಾಗಿತ್ತು. ರಾತ್ರಿ ಹೆಚ್ಚಾಗಿ ಹತ್ತಾರು ಮನೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿದ್ದ ಪಾತ್ರೆ, ದಿನಸಿಗಳೆಲ್ಲ ನೀರು ಪಾಲಾಗಿವೆ. ಬದುಕು ಬೀದಿಗೆ ಬಂದಿದೆ. ಮಳೆ ಬಂದರೆ ಹೇಗೆ ಎಂಬ ಚಿಂತೆ ಕಾಡುತ್ತಿದೆ’ ಎಂದು ಅಳಲು ತೋಡಿಕೊಂಡರು.

‘ಮಧ್ಯರಾತ್ರಿ ಏಕಾಏಕಿ ಪಕ್ಕದ ಮನೆಯವರು ಬಂದು ಬಾಗಿಲು ಬಡಿದರು. ಮನೆಗಳಿಗೆ ನೀರು ನುಗ್ಗುತ್ತಿದೆ. ಎಲ್ಲರೂ ಹೊರ ನಡೆಯಿರಿ ಎಂದರು. ಹಾಕಿಕೊಂಡ ಬಟ್ಟೆಯಲ್ಲಿಯೇ ಹೊರಗೆ ಬಂದೆವು. ಮನೆಯಲ್ಲಿ ನಾಲ್ಕು ಅಡಿಯವರೆಗೆ ನೀರು ನುಗ್ಗಿದೆ. ಎಲ್ಲವೂ ನೀರು ಪಾಲಾಗಿದೆ’ ಎಂದು ಪಾಂಡುರಂಗ ಕಾಲೊನಿಯ ಪುಂಡಲೀಕ ಹಾಗೂ ಅರ್ಜುನಸಾ ಬಾಂಡಗೆ ‘ಪ್ರಜಾವಾಣಿ’ ಪ್ರತಿನಿಧಿಗೆ ವಿವರಿಸಿದರು.

‘ನೂರಾರು ಮನೆಗಳಿಗೆ ನೀರು ನುಗ್ಗಿದೆ. ಹತ್ತು ವರ್ಷಗಳಲ್ಲಿ ಇಷ್ಟೊಂದು ನೀರು ಯಾವತ್ತೂ ಬಂದಿರಲಿಲ್ಲ. ಮೂರು ದಿನಗಳಿಂದ ಮಳೆ ಸುರಿಯುತ್ತಿದೆ. ಮಳೆ ನಿಂತರೆ ಸಾಕಪ್ಪಾ ಅನಿಸಿದೆ’ ಎಂದು ಸದರಸೋಫಾದ ಮಹಮ್ಮದ್‌ ಶಫಿ ಹೇಳಿದರು.

‘ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಇಲ್ಲಿರುವುದು ಅಪಾಯ. ಆದ್ದರಿಂದ ಎರಡು ದಿನ ಮನೆ ಖಾಲಿ ಮಾಡುವಂತೆ ಪೊಲೀಸರು ತಿಳಿಸಿದ್ದಾರೆ. ಮಧ್ಯರಾತ್ರಿ ಏಕಾಏಕಿ ತಿಳಿಸಿದರೆ ಎಲ್ಲಿಗೆ ಹೋಗಬೇಕು. ಇಲ್ಲಿಯೇ ಒರುವ ಸಂಬಂಧಿಕರ ಮನೆಗೆ ಬಟ್ಟೆಗಳೊಂದಿಗೆ ಹೊರಟಿದ್ದೇವೆ’ ಎಂದು ಲಿಂಗರಾಜನಗರದ ಆರ್ಚಡ್‌ ಅಪಾರ್ಟ್‌ಮೆಂಟ್‌ನ ಅಭಿಷೇಕ ತಾವೆದುರಿಸಿದ ಆತಂಕ ವ್ಯಕ್ತಪಡಿಸಿದರು.

ಕಿತ್ತು ಹೋದ ರಸ್ತೆಗಳು, ತುಂಬಿ ಹರಿಯುತ್ತಿರುವ ಹಳ್ಳ–ಕೊಳ್ಳಗಳು, ಮನೆ, ಅಂಗಡಿಗಳಿಗೆ ನುಗ್ಗುತ್ತಿರುವ ನೀರಿನಿಂದಾಗಿ ‘ಮಳೆ ನಿಲ್ಲಲಿ’ ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT