ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಂಥಾಲಯಗಳಿಗೆ ಡಿಜಿಟಲ್ ಸ್ಪರ್ಶ

ಗ್ರಂಥಾಲಯ ಇಲಾಖೆಯಿಂದ ಯೋಜನೆ; ಮೇಲ್ದರ್ಜೆಗೇರಿಸಲು ನಿರ್ಧಾರ
Last Updated 31 ಮಾರ್ಚ್ 2019, 23:54 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲಾ, ನಗರ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿರುವ ಸಾರ್ವಜನಿಕ ಗ್ರಂಥಾಲಯಗಳನ್ನು ‘ಡಿಜಿಟಲ್‌ ಗ್ರಂಥಾಲಯ’ಗಳನ್ನಾಗಿ ಮೇಲ್ದರ್ಜೆಗೇರಿಸಲು ಇಲಾಖೆ ಯೋಜನೆ ರೂಪಿಸಿದೆ.

ಇದರೊಂದಿಗೆ, ಸರ್ಕಾರಿ ಪ್ರೌಢಶಾಲೆಗಳು ಹಾಗೂ ‍ಪಿಯು ಕಾಲೇಜುಗಳಿಗೆ ಅಂತರ್ಜಾಲದ ಮೂಲಕ (ಕ್ಲೌಡ್) ಸಂಪರ್ಕ ಕಲ್ಪಿಸಿ, 10 ಲಕ್ಷ ವಿದ್ಯಾರ್ಥಿಗಳಿಗೆ ಡಿಜಿಟಲ್‌ ಗ್ರಂಥಾಲಯದ ಸೌಲಭ್ಯ ಒದಗಿಸಲೂ ಸಿದ್ಧತೆ ನಡೆದಿದೆ.

ಇಲಾಖೆ ವ್ಯಾಪ್ತಿಯಲ್ಲಿ 7ಸಾವಿರ ಗ್ರಂಥಾಲಯಗಳಿವೆ. ಈ ಪೈಕಿ, ಮೊದಲ ಹಂತದಲ್ಲಿ 30 ಜಿಲ್ಲಾ ಗ್ರಂಥಾಲಯಗಳನ್ನು, 27 ನಗರ ಹಾಗೂ 176 ತಾಲ್ಲೂಕು ಗ್ರಂಥಾಲಯಗಳನ್ನು ಮೇಲ್ದರ್ಜೆಗೇರಿಸಲು ಯೋಜಿಸಲಾಗಿದೆ. ‘ಡಿಜಿಟಲ್‌ ರೈಟ್ ಮ್ಯಾನೇಜ್‌ಮೆಂಟ್‌’ (ಡಿಆರ್‌ಎಂ) ತಂತ್ರಾಂಶದ ಮೂಲಕ ಲಭ್ಯವಿರುವ ಪುಸ್ತಕಗಳನ್ನು ಆನ್‌ಲೈನ್‌ನಲ್ಲಿ ಓದುವುದಕ್ಕೆ ಅವಕಾಶ ಮಾಡಿಕೊಡಲಾಗುವುದು. ಓದುಗರು, ಎಲ್ಲಿ ಬೇಕಾದರೂ ಕುಳಿತು ತಮಗೆ ಬೇಕಾದ ವಿಷಯದ ಕುರಿತ ಪುಸ್ತಕಗಳನ್ನು ಓದುವುದಕ್ಕೆ ಈ ಮೂಲಕ ಅವಕಾಶ ಕಲ್ಪಿಸಲಾಗುತ್ತಿದೆ.

ಸಾಫ್ಟ್‌ ಕಾಪಿ: ಅತ್ಯಾಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಗ್ರಂಥಾಲಯ ವ್ಯವಸ್ಥೆಯನ್ನು ಅಪ್‌ಡೇಟ್ ಮಾಡಲಾಗುತ್ತಿದೆ. ಪ್ರಸ್ತುತ ವ್ಯವಸ್ಥೆಯಲ್ಲಿ, ಗ್ರಂಥಾಲಯದ ಸದಸ್ಯತ್ವ ಪಡೆದವರು ಪುಸ್ತಕಗಳನ್ನು 15 ದಿನಗಳ ಮಟ್ಟಿಗೆ ಎರವಲು ತೆಗೆದುಕೊಳ್ಳಬಹುದಾಗಿದೆ. ಡಿಜಿಟಲ್ ಗ್ರಂಥಾಲಯವಾಗಿ ಮೇಲ್ದರ್ಜೆಗೇರಿದ ನಂತರ ಸಾಮಗ್ರಿಯನ್ನು ಡಿಆರ್‌ಎಂ ತಂತ್ರಾಂಶದ ಮೂಲಕ ಒದಗಿಸಲು ಸಿದ್ಧತೆ ನಡೆದಿದೆ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶಕುಮಾರ ಎಸ್. ಹೊಸಮನಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸದಸ್ಯತ್ವ ಪಡೆದವರಿಗೆ ಯೂಸರ್ ಐಡಿ ಹಾಗೂ ಪಾಸ್‌ವರ್ಡ್‌ ನೀಡಲಾಗುವುದು. ಅದನ್ನು ಬಳಸಿ ಡಿಜಿಟಲ್ ಲೈಬ್ರರಿಯ ಸೌಲಭ್ಯ ಪಡೆಯಬಹುದು. ಇಲ್ಲಿ ಅಳವಡಿಸಿದ ಪುಸ್ತಕಗಳು ಅಥವಾ ಸಾಮಗ್ರಿಯನ್ನು ಸೇವ್ ಮಾಡಿಕೊಳ್ಳಲು, ಡಿಲೀಟ್ ಮಾಡಲು, ಪ್ರಿಂಟ್‌ ತೆಗೆದುಕೊಳ್ಳಲು ಅಥವಾ ಕಾಪಿ ಮಾಡಿಕೊಳ್ಳಲು ಅವಕಾಶ ಇರುವುದಿಲ್ಲ. ಇಂಟರ್ನೆಟ್‌ ವ್ಯವಸ್ಥೆ ಇರುವ ಮೊಬೈಲ್‌ನಲ್ಲೂ ಈ ಸಾಫ್ಟ್‌ ಕಾಪಿಯ ಪುಟಗಳು ತೆರೆದುಕೊಳ್ಳುವಂತೆ ವ್ಯವಸ್ಥೆ ಮಾಡಲಾಗುವುದು. 15 ದಿನಗಳ ನಂತರ ಹೊಸ ಪಾಸ್‌ವರ್ಡ್‌ ಪಡೆದುಕೊಳ್ಳಬೇಕಾಗುತ್ತದೆ’ ಎಂದು ಅವರು ಮಾಹಿತಿ ನೀಡಿದರು.

ಸ್ಪರ್ಧಾತ್ಮಕ ಪರೀಕ್ಷಾ ಸಾಮಗ್ರಿ: ‘ಈ ಗ್ರಂಥಾಲಯಗಳಲ್ಲಿ ‘ಡಿಜಿಟಲ್ ಫ್ರೀ ತಂತ್ರಾಂಶ’ ಅಳವಡಿಸಲಾಗುವುದು. ಇದರಲ್ಲಿ ಕನ್ನಡ, ಇಂಗ್ಲಿಷ್ ಮೊದಲಾದ ಭಾಷೆಗಳ ದಿನಪತ್ರಿಕೆಗಳು ಹಾಗೂ ನಿಯತಕಾಲಿಕೆಗಳನ್ನು (ಇ–ಪೇಪರ್‌) ನೋಡಬಹುದು; ಓದಬಹುದು. ಅಲ್ಲದೇ, ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವವರಿಗೆ ಅನುಕೂಲವಾಗುವ ಅಪಾರ ಪ್ರಮಾಣದ ಅಧ್ಯಯನ ಸಾಮಗ್ರಿಯೂ ಇರಲಿದೆ. ಹಿಂದಿನ ಮೂರು ವರ್ಷಗಳ ಸಿಇಟಿ, ನೀಟ್‌ ಪರೀಕ್ಷೆಗಳಿಗೆ ಸಂಬಂಧಿಸಿದ ಪಠ್ಯಗಳೂ ಲಭ್ಯವಿರುತ್ತವೆ’ ಎನ್ನುತ್ತಾರೆ ಅವರು.

ರಾಜ್ಯ ಹಾಗೂ ಕೇಂದ್ರ ಪಠ್ಯಕ್ರಮದ 1ರಿಂದ 12ನೇ ತರಗತಿವರೆಗಿನ ಪಠ್ಯಪುಸ್ತಕಗಳ ಸಾಫ್ಟ್‌ ಕಾಪಿಗಳು, ವಿದೇಶಗಳಿಗೆ ವ್ಯಾಸಂಗಕ್ಕೆ ಹೋಗುವವರಿಗೆ ನೆರವಾಗಲು ಅಲ್ಲಿ ಲಭ್ಯವಿರುವ ಶಿಕ್ಷಣ ಸಂಸ್ಥೆಗಳು ಹಾಗೂ ದೊರೆಯುವ ವಿದ್ಯಾರ್ಥಿ ವೇತನದ ಮಾಹಿತಿಯನ್ನೂ ನೀಡಲಾಗುವುದು. ಸಂಬಂಧಿಸಿದ ಜಾಲತಾಣಗಳ ಲಿಂಕ್‌ಗಳನ್ನು ಹಾಕಲಾಗುವುದು ಎಂದು ಹೊಸಮನಿ ಹೇಳಿದರು.

‘ಎಲ್ಲ ಪ್ರಕಾರದ ಸಾಹಿತ್ಯವನ್ನೂ ಡಿಜಿಟಲ್ ರೂಪದಲ್ಲಿ ಅಳವಡಿಸಲಾಗುವುದು. ಕಾಪಿರೈಟ್ ಕಾಯ್ದೆ ಪ್ರಕಾರ ಸಾಫ್ಟ್‌ ಕಾಪಿ ಒದಗಿಸುವ ಎಲ್ಲ ಲೇಖಕರು ಹಾಗೂ ಪ್ರಕಾಶಕರ ಪುಸ್ತಕಗಳು ಲಭ್ಯವಿರಲಿವೆ’ ಎಂದು ತಿಳಿಸಿದರು.

**

ಗ್ರಂಥಾಲಯ ಮೇಲ್ದರ್ಜೆಗೇರಿಸಲು ಹಾಗೂ ಶಾಲೆಗಳಿಗೆ ಡಿಜಿಟಲ್ ಲೈಬ್ರರಿ ಸೌಲಭ್ಯ ಒದಗಿಸಲು ಟೆಂಡರ್‌ ಕರೆಯಲಾಗಿದೆ. ಚುನಾವಣೆ ನಂತರ ಪ್ರಕ್ರಿಯೆ ನಡೆಸಲಾಗುವುದು.
–ಸತೀಶಕುಮಾರ ಹೊಸಮನಿ, ನಿರ್ದೇಶಕ, ಸಾರ್ವಜನಿಕ ಗ್ರಂಥಾಲಯ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT